ಸುಚಿತ್ರಾ ಅಕಾಡೆಮಿಯಲ್ಲಿ ‘ಪರಮ್ ವಿಹಾರ-15’: ವೀಣಾ ಜುಗಲ್‌ಬಂದಿ, ನೃತ್ಯ ರೂಪಕಕ್ಕೆ ಕಲಾಪ್ರೇಮಿಗಳು ಫಿದಾ!
- by Suddi Team
- August 24, 2026
- 40 Views
ಬೆಂಗಳೂರು:ನಗರದ ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಅಕಾಡೆಮಿಯು ಅದ್ಭುತ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು. ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಆಶಯದೊಂದಿಗೆ ‘ಪರಮ್ ಕಲ್ಚರ್’ ಸಂಸ್ಥೆಯು ಆಯೋಜಿಸಿದ್ದ ‘ಪರಮ್ ವಿಹಾರ’ ಮಾಸಿಕ ಸರಣಿಯ 15ನೇ ಆವೃತ್ತಿಯು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ನಾ ದಮಯ ವೀಣಾ ವಾದನ:
ಕಾರ್ಯಕ್ರಮದ ಮೊದಲ ಭಾಗದಲ್ಲಿ ವಿದುಷಿ ಮಾಲಾ ವೆಂಕಟೇಶ್ ಅವರ ಶಿಷ್ಯೆಯರಾದ ಕುಮಾರಿ ಲಹರಿ ಭಟ್ ಮತ್ತು ಕುಮಾರಿ ಸುನಿಧಿ ಅರಕೆರೆ ಅವರ ಸರಸ್ವತಿ ವೀಣಾ ಜುಗಲ್‌ಬಂದಿ ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿತು. ಮುತ್ತುಸ್ವಾಮಿ ದೀಕ್ಷಿತರ ಜನಪ್ರಿಯ ನಾಟೈ ರಾಗದ ‘ಮಹಾಗಣಪತಿಂ’ ಕೃತಿಯೊಂದಿಗೆ ಆರಂಭವಾದ ಸಂಗೀತ ಕಚೇರಿ, ಅನ್ನಮಾಚಾರ್ಯರ ‘ಬ್ರಹ್ಮಕಡಗಿ’ ಭಕ್ತಿಗೀತೆಯ ಮೂಲಕ ಮುಂದುವರಿಯಿತು.
ಬಳಿಕ ಹಿಂದೋಳಂ ರಾಗದ ‘ಸಾಮಜವರ ಗಮನ’ ಕೃತಿಯನ್ನು ಕಲ್ಪನಾ ಸ್ವರಗಳ ಲಯಬದ್ಧ ಗತಿಯೊಂದಿಗೆ ಕಲಾವಿದರು ಅತ್ಯಂತ ನಿಖರವಾಗಿ ನುಡಿಸಿದರು. ಇದೇ ವೇಳೆ ಮೃದಂಗ ವಾದಕರ ತನಿ ಆವರ್ತನವು ಪ್ರೇಕ್ಷಕರಿಂದ ವೀಳ್ಯ ಗಿಟ್ಟಿಸಿಕೊಂಡಿತು. ಡಾ. ಎಂ. ಬಾಲಮುರಳಿಕೃಷ್ಣ ಅವರ ‘ಬೃಂದಾವನಿ ತಿಲ್ಲಾನ’ದೊಂದಿಗೆ ವೀಣಾ ಕಚೇರಿ ಸಂಪನ್ನಗೊಂಡಿತು.
ಕಣ್ಣಿಗೆ ಹಬ್ಬ ತಂದ ‘ಶ್ರೀಕೃಷ್ಣ ವೈಭವಂ’:
ಕಾರ್ಯಕ್ರಮದ ದ್ವಿತೀಯಾರ್ಧದಲ್ಲಿ ವಿದುಷಿ ಭಾವನಾ ಉದಯ ಕಾಂತಿ ಅವರ ಮಾರ್ಗದರ್ಶನದ ಸಮನ್ವಯ ಡ್ಯಾನ್ಸ್ ಅಕಾಡೆಮಿ ಕಲಾವಿದರು ಪ್ರಸ್ತುತಪಡಿಸಿದ ‘ಶ್ರೀಕೃಷ್ಣ ವೈಭವಂ’ ಭರತನಾಟ್ಯ ನೃತ್ಯ ರೂಪಕವು ರಂಗಪ್ರೇಮಿಗಳ ಕಣ್ಣಿಗೆ ಹಬ್ಬವನ್ನು ಉಣಬಡಿಸಿತು. ಭಕ್ತಿ ರಸದ ‘ಗರುಡ ಕವಿತಂ’ ಮೂಲಕ ನೃತ್ಯ ಸರಣಿ ಆರಂಭವಾಯಿತು.
ಬಳಿಕ ಆಂಡಾಳ್ ಹಾಗೂ ರಂಗನಾಥ ಸ್ವಾಮಿಯ ದಿವ್ಯ ಕಲ್ಯಾಣವನ್ನು ವರ್ಣಿಸುವ ‘ವಾರಣಂ ಆಯಿರಂ’ (6ನೇ ತಿರುಮೊಳಿ) ಪ್ರದರ್ಶನ ಭಾವಪೂರ್ಣವಾಗಿ ಮೂಡಿಬಂತು. ಕೃಷ್ಣನು ಕಾಳಿಂಗ ಸರ್ಪವನ್ನು ಮರ್ದಿಸುವ ‘ಕಾಳಿಂಗ ನರ್ತನ’ ಸನ್ನಿವೇಶದಲ್ಲಿ ಕಲಾವಿದರು ತೋರಿದ ವೀರ ರಸದ