ಭಾರತದ 100ನೇ ಚೆಸ್ ಗ್ರ್ಯಾಂಡ್ಮಾಸ್ಟರ್ ಅನುಜ್ ಶ್ರೀವಾತ್ರಿ; ಪ್ರಧಾನಿ ಮೋದಿ ಅಭಿನಂದನೆ
- by Suddi Loka
- November 10, 2026
- 5 Views
ನವದೆಹಲಿ: ಫಿಲಿಪ್ಪೀನ್ಸ್ನಲ್ಲಿ ಭಾನುವಾರ ನಡೆದ 7ನೇ ‘ಆಸಿಯಾನ್ ಪ್ಲಸ್ ಇಂಡಿವಿಜುವಲ್ ಓಪನ್ ಚೆಸ್ ಚಾಂಪಿಯನ್ಶಿಪ್’ನಲ್ಲಿ ಜಯಗಳಿಸುವ ಮೂಲಕ ಅನುಜ್ ಶ್ರೀವಾತ್ರಿ ಭಾರತದ 100ನೇ ಚೆಸ್ ಗ್ರ್ಯಾಂಡ್ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಭಾರತೀಯ ಚೆಸ್ ಕ್ಷೇತ್ರದ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಅನುಜ್ ಅವರ ಸಾಧನೆಯು ಭಾರತೀಯ ಆಟಗಾರರ ಪ್ರತಿಭೆ, ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಯುವ ಚೆಸ್ ಪ್ರತಿಭೆಗಳು ಜಾಗತಿಕ ವೇದಿಕೆಯಲ್ಲಿ ಗುರುತಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ. ಈ ಸಾಧನೆಯು ಮತ್ತಷ್ಟು ಯುವಕರಿಗೆ ಚೆಸ್ ಕ್ರೀಡೆಯತ್ತ ಆಸಕ್ತಿ ಬೆಳೆಸಿಕೊಳ್ಳಲು ಸ್ಫೂರ್ತಿಯಾಗಲಿದೆ ಎಂದು ಮೋದಿ ಆಶಯ ವ್ಯಕ್ತಪಡಿಸಿದ್ದಾರೆ.
1988ರಲ್ಲಿ ವಿಶ್ವನಾಥನ್ ಆನಂದ್ ಭಾರತದ ಮೊದಲ ಚೆಸ್ ಗ್ರ್ಯಾಂಡ್ಮಾಸ್ಟರ್ ಆಗಿದ್ದರು. ಅಂದಿನಿಂದ ದೇಶದಲ್ಲಿ ಚೆಸ್ ಕ್ರೀಡೆಯ ಬೆಳವಣಿಗೆ ಗಣನೀಯವಾಗಿ ಹೆಚ್ಚಿದೆ. ಈ ವರ್ಷದ ಜುಲೈನಿಂದ ನವೆಂಬರ್ ಅವಧಿಯಲ್ಲಿ ಐವರು ಆಟಗಾರರು ಗ್ರ್ಯಾಂಡ್ಮಾಸ್ಟರ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಇದೇ ವೇಳೆ, ಭಾರತದ ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಈ ತಿಂಗಳ ಕೊನೆಯಲ್ಲಿ ತಮ್ಮ ವಿಶ್ವ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸ್ಪರ್ಧಿಸಲಿದ್ದಾರೆ.


Comments (0)