ಹಾಸನಾಂಬೆ ಜಾತ್ರಾ ಮಹೋತ್ಸವ: ಭಕ್ತರಿಗಾಗಿ ಕೆಎಸ್‌ಆರ್‌ಟಿಸಿಯಿಂದ 10 ವಿಶೇಷ ಪ್ಯಾಕೇಜ್ ಪ್ರವಾಸ ಘೋಷಣೆ!
- by Suddi Team
- October 27, 2026
- 289 Views
ಹಾಸನ: ಅಕ್ಟೋಬರ್ 30 ರಿಂದ ನವೆಂಬರ್ 10 ರವರೆಗೆ ಜರುಗಲಿರುವ ವಿಶ್ವಪ್ರಸಿದ್ಧ ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ, ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ಪ್ರವಾಸಿಗರು ಮತ್ತು ಭಕ್ತಾದಿಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಮಹತ್ವದ ನಿರ್ಧಾರ ಕೈಗೊಂಡಿದೆ. ಹಾಸನ ಜಿಲ್ಲೆಯ ಸುತ್ತಮುತ್ತಲಿನ ಪ್ರಮುಖ ದೇವಾಲಯಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯಿಸುವ ಸಲುವಾಗಿ ಕೆಎಸ್‌ಆರ್‌ಟಿಸಿ ಒಟ್ಟು 10 ಪ್ರತ್ಯೇಕ ಮಾರ್ಗಗಳ ವಿಶೇಷ ‘ಪ್ಯಾಕೇಜ್ ಟೂರ್’ ವ್ಯವಸ್ಥೆಯನ್ನು ಆಯೋಜಿಸಿದೆ.
ಈ ಪ್ಯಾಕೇಜ್ ಪ್ರವಾಸಗಳು ಬೆಂಗಳೂರು, ಮೈಸೂರು ಮತ್ತು ಹಾಸನ ನಗರಗಳಿಂದ ದಿನನಿತ್ಯ ಆರಂಭವಾಗಲಿದ್ದು, ಪ್ರಮುಖ ಮಾರ್ಗಗಳ ವಿವರ ಹೀಗಿದೆ:
ಬೆಂಗಳೂರು – ಹಾಸನಾಂಬೆ ದರ್ಶನ ಪ್ಯಾಕೇಜ್: ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ 6.00 ಗಂಟೆಗೆ ಬಸ್‌ಗಳು ಹೊರಡಲಿವೆ. ವೋಲ್ವೋ ವಾಹನದ ಪ್ಯಾಕೇಜ್‌ಗೆ ತಲಾ 2,500 ರೂ. (1,000 ರೂ. ಹಾಸನಾಂಬಾ ದರ್ಶನ ಟಿಕೆಟ್ ಸೇರಿ) ಹಾಗೂ ಅಶ್ವಮೇಧ ವಾಹನದ ಪ್ಯಾಕೇಜ್‌ಗೆ 2,000 ರೂ. ದರ ನಿಗದಿಪಡಿಸಲಾಗಿದೆ.

ಮೈಸೂರು – ಹಾಸನಾಂಬೆ ದರ್ಶನ ಪ್ಯಾಕೇಜ್: ಮೈಸೂರು ಕೇಂದ್ರೀಯ ಬಸ್ ನಿಲ್ದಾಣದಿಂದ ಬೆಳಗ್ಗೆ 6.00 ಕ್ಕೆ ಹೊರಡುವ ವೋಲ್ವೋ ಬಸ್‌ಗೆ 2,000 ರೂ. ಹಾಗೂ ಅಶ್ವಮೇಧ ಬಸ್‌ಗೆ 1,600 ರೂ. ದರ ನಿಗದಿಯಾಗಿದೆ.

ಹಾಸನ ಸ್ಥಳೀಯ ಪ್ಯಾಕೇಜ್‌ಗಳು: ಹಾಸನ ನಗರ ಬಸ್ ನಿಲ್ದಾಣದಿಂದ ಹೊರಡುವ ವಿವಿಧ ಪ್ಯಾಕೇಜ್‌ಗಳಲ್ಲಿ ಕೆಂಚಮ್ಮನ ಹೊಸಕೋಟೆ ದೇವಾಲಯ, ವಾಟೇಹೊಳೆ ಡ್ಯಾಂ, ಮಂಜರಾಬಾದ್ ಕೋಟೆ, ಬಿಸಿಲೆ ಘಾಟ್, ಬೇಲೂರು-ಹಳೇಬೀಡು, ಶ್ರವಣಬೆಳಗೊಳ, ಶೆಟ್ಟಿಹಳ್ಳಿ ಚರ್ಚ್ ಮತ್ತು ಗೊರೂರು ಜಲಾಶಯ ಸೇರಿದಂತೆ ಜಿಲ್ಲೆಯ ಹಲವು ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದಾಗಿದೆ. ಈ ಪ್ರಾದೇಶಿಕ ಪ್ರವಾಸಗಳ ಟಿಕೆಟ್ ದರವು ಪ್ರತಿ ವ್ಯಕ್ತಿಗೆ 375 ರೂ. ನಿಂದ 525 ರೂ. ವರೆಗೆ ಇರಲಿದೆ.

ನಿಯಮಗಳು ಮತ್ತು ಸಂಪರ್ಕ ಮಾಹಿತಿ:
ಈ ಎಲ್ಲಾ ಪ್ರವಾಸಗಳು ಬೆಳಗ್ಗೆ ಆರಂಭವಾಗಿ ಸಂಜೆ ಸುಮಾರು 8.00 ಗಂಟೆಗೆ ಮರಳಿ ಬರಲಿವೆ. ಪ್ಯಾಕೇಜ್ ದರದಲ್ಲಿ ಊಟದ ವ್ಯವಸ್ಥೆ ಹಾಗೂ ಪ್ರೇಕ್ಷಣೀಯ ಸ್ಥಳಗಳ ಪ್ರವೇಶ ಶುಲ್ಕಗಳು ಸೇರಿರುವುದಿಲ್ಲ, ಇವುಗಳನ್ನು ಭಕ್ತರೇ ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ. ಮಕ್ಕಳಿಗೆ ಪ್ರತ್ಯೇಕ ದರ ಇರಲಿದೆ.
ಹೆಚ್ಚಿನ ಮಾಹಿತಿ ಹಾಗೂ ಮುಂಗಡ ಬುಕ್ಕಿಂಗ್‌ಗಾಗಿ ಸಾರ್ವಜನಿಕರು ನಿಗಮದ ಅಧಿಕೃತ ವೆಬ್‌ಸೈಟ್ www.ksrtc.in ಗೆ ಭೇಟಿ ನೀಡಬಹುದು ಅಥವಾ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:
📞 7760990518, 7760990519, 7760990520, 7760990523
Related Articles
Thank you for your comment. It is awaiting moderation.


Comments (0)