- ಬೆಂಗಳೂರು
- ಮುಖ್ಯ ಮಾಹಿತಿ
- ರಾಜ್ಯ
- Like this post: 0
ರಾಜ್ಯದ ಅಂತಿಮ ಮತದಾರರ ಪಟ್ಟಿ ಬಿಡುಗಡೆ: 4.55 ಕೋಟಿಗೆ ತಲುಪಿದ ಮತದಾರರ ಸಂಖ್ಯೆ
- by Suddi Team
- October 27, 2026
- 286 Views
ಬೆಂಗಳೂರು: ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ವಿಶೇಷ ಸಮಗ್ರ ಪರಿಷ್ಕರಣೆ (SIR)-2026ರ ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಹೊಸ ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 4,55,00,011 (4.55 ಕೋಟಿ) ತಲುಪಿದೆ.
ಮಹಿಳಾ ಮತದಾರರೇ ಹೆಚ್ಚು
ಪರಿಷ್ಕೃತ ಪಟ್ಟಿಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಟ್ಟು ಮತದಾರರಲ್ಲಿ 2,25,83,107 ಪುರುಷರು, 2,29,14,063 ಮಹಿಳೆಯರು ಹಾಗೂ 2,841 ತೃತೀಯ ಲಿಂಗಿ ಮತದಾರರು ಸೇರಿದ್ದಾರೆ. ಯುವ ಮತದಾರರ ಜಾಗೃತಿಗೆ ಹೆಚ್ಚಿನ ಒತ್ತು ಸಿಕ್ಕಿದ್ದು, 18 ರಿಂದ 19 ವರ್ಷದೊಳಗಿನ ಸುಮಾರು 6.83 ಲಕ್ಷಕ್ಕೂ ಅಧಿಕ ನೂತನ ಯುವ ಮತದಾರರು ಈ ಬಾರಿ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ 85 ವರ್ಷ ಮೇಲ್ಪಟ್ಟ 3.92 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರು ಪಟ್ಟಿಯಲ್ಲಿದ್ದಾರೆ.
99.32 ಲಕ್ಷ ಹೆಸರುಗಳು ನಾಪತ್ತೆ!
ಈ ಬಾರಿಯ ವಿಶೇಷ ಸಮಗ್ರ ಪರಿಷ್ಕರಣೆಯ ವೇಳೆ ಮತದಾರರ ಪಟ್ಟಿಯಲ್ಲಿದ್ದ ಲೋಪದೋಷಗಳು, ಮರಣ ಹೊಂದಿದವರು ಮತ್ತು ಬೇರೆಡೆಗೆ ವಲಸೆ ಹೋದವರ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ನಿಯಮಾನುಸಾರ ಸುಮಾರು 99,32,303 (ಅಂದಾಜು 99.32 ಲಕ್ಷ) ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದ್ದು, ಇದು ಗಣನೀಯ ಇಳಿಕೆಗೆ ಕಾರಣವಾಗಿದೆ.
ಹೆಸರು ಸೇರ್ಪಡೆಗೆ ಆನ್‌ಲೈನ್‌ನಲ್ಲಿ ಮುಕ್ತ ಅವಕಾಶ
ಮತದಾರರ ಪಟ್ಟಿಯ ಪರಿಷ್ಕರಣೆಯು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಒಂದು ವೇಳೆ ಅರ್ಹ ಮತದಾರರ ಹೆಸರುಗಳು ಈ ಅಂತಿಮ ಪಟ್ಟಿಯಿಂದ ಬಿಟ್ಟುಹೋಗಿದ್ದರೆ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೆಸರು ಇಲ್ಲದ ನಾಗರಿಕರು ನಮೂನೆ-6 (Form 6) ಅನ್ನು ಭರ್ತಿ ಮಾಡುವ ಮೂಲಕ ಹೊಸದಾಗಿ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೋಟರ್ಸ್ ಸರ್ವಿಸ್ ಪೋರ್ಟಲ್ ಮೂಲಕ ತಮ್ಮ ಭಾಗದ ಮತದಾರರ ಪಟ್ಟಿಯನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.
Related Articles
Thank you for your comment. It is awaiting moderation.


Comments (0)