‘Belonging: A Journey of Love’ ಕೇವಲ ಪುಸ್ತಕವಲ್ಲ; ತ್ಯಾಗ, ತಾಳ್ಮೆ, ಸಂಘರ್ಷ ಮತ್ತು ಅಚಲ ಬದ್ಧತೆಯ ಬದುಕಿನ ಪುಟಗಳು; ಬಿ.ಕೆ. ಹರಿಪ್ರಸಾದ್
- by Suddi Loka
- November 11, 2026
- 3 Views
ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘Belonging: A Journey of Love’ ಕೈ ಸೇರಿರುವುದು ವಿಶೇಷ ಸಂತಸ ತಂದಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ಈ ಕೃತಿ ಕೇವಲ ಪುಸ್ತಕವಲ್ಲ; ತ್ಯಾಗ, ತಾಳ್ಮೆ, ಸಂಘರ್ಷ ಮತ್ತು ಅಚಲ ಬದ್ಧತೆಯ ಬದುಕಿನ ಪುಟಗಳಾಗಿವೆ ಎಂದು ಅವರು ಬಣ್ಣಿಸಿದ್ದಾರೆ.
ಭಾರತದ ರಾಜಕೀಯ ಇತಿಹಾಸದಲ್ಲಿ ಸೋನಿಯಾ ಗಾಂಧಿ ಅವರ ಬದುಕು ವಿಶಿಷ್ಟ ಅಧ್ಯಾಯವಾಗಿದೆ. ವೈಯಕ್ತಿಕ ಬದುಕಿನ ನೋವುಗಳನ್ನು ಮೌನವಾಗಿ ಸಹಿಸಿಕೊಂಡು, ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿ, ಅಧಿಕಾರಕ್ಕಿಂತ ಆದರ್ಶಗಳಿಗೆ ಹೆಚ್ಚಿನ ಮಹತ್ವ ನೀಡಿದ ಅವರ ರಾಜಕೀಯ ಪಯಣ ನಿಜಕ್ಕೂ ಸ್ಫೂರ್ತಿದಾಯಕ ಎಂದು ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಅಪಾರ ನೋವು, ನಿಂದನೆ ಮತ್ತು ರಾಜಕೀಯ ಸವಾಲುಗಳ ನಡುವೆಯೂ ತಮ್ಮ ನಂಬಿಕೆ, ಸೈದ್ಧಾಂತಿಕ ಬದ್ಧತೆ ಹಾಗೂ ಘನತೆಯನ್ನು ಕಳೆದುಕೊಳ್ಳದೆ ಮುನ್ನಡೆದ ಅವರ ವ್ಯಕ್ತಿತ್ವವನ್ನು ಹತ್ತಿರದಿಂದ ಬಲ್ಲೆ ಎಂದು ಅವರು ತಿಳಿಸಿದ್ದಾರೆ.
ಕೆಲವು ಬದುಕುಗಳು ಕೇವಲ ಇತಿಹಾಸದ ಭಾಗವಾಗುವುದಿಲ್ಲ; ಅವು ಇತಿಹಾಸಕ್ಕೆ ದಿಕ್ಕು ತೋರಿಸುತ್ತವೆ. ಸೋನಿಯಾ ಗಾಂಧಿ ಅವರ ಬದುಕು ಅಂತಹ ಅಪರೂಪದ ಉದಾಹರಣೆ ಎಂದು ಬಣ್ಣಿಸಿದ್ದಾರೆ.
ಈ ಆತ್ಮಚರಿತ್ರೆಯ ಮೂಲಕ ಒಬ್ಬ ನಾಯಕಿಯ ಬದುಕಿನ ಜೊತೆಗೆ ಒಂದು ಕುಟುಂಬದ ತ್ಯಾಗ, ಕಾಂಗ್ರೆಸ್ ಪಕ್ಷದ ಸಂಘರ್ಷ ಹಾಗೂ ಭಾರತದ ಪ್ರಜಾಪ್ರಭುತ್ವದ ಹಲವು ಮಹತ್ವದ ಘಟ್ಟಗಳನ್ನು ಅರಿಯುವ ನಿರೀಕ್ಷೆಯಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.


Comments (0)