ಕತಾರ್‌ನಲ್ಲಿ ಅದ್ಧೂರಿ ‘ಕರುನಾಡ ವೈಭವ-2026’; ಉಮಾಶ್ರೀಗೆ ‘ಕತಾರ್ ಕನ್ನಡ ಸಮ್ಮಾನ್’ ಪ್ರಶಸ್ತಿ ಪ್ರದಾನ

ದೋಹಾ: ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಸಂಯೋಜಿತ ಸಂಸ್ಥೆಯಾದ ಕರ್ನಾಟಕ ಸಂಘ ಕತಾರ್ (ಕೆಎಸ್‌ಕ್ಯೂ) ವತಿಯಿಂದ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ‘ಕರುನಾಡ ವೈಭವ-2026’ ಸಾಂಸ್ಕೃತಿಕ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಆಲ್ ವಕ್ರಾ ಸಮೀಪದ ಡಿಪಿಎಸ್-ಎಂಐಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕತಾರ್‌ನ ಕನ್ನಡಿಗರು ಉತ್ಸಾಹದಿಂದ ಪಾಲ್ಗೊಂಡರು.

ಭಾರತದ ಕತಾರ್ ರಾಯಭಾರಿ ಡಾ. ಕೆ. ಶ್ರೀಕರ್ ರೆಡ್ಡಿ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಅಶ್ವನಿ ಕುಮಾರ್, ಐಸಿಬಿಎಫ್ ಸಂಯೋಜಕ ಹರೀಶ್ ಪಾಂಡೆ, ಕತಾರ್ ಸಂಸ್ಕೃತಿ ಸಚಿವಾಲಯದ ಮ್ಯೂಸಿಕ್ ಅಫೇರ್ಸ್ ಸೆಂಟರ್ ನಿರ್ದೇಶಕ ಖಾಲಿದ್ ಅಲ್ ಸಾಲೇಮ್, ಐಸಿಸಿ ಅಧ್ಯಕ್ಷ ಎ.ಪಿ. ಮಣಿಕಂಠನ್, ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಕೆಎಸ್‌ಕ್ಯೂ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಸ್ವಾಗತಿಸಿ ಅಧ್ಯಕ್ಷೀಯ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಹೊಸದುರ್ಗ ವಾರ್ಷಿಕ ವರದಿ ಮಂಡಿಸಿದರು. ಸ್ಥಳೀಯ ಕನ್ನಡಿಗರ ಲೇಖನ, ಕವನ, ಚಿತ್ರಕಲೆ ಹಾಗೂ ಸಾಧನೆಗಳನ್ನು ಒಳಗೊಂಡ ಸಂಘದ ವಾರ್ಷಿಕ ಸ್ಮರಣ ಸಂಚಿಕೆ ‘ಶ್ರೀಗಂಧ’ವನ್ನು ಮುಖ್ಯ ಸಂಪಾದಕ ಕಿಶೋರ್ ವಿ. ಮತ್ತು ಸಂಪಾದಕೀಯ ತಂಡ ಬಿಡುಗಡೆಗೊಳಿಸಿದರು.

ಹಿರಿಯ ನಟಿ, ಮಾಜಿ ಸಚಿವೆ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿ ಉಮಾಶ್ರೀ ಅವರಿಗೆ ಪ್ರತಿಷ್ಠಿತ ‘ಕತಾರ್ ಕನ್ನಡ ಸಮ್ಮಾನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಪಾಧ್ಯಕ್ಷ ಅನಿಲ್ ಭಾಸಗಿ ವಂದನಾರ್ಪಣೆ ಮಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಉಪನ್ಯಾಸ ನೀಡಿದರು. ‘ಕಾಮಿಡಿ ಕಿಲಾಡಿಗಳು’ ಕಲಾವಿದರಾದ ರಾಘವೇಂದ್ರ (ರಾಗಿಣಿ), ಜಗ್ಗಪ್ಪ ಮತ್ತು ಸುಶ್ಮಿತಾ ಅವರ ಹಾಸ್ಯ ಪ್ರದರ್ಶನ, ‘ಸ ರಿ ಗ ಮ ಪ’ ಗಾಯಕರಾದ ಮೆಹಬೂಬ್ ಸಾಬ್ ಹಾಗೂ ರೇವಣಸಿದ್ಧ ಫುಲಾರಿ ಅವರ ಗಾಯನ ಪ್ರೇಕ್ಷಕರನ್ನು ರಂಜಿಸಿತು. ನಿರೂಪಕಿ ಪ್ರಣೀತಾ ತಿಮ್ಮಪ್ಪ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಮಕ್ಕಳು ಮತ್ತು ಕರ್ನಾಟಕದ ಸಹೋದರ ಸಂಸ್ಥೆಗಳ ಪ್ರತಿನಿಧಿಗಳು ನೃತ್ಯ ಪ್ರದರ್ಶನ ನೀಡಿದರು.

ಐಸಿಸಿ ಸಲಹಾ ಮಂಡಳಿ ಅಧ್ಯಕ್ಷ ಪಿ.ಎನ್. ಬಾಬುರಾಜನ್, ಐಸಿಬಿಎಫ್ ಪ್ರಧಾನ ಕಾರ್ಯದರ್ಶಿ ಹಾಗೂ ಕೆಎಸ್‌ಕ್ಯೂ ಮಾಜಿ ಅಧ್ಯಕ್ಷ ದೀಪಕ್ ಶೆಟ್ಟಿ, ಐಸಿಸಿ ಕರ್ನಾಟಕ ಪ್ರತಿನಿಧಿ ಸಂದೀಪ್ ಶ್ರೀರಾಮರೆಡ್ಡಿ, ಕೆಎಸ್‌ಕ್ಯೂ ಸಲಹಾ ಮಂಡಳಿ ಅಧ್ಯಕ್ಷ ಡಾ. ಎಂ. ರವಿಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಕೆಎಸ್‌ಕ್ಯೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸ್ವಯಂಸೇವಕರು ಶ್ರಮಿಸಿದರು. ಸಮಿತಿಯ ವಿವಿಧ ವಿಭಾಗಗಳ ಪದಾಧಿಕಾರಿಗಳು ಕಾರ್ಯಕ್ರಮದ ಆಯೋಜನೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ನಿರ್ವಹಣೆಯಲ್ಲಿ ಸಹಕರಿಸಿದರು.

Related Articles

Comments (0)