ರಾಜ್ಯದ 4 ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಏರಿಕೆ: ಇಂದು ಮಧ್ಯರಾತ್ರಿಯಿಂದಲೇ ಜಾರಿ
- by Suddi Team
- November 4, 2026
- 10 Views
ಬೆಂಗಳೂರು: ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳಾದ KSRTC, BMTC, NWKRTC (ವಾಕರಸಾಸಂ) ಮತ್ತು KKRTC (ಕಕರಸಾನಿ) ಬಸ್ಗಳ ಪ್ರಯಾಣ ದರವನ್ನು ಅಧಿಕೃತವಾಗಿ ಪರಿಷ್ಕರಿಸಲಾಗಿದೆ. ಪರಿಷ್ಕೃತ ನೂತನ ದರಗಳು ಇಂದು (ನವೆಂಬರ್ 4-5ರ) ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಜಾರಿಗೆ ಬರಲಿವೆ.
ಶಾಂತಿನಗರದಲ್ಲಿರವ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಾರಿಗೆ ಸಚಿವ ಬೈರತಿ ಸುರೇಶ್, ಸಾರಿಗೆ ನಿಗಮಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ನಷ್ಟ ಹಾಗೂ ಇಂಧನ ದರ ಏರಿಕೆಯ ಹಿನ್ನೆಲೆಯಲ್ಲಿ, ‘ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ’ಯ ಶಿಫಾರಸಿನ ಮೇರೆಗೆ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ದರ ಪರಿಷ್ಕರಣೆ ನಿರ್ಧಾರ ಪ್ರಕಟಿಸಿದರು.
ಸಾಮಾನ್ಯ ಮತ್ತು ವೇಗದೂತ (ಎಕ್ಸ್ಪ್ರೆಸ್) ಬಸ್ಗಳ ಹೊಸ ದರಪಟ್ಟಿಯ ವಿವರ:
ಸಾರ್ವಜನಿಕರು ಹೆಚ್ಚಾಗಿ ಪ್ರಯಾಣಿಸುವ ಮೊದಲ 5 ಹಂತಗಳ (Stages) ಸಾಮಾನ್ಯ ಸಾರಿಗೆ ಬಸ್ಗಳಲ್ಲಿ ಗರಿಷ್ಠ 9 ರೂ. ವರೆಗೆ ದರ ಹೆಚ್ಚಳವಾಗಲಿದೆ. ಇನ್ನು ವೇಗದೂತ (Express) ಬಸ್ಗಳ ಮೊದಲ 10 ಹಂತಗಳ ಪ್ರಯಾಣಕ್ಕೆ ಗರಿಷ್ಠ 18 ರೂ. ವರೆಗೆ ದರ ಏರಿಕೆಯಾಗಲಿದೆ.
ಪ್ರಮುಖ ನಗರಗಳ ಪರಿಷ್ಕೃತ ದರಗಳು (ಬೆಂಗಳೂರಿನಿಂದ):
ನೆಲಮಂಗಲ ಮತ್ತು ಹೊಸಕೋಟೆಗೆ ಸಾಮಾನ್ಯ ಬಸ್ ದರ 35 ರೂ. ನಿಂದ 44 ರೂ. ಗೆ (9 ರೂ. ಏರಿಕೆ), ದೊಡ್ಡಬಳ್ಳಾಪುರ ಮತ್ತು ಆನೇಕಲ್ಗೆ 38 ರೂ. ನಿಂದ 47 ರೂ. ಗೆ (9 ರೂ. ಏರಿಕೆ), ಮಾಗಡಿ ಮತ್ತು ಮಾಲೂರಿಗೆ 46 ರೂ. ನಿಂದ 57 ರೂ. ಗೆ (11 ರೂ. ಏರಿಕೆ) ಹೆಚ್ಚಳವಾಗಿದೆ.
