‘ಗಬ್ಬರ್ ಟ್ಯಾಕ್ಸ್’ ಆರೋಪ:ಅಶೋಕ್ ಟೀಕೆಗೆ ರಾಮಲಿಂಗಾರೆಡ್ಡಿ ತಿರುಗೇಟು

ಬೆಂಗಳೂರು: ರಾಜ್ಯ ಸರ್ಕಾರದ ನೀತಿಗಳನ್ನು ‘ಗಬ್ಬರ್ ಟ್ಯಾಕ್ಸ್’ ಎಂದು ಟೀಕಿಸಿದ್ದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಸಚಿವ ರಾಮಲಿಂಗಾರೆಡ್ಡಿ ತೀಕ್ಷ್ಣ ತಿರುಗೇಟು ನೀಡಿದ್ದಾರೆ. “ನಿಮ್ಮ ಮೊಸಳೆ ಕಣ್ಣೀರಿನ ನಾಟಕ ಸಾಕು, ನಿಜವಾದ ಗಬ್ಬರ್ ಸಿಂಗ್ ಟ್ಯಾಕ್ಸ್ ಮತ್ತು ಜೇಬು ಕತ್ತರಿಸುವ ಜನವಿರೋಧಿ ನೀತಿಗಳು ಜಾರಿಯಲ್ಲಿರುವುದು ಕೇಂದ್ರದ ಬಿಜೆಪಿ ಸರ್ಕಾರದಲ್ಲಿ” ಎಂದು ಸಚಿವರು ತಿರುಗೇಟು ನೀಡಿದ್ದಾರೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದ ವಿಪಕ್ಷಗಳ ನಿಲುವನ್ನು ತರಾಟೆಗೆ ತೆಗೆದುಕೊಂಡಿರುವ ರಾಮಲಿಂಗಾರೆಡ್ಡಿ, ಬೆಲೆ ಏರಿಕೆ ಮತ್ತು ತೆರಿಗೆ ವಸೂಲಾತಿಯ ಅಸಲಿ ಮುಖವಾಡವನ್ನು ಅಂಕಿ-ಅಂಶಗಳ ಸಮೇತ ಬಿಚ್ಚಿಟ್ಟಿದ್ದಾರೆ.

ಅಡುಗೆ ಅನಿಲ, ಇಂಧನ ಬೆಲೆ ಏರಿಕೆಯ ಬಿಸಿ:

2014ರಲ್ಲಿ ₹400 ಇದ್ದ ಅಡುಗೆ ಅನಿಲ (LPG) ಸಿಲಿಂಡರ್ ಬೆಲೆಯನ್ನು ಇಂದು ಸುಮಾರು ₹1,000ಕ್ಕೆ ಏರಿಸಿ ಬಡವರ ಒಲೆ ಆರಿಸಲಾಗಿದೆ. ಯುಪಿಎ ಅವಧಿಯಲ್ಲಿ ₹36.89 ಇದ್ದ ಇಂಧನ ಬೆಲೆಯನ್ನು ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗಿದೆ. ಕೇಂದ್ರ ಸರ್ಕಾರದ ಈ ಪರೋಕ್ಷ ಸುಲಿಗೆಯಿಂದಲೇ ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಇದು ಅಸಲಿ ‘ಗಬ್ಬರ್ ಟ್ಯಾಕ್ಸ್’ ಅಲ್ಲವೇ ಎಂದು ಸಚಿವರು ಪ್ರಶ್ನಿಸಿದ್ದಾರೆ.

ಅಗತ್ಯ ವಸ್ತುಗಳ ಮೇಲೂ ಜಿಎಸ್‌ಟಿ ಅಸ್ತ್ರ:

ಸ್ವಾತಂತ್ರ್ಯದ ನಂತರ ಎಂದೂ ಇಲ್ಲದ ರೀತಿಯಲ್ಲಿ ದಿನನಿತ್ಯದ ಅತ್ಯಗತ್ಯ ವಸ್ತುಗಳಾದ ಹಾಲು, ಮೊಸರು, ಬೇಳೆಕಾಳುಗಳು ಹಾಗೂ ಆಸ್ಪತ್ರೆ ಸೇವೆಗಳ ಮೇಲೆಯೂ ಜಿಎಸ್‌ಟಿ ಹೇರಿ ಮಧ್ಯಮ ವರ್ಗದವರನ್ನು ಉಸಿರುಗಟ್ಟಿಸಲಾಗಿದೆ. ದೊಡ್ಡ ಬಂಡವಾಳಶಾಹಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವ ಕೇಂದ್ರ ಸರ್ಕಾರ, ಬಡವರ ದಿನಸಿ ಮತ್ತು ಔಷಧಿಗಳ ಮೇಲೆ ತೆರಿಗೆ ಹಾಕಿ ರಕ್ತ ಹೀರುತ್ತಿದೆ ಎಂದು ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.

ಕರ್ನಾಟಕಕ್ಕೆ ನಿರಂತರ ತೆರಿಗೆ ಅನ್ಯಾಯ:

ಕರ್ನಾಟಕದಿಂದ ವಾರ್ಷಿಕವಾಗಿ ಜಿಎಸ್‌ಟಿ ಹಾಗೂ ನೇರ ತೆರಿಗೆಗಳ ರೂಪದಲ್ಲಿ ₹4.5 ಲಕ್ಷ ಕೋಟಿಗೂ ಅಧಿಕ ಹಣ ದೆಹಲಿ ಪಾಲಾಗುತ್ತಿದೆ. ಆದರೆ ಇತ್ತೀಚಿನ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಕೇವಲ ₹4,504 ಕೋಟಿ ಮಾತ್ರ. ರಾಜ್ಯಕ್ಕೆ ಇಷ್ಟೊಂದು ಭೀಕರ ಅನ್ಯಾಯವಾಗುತ್ತಿದ್ದರೂ, ಕೇಂದ್ರದ ಮುಂದೆ ಬಾಲ ಮುದುರಿಕೊಂಡು ಕೂತಿರುವ ಆರ್. ಅಶೋಕ್ ಅವರಿಗೆ ರಾಜ್ಯದ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ ಎಂದು ರಾಮಲಿಂಗಾರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ

 

Related Articles

Comments (0)

Leave a Comment