ಮೀನುಗಾರರನ್ನು ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಸಿಬ್ಬಂದಿ; 10 ಮಂದಿಗಾಗಿ ಶೋಧ ಕಾರ್ಯ
- by Suddi Loka
- November 5, 2026
- 8 Views
ಹೈದರಾಬಾದ್: ಮೀನುಗಾರರನ್ನು ರಕ್ಷಿಸಲು ತೆರಳಿದ್ದ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಬ್ಬಂದಿಯ ದೋಣಿ ಮಗುಚಿಬಿದ್ದ ಪರಿಣಾಮ 10 ಮಂದಿ ನಾಪತ್ತೆಯಾಗಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ. ಬುಧವಾರ ಸಂಜೆ ಸಾತುಪಲ್ಲಿ ಮಂಡಲದ ಬೇತುಪಲ್ಲಿ ಸರೋವರದಲ್ಲಿ ಈ ದುರಂತ ಸಂಭವಿಸಿದೆ.
ಸರೋವರದಲ್ಲಿ ಸಿಲುಕಿಕೊಂಡಿದ್ದ ಮೀನುಗಾರರ ಗುಂಪನ್ನು ರಕ್ಷಿಸುವ ಉದ್ದೇಶದಿಂದ ಎಸ್‌ಡಿಆರ್‌ಎಫ್ ಸಿಬ್ಬಂದಿ ಎರಡು ದೋಣಿಗಳಲ್ಲಿ ಕಾರ್ಯಾಚರಣೆಗೆ ತೆರಳಿದ್ದರು. ಈ ವೇಳೆ ಎರಡೂ ದೋಣಿಗಳು ಮಗುಚಿಬಿದ್ದಿದ್ದು, ಅದರಲ್ಲಿದ್ದ 10 ಸಿಬ್ಬಂದಿ ನೀರಿನಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಖಮ್ಮಂ ಜಿಲ್ಲಾಧಿಕಾರಿ ದಿವಾಕರ ಟಿ.ಎಸ್. ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ನಾಪತ್ತೆಯಾದ ಸಿಬ್ಬಂದಿಯ ಪತ್ತೆಗಾಗಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.

ಈ ಕುರಿತು ತೆಲಂಗಾಣ ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಾಪತ್ತೆಯಾಗಿರುವ ಎಸ್‌ಡಿಆರ್‌ಎಫ್ ಸಿಬ್ಬಂದಿ ಇರುವ ಸಾಧ್ಯತೆಯಿರುವ ಸ್ಥಳವನ್ನು ರಕ್ಷಣಾ ತಂಡಗಳು ಗುರುತಿಸಿವೆ ಎಂದು ಅವರು ತಿಳಿಸಿದ್ದಾರೆ.
ಸಿಬ್ಬಂದಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ದಡಕ್ಕೆ ಕರೆತರುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಘಟನೆಯಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆಮಾಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.


Comments (0)