ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆ; ಶಸ್ತ್ರಾಸ್ತ್ರಗಳು ನಾಪತ್ತೆ, ಉಗ್ರರ ಕೈವಾಡ ಶಂಕೆ
- by Suddi Loka
- November 12, 2026
- 78 Views
ಕಿಶ್ತ್ವಾರ್: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ದೂರದ ಡಚ್ಚನ್-ಮಾರ್ವಾ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ (SPO) ಶವಗಳು ಗುರುವಾರ ಪತ್ತೆಯಾಗಿವೆ. ಅವರ ಬಳಿಯಿದ್ದ ಸೇವಾ ಶಸ್ತ್ರಾಸ್ತ್ರಗಳು ನಾಪತ್ತೆಯಾಗಿರುವುದು ಉಗ್ರರ ಕೈವಾಡದ ಶಂಕೆ ಮೂಡಿಸಿದೆ.
ಮೃತರನ್ನು ದಚ್ಚನ್ ಪ್ರದೇಶದ ಕಿಯಾರ್ ಗ್ರಾಮದ ನಿವಾಸಿಗಳಾದ ರಶ್ಪಾಲ್ ಕುಮಾರ್ (40) ಮತ್ತು ಬಾಬಿ ಚಂದ್ (54) ಎಂದು ಗುರುತಿಸಲಾಗಿದೆ. ಇಬ್ಬರೂ ಕಿಶ್ತ್ವಾರ್ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (SOG)ಕ್ಕೆ ಸೇರಿದವರಾಗಿದ್ದು, ಕಿಯಾರ್ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಬುಧವಾರ ಕಿಯಾರ್ನಲ್ಲಿರುವ ಶಿಬಿರದಿಂದ ಮಾರ್ವಾ ಪ್ರದೇಶದ ಧೇರ್ನಾ ವಲಯದಲ್ಲಿರುವ 17ನೇ ರಾಷ್ಟ್ರೀಯ ರೈಫಲ್ಸ್ನ ತಾತ್ಕಾಲಿಕ ಕಾರ್ಯಾಚರಣೆ ನೆಲೆಗೆ ತೆರಳುತ್ತಿದ್ದ ವೇಳೆ ಇಬ್ಬರೂ ನಾಪತ್ತೆಯಾಗಿದ್ದರು. ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಹಲವು ಗಂಟೆಗಳ ಹುಡುಕಾಟದ ಬಳಿಕ ಧೇರ್ನಾ ಪೋಸ್ಟ್ನಿಂದ ಇಬ್ಬರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಬ್ಬರ ತಲೆಗೆ ಗುಂಡು ತಗುಲಿದ್ದರೆ, ಮತ್ತೊಬ್ಬರ ಬೆನ್ನಿನ ಭಾಗದಲ್ಲಿ ಗುಂಡಿನ ಗಾಯ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರ ಬಳಿಯಿದ್ದ ಸೇವಾ ಶಸ್ತ್ರಾಸ್ತ್ರಗಳು ನಾಪತ್ತೆಯಾಗಿದ್ದು, ಈ ಕೃತ್ಯದ ಹಿಂದೆ ಉಗ್ರರ ಕೈವಾಡವಿರುವ ಸಾಧ್ಯತೆಯನ್ನು ಅಧಿಕಾರಿಗಳು ಶಂಕಿಸಿದ್ದಾರೆ. ಘಟನೆಯ ಕುರಿತು ಭದ್ರತಾ ಪಡೆಗಳು ತನಿಖೆ ಮುಂದುವರಿಸಿದ್ದು, ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.


Comments (0)