ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ಮಹಾ ಅವಘಡ: ಬೆದರಿ ಓಡಿದ ಆನೆ, ನೆಲಕ್ಕುರುಳಿ ಛಿದ್ರವಾದ ಬೆಳ್ಳಿ ಅಂಬಾರಿ!
- by Suddi Team
- October 22, 2026
- 5 Views
ಶಿವಮೊಗ್ಗ: ಇಲ್ಲಿನ ವಿಜಯದಶಮಿ ಹಬ್ಬದ ಅದ್ದೂರಿ ಶಿವಮೊಗದಗ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆ ವೇಳೆ ಭಾರಿ ಅವಘಡವೊಂದು ಸಂಭವಿಸಿದೆ. ಇದೇ ಮೊದಲ ಬಾರಿಗೆ 450 ಕೆ.ಜಿ. ತೂಕದ ಭವ್ಯ ಬೆಳ್ಳಿಯ ಅಂಬಾರಿಯನ್ನು ಹೊತ್ತು ಸಾಗುತ್ತಿದ್ದ ‘ಸೋಮಣ್ಣ’ (36) ಆನೆ ಏಕಾಏಕಿ ಬೆದರಿ ದಿಕ್ಕಾಪಾಲಾಗಿ ಓಡಿದ್ದರಿಂದ, ಅಂಬಾರಿ ಕೆಳಗೆ ಬಿದ್ದು ಭಾರಿ ಹಾನಿಗೊಳಗಾಗಿದೆ. ಈ ಘಟನೆಯಿಂದಾಗಿ ಇಡೀ ಜಂಬೂಸವಾರಿ ಮೆರವಣಿಗೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.
ಘಟನೆಯ ವಿವರ:
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮೆರವಣಿಗೆ ಸಾಗುತ್ತಿದ್ದಾಗ, ವಿಪರೀತ ಜನಸಂದಣಿ ಹಾಗೂ ಕರ್ಕಶ ವಾದ್ಯಗಳ ಸದ್ದಿಗೆ ಗಾಬರಿಗೊಂಡ ಸೋಮಣ್ಣ ಆನೆ ನಿಯಂತ್ರಣ ತಪ್ಪಿ ವಾಸವಿ ಶಾಲೆ ಕಡೆಗೆ ಅಡ್ಡಾದಿಡ್ಡಿಯಾಗಿ ಓಡಲು ಆರಂಭಿಸಿತು. ಆನೆ ರಭಸದಿಂದ ಓಡುತ್ತಿದ್ದಂತೆ ಮೆರವಣಿಗೆಯಲ್ಲಿದ್ದ ಸಾರ್ವಜನಿಕರು ಭಯಭೀತರಾಗಿ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದರು.
ಆನೆಯ ಬೆನ್ನ ಮೇಲಿದ್ದ ಬೆಳ್ಳಿ ಅಂಬಾರಿಯು ರಸ್ತೆಗೆ ಬಿದ್ದು ಸಂಪೂರ್ಣವಾಗಿ ಜಖಂಗೊಂಡಿದೆ. ಅಷ್ಟೇ ಅಲ್ಲದೆ, ಆನೆ ಓಡಿದ ರಭಸಕ್ಕೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಎರಡು ಕಾರುಗಳು ಹಾಗೂ ಮೂರು ಬೈಕ್ಗಳು ಪುಡಿಯಾಗಿವೆ. ಅದೃಷ್ಟವಶಾತ್, ಸ್ಥಳದಲ್ಲಿದ್ದ ಮಾವುತರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಆನೆಯನ್ನು ನಿಯಂತ್ರಣಕ್ಕೆ ತಂದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ.
ಕೊನೆ ಕ್ಷಣದ ಆನೆ ಬದಲಾವಣೆಯೇ ಕಾರಣ?
ಮೂಲಗಳ ಪ್ರಕಾರ, ಮೊದಲು ‘ಸಾಗರ’ ಅಥವಾ ‘ಬಾಲನ್’ ಆನೆಗೆ ಅಂಬಾರಿ ಹೊರಿಸಲು ನಿರ್ಧರಿಸಲಾಗಿತ್ತು. ಆದರೆ ಸಾಗರ ಆನೆಗೆ ಕಾಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಜಂಬೂಸವಾರಿಗೆ ಕೇವಲ ಎರಡು ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ ಸೋಮಣ್ಣ ಆನೆಯನ್ನು ಆಯ್ಕೆ ಮಾಡಲಾಗಿತ್ತು. ಸೂಕ್ತ ತರಬೇತಿ ಮತ್ತು ಸಿದ್ಧತೆಯ ಕೊರತೆಯೇ ಆನೆ ಬೆದರಲು ಮುಖ್ಯ ಕಾರಣ ಎನ್ನಲಾಗಿದೆ.
ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮ:
ಈ ಗಂಭೀರ ಲೋಪವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ತಕ್ಷಣದ ವರದಿ ಕೇಳಿದ್ದಾರೆ. ಇನ್ಮುಂದೆ ಮೈಸೂರು ದಸರಾ ಮಾದರಿಯಲ್ಲೇ ರಾಜ್ಯದ ಇತರೆ ಜಿಲ್ಲೆಗಳಲ್ಲಿ ನಡೆಯುವ ಜಂಬೂಸವಾರಿಗಳಿಗೂ ಆನೆಗಳಿಗೆ ಕಡ್ಡಾಯವಾಗಿ 20 ರಿಂದ 30 ದಿನಗಳ ಕಾಲ ನಿರಂತರ ಮಾನಸಿಕ ಮತ್ತು ದೈಹಿಕ ತಾಲೀಮು ನೀಡಬೇಕೆಂದು ಅರಣ್ಯ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ
Related Articles
Thank you for your comment. It is awaiting moderation.


Comments (0)