ದೂರದ ಜಿಲ್ಲಾ ಕೇಂದ್ರಗಳಿಗೆ (ವೇಗದೂತ ಬಸ್ ದರ):
ತುಮಕೂರು ಮತ್ತು ಕೋಲಾರಕ್ಕೆ 81 ರೂ. ಬದಲಿಗೆ 100 ರೂ. (19 ರೂ. ಏರಿಕೆ), ಮಂಡ್ಯಕ್ಕೆ 110 ರೂ. ಬದಲಿಗೆ 136 ರೂ. (26 ರೂ. ಏರಿಕೆ), ಮೈಸೂರಿಗೆ 160 ರೂ. ಬದಲಿಗೆ 197 ರೂ. (37 ರೂ. ಏರಿಕೆ), ಹಾಸನಕ್ಕೆ 219 ರೂ. ನಿಂದ 270 ರೂ. (51 ರೂ. ಏರಿಕೆ) ಹಾಗೂ ಚಿಕ್ಕಮಗಳೂರಿಗೆ 295 ರೂ. ನಿಂದ 363 ರೂ. (68 ರೂ. ಏರಿಕೆ) ಗೆ ದರ ಏರಿಸಲಾಗಿದೆ.
ಬೆಂಗಳೂರು ನಗರ ಬಿಎಂಟಿಸಿ (BMTC) ದರಗಳ ವಿವರ:
ರಾಜಧಾನಿಯ ಬಿಎಂಟಿಸಿ ಸಾಮಾನ್ಯ ಸೇವೆಗಳಲ್ಲಿ ಹತ್ತಿರದ ಪ್ರಯಾಣಕ್ಕೆ (2 ಕಿ.ಮೀ ವರೆಗೆ) 4 ರೂ. ಹಾಗೂ 2 ರಿಂದ 4 ಕಿ.ಮೀ ವರೆಗಿನ ಪ್ರಯಾಣಕ್ಕೆ 6 ರೂ. ಹೆಚ್ಚಳ ಮಾಡಲಾಗಿದೆ. ದೂರದ ಪ್ರಯಾಣಕ್ಕೆ ಗರಿಷ್ಠ 12 ರೂ. ವರೆಗೆ ಏರಿಕೆ ಮಾಡಲಾಗಿದೆ.
ಪ್ರಮುಖ ಮಾರ್ಗಗಳ ಪರಿಷ್ಕೃತ ದರ (ಸಾಮಾನ್ಯ ಬಸ್): ಕೆಂಪೇಗೌಡ ಬಸ್ ನಿಲ್ದಾಣದಿಂದ (ಮಜೆಸ್ಟಿಕ್) ಶಿವಾಜಿನಗರಕ್ಕೆ 12 ರೂ. ನಿಂದ 18 ರೂ. ಗೆ, ಯಶವಂತಪುರ ಹಾಗೂ ವಿಜಯನಗರಕ್ಕೆ 18 ರೂ. ನಿಂದ 25 ರೂ. ಗೆ, ಬನಶಂಕರಿಗೆ 23 ರೂ. ನಿಂದ 35 ರೂ. ಗೆ ಹಾಗೂ ಅತ್ತಿಬೆಲೆಗೆ 30 ರೂ. ನಿಂದ 42 ರೂ. ಗೆ ದರ ಹೆಚ್ಚಾಗಿದೆ.
ವಜ್ರ ಎಸಿ ಬಸ್ಗಳ ದರ: ಹತ್ತಿರದ ಪ್ರಯಾಣಕ್ಕೆ (6 ಕಿ.ಮೀ ವರೆಗೆ) 5 ರೂ., 6 ರಿಂದ 18 ಕಿ.ಮೀ ವರೆಗಿನ ಪ್ರಯಾಣಕ್ಕೆ 10 ರೂ. ಹಾಗೂ ದೂರದ ಪ್ರಯಾಣಕ್ಕೆ ಗರಿಷ್ಠ 15 ರೂ. ವರೆಗೆ ದರ ಹೆಚ್ಚಿಸಲಾಗಿದೆ. ಉದಾಹರಣೆಗೆ ಮೆಜೆಸ್ಟಿಕ್ನಿಂದ ಅತ್ತಿಬೆಲೆಗೆ ಇದ್ದ ಎಸಿ ಬಸ್ ದರ 60 ರೂ. ನಿಂದ 70 ರೂ. ಗೆ ಏರಿಕೆಯಾಗಿದೆ. ಸಿಲ್ಕ್ ಬೋರ್ಡ್ನಿಂದ ಹೆಬ್ಬಾಳಕ್ಕೆ ಇದ್ದ ದರ 55 ರೂ. ನಿಂದ 65 ರೂ. ಗೆ ಏರಿದೆ.
ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು?
ನಾಲ್ಕೂ ಸಾರಿಗೆ ನಿಗಮಗಳು ಸದ್ಯ ಒಟ್ಟಾರೆಯಾಗಿ ಸುಮಾರು ₹10,200 ಕೋಟಿಗಳಷ್ಟು ಬೃಹತ್ ಸಂಚಿತ ನಷ್ಟವನ್ನು ಎದುರಿಸುತ್ತಿವೆ. ನಿಗಮಗಳ ಒಟ್ಟು ವೆಚ್ಚದಲ್ಲಿ ಶೇ. 80ರಷ್ಟು ಭಾಗ ಡೀಸೆಲ್ ಮತ್ತು ಸಿಬ್ಬಂದಿ ವೇತನಕ್ಕೇ ವ್ಯಯವಾಗುತ್ತಿದೆ. ಪ್ರಸ್ತುತ ಇಂಧನ ಬಾಕಿ ಮೊತ್ತವೇ ₹1111.88 ಕೋಟಿ ತಲುಪಿದ್ದು, ನೌಕರರ ಭವಿಷ್ಯ ನಿಧಿ (PF) ಬಾಕಿ ₹2916.80 ಕೋಟಿ ಹಾಗೂ ನಿವೃತ್ತ ನೌಕರರ ಬಾಕಿ ಮೊತ್ತ ₹603.88 ಕೋಟಿಗಳಷ್ಟಿದೆ. ಪ್ರಸಕ್ತ ವರ್ಷವೊಂದರಲ್ಲೇ ಡೀಸೆಲ್ ದರ ಪ್ರತಿ ಲೀಟರ್ಗೆ ಒಟ್ಟು 10.47 ರೂ. ಗಳಷ್ಟು ಹೆಚ್ಚಳವಾಗಿದ್ದು (ಸದ್ಯ ಸರಾಸರಿ ಬೆಲೆ ರೂ. 98.13), ನಿಗಮಗಳ ಮೇಲೆ ತೀವ್ರ ಹಣಕಾಸಿನ ಒತ್ತಡ ಉಂಟುಮಾಡಿದೆ. ಕೊನೆಯದಾಗಿ 2025ರ ಜನವರಿಯಲ್ಲಿ ಕೇವಲ 15% ರಷ್ಟು ಮಾತ್ರ ದರ ಹೆಚ್ಚಿಸಲಾಗಿತ್ತು, ಆದರೆ ಅದು ಇಂಧನ ವೆಚ್ಚದ ಹೊರೆಯನ್ನು ಭಾಗಶಃ ಮಾತ್ರ ಸರಿದೂಗಿಸಲು ಸಾಧ್ಯವಾಗಿತ್ತು. ಆದ್ದರಿಂದ ಸಾರಿಗೆ ಸಂಸ್ಥೆಗಳ ಉಳಿವಿಗಾಗಿ ಹಾಗೂ ಉತ್ತಮ ಸೇವೆ ಒದಗಿಸಲು ಈ ದರ ಪರಿಷ್ಕರಣೆ ಅನಿವಾರ್ಯ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸಮರ್ಥಿಸಿಕೊಂಡಿದ್ದಾರೆ.
Related Articles
Thank you for your comment. It is awaiting moderation.


Comments (0)