ಯೆಮೆನ್‌ನ ತೈಜ್ ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ: 30 ಮಂದಿ ಸಾವು

ಸನಾ: ಯೆಮೆನ್‌ನ ತೈಜ್ ಪ್ರಾಂತ್ಯದ ಅಲ್-ವಾಜಿಯಾಹ್ ಪ್ರದೇಶದಲ್ಲಿರುವ ಅಲ್-ಹದಾರಾ ಮಾರುಕಟ್ಟೆ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದು, ಎಂಟು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.

ಶುಕ್ರವಾರ ಮಾರುಕಟ್ಟೆ ಮೇಲೆ ಮೂರು ವೈಮಾನಿಕ ದಾಳಿಗಳು ನಡೆದಿವೆ ಎಂದು ಹೌತಿ ಸೇನಾ ವಕ್ತಾರರು ತಿಳಿಸಿದ್ದಾರೆ. ದಾಳಿಗೆ ಸೌದಿ ಅರೇಬಿಯಾ ಹೊಣೆ ಎಂದು ಹೌತಿ ಬಂಡುಕೋರರು ಆರೋಪಿಸಿದ್ದಾರೆ. ಕಟ್ಟಡಗಳು ಮತ್ತು ವಾಹನಗಳಿಗೆ ಹಾನಿಯಾಗಿದ್ದು, ಘಟನಾ ಸ್ಥಳದಲ್ಲಿ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಯೆಮೆನ್‌ನಲ್ಲಿ ಹೌತಿ ಬಂಡುಕೋರರು ಮತ್ತು ಸರ್ಕಾರಿ ಪಡೆಗಳ ನಡುವಿನ ಸಂಘರ್ಷ ಮುಂದುವರಿದಿದೆ. ದಕ್ಷಿಣ ಯೆಮೆನ್‌ಗೆ ಸಂಪರ್ಕ ಕಲ್ಪಿಸುವ ಆಯಕಟ್ಟಿನ ಪ್ರದೇಶವಾಗಿರುವ ತೈಜ್ ನಗರದ ನಿಯಂತ್ರಣಕ್ಕಾಗಿ ಹೋರಾಟ ನಡೆಯುತ್ತಿದೆ. ಸಂಘರ್ಷದಿಂದಾಗಿ ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ.

Related Articles

Comments (0)