ಮಿಲಿಟರಿ ಸ್ಟೇಷನ್‌ನಲ್ಲಿ ದೀಪಾವಳಿ; ಸೈನಿಕರ ತ್ಯಾಗ, ಬದ್ಧತೆ ಮತ್ತು ಒಗ್ಗಟ್ಟಿಗೆ ರಾಜನಾಥ್ ಸಿಂಗ್ ಮೆಚ್ಚುಗೆ

ಸುಕ್ನಾ: ದೀಪಾವಳಿ ಮುನ್ನಾದಿನದಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸುಕ್ನಾ ಮಿಲಿಟರಿ ಸ್ಟೇಷನ್‌ನಲ್ಲಿ ಸೇನಾ ಸಿಬ್ಬಂದಿಯೊಂದಿಗೆ ಸಾಂಪ್ರದಾಯಿಕ ‘ಬಡಾ ಖಾನಾ’ ಸಾಮೂಹಿಕ ಔತಣಕೂಟದಲ್ಲಿ ಪಾಲ್ಗೊಂಡು ಹಬ್ಬ ಆಚರಿಸಿದರು.

ಸೈನಿಕರೊಂದಿಗೆ ಸಂವಾದ ನಡೆಸಿದ ಅವರು, ದೇಶದ ರಕ್ಷಣೆಗಾಗಿ ಅವರು ತೋರುತ್ತಿರುವ ಬದ್ಧತೆ ಮತ್ತು ತ್ಯಾಗವನ್ನು ಶ್ಲಾಘಿಸಿದರು. ವಿವಿಧ ಶ್ರೇಣಿಗಳ ಸಿಬ್ಬಂದಿ ಒಂದೇ ಕುಟುಂಬದಂತೆ ಒಗ್ಗೂಡುವ ಈ ಕೂಟವು ಸೌಹಾರ್ದತೆಯ ಸಂಕೇತವಾಗಿದೆ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈಶಾನ್ಯ ಭಾರತ ದೇಶದ ಕೊನೆಯ ಭಾಗವಲ್ಲ, ಸೂರ್ಯೋದಯವನ್ನು ಮೊದಲು ಕಾಣುವ ಭವ್ಯ ಆರಂಭ ಎಂದು ಅವರು ಬಣ್ಣಿಸಿದರು.

ಕುಟುಂಬಗಳಿಂದ ದೂರವಿದ್ದು ಕರ್ತವ್ಯ ನಿರ್ವಹಿಸುವ ಸೈನಿಕರ ಒಗ್ಗಟ್ಟು, ಆತ್ಮೀಯತೆ ಮತ್ತು ಮನೋಸ್ಥೈರ್ಯ ಸಶಸ್ತ್ರ ಪಡೆಗಳ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದರು. ಸೈನಿಕರ ಧೈರ್ಯ ಮತ್ತು ಸಮರ್ಪಣೆಯಿಂದಲೇ ದೇಶದ ಜನರು ಶಾಂತಿ ಹಾಗೂ ಸುರಕ್ಷತೆಯಿಂದ ಹಬ್ಬ ಆಚರಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ದೇಶ ಸೇವೆಯಲ್ಲಿ ತೊಡಗಿರುವ ಸೇನಾ ಸಿಬ್ಬಂದಿಗೆ ಗೌರವ ಸಲ್ಲಿಸಿದ ರಾಜನಾಥ್ ಸಿಂಗ್, ಸಶಸ್ತ್ರ ಪಡೆಗಳಿಗೆ ದೀಪಾವಳಿ ಶುಭಾಶಯ ಕೋರಿದರು.

Related Articles

Comments (0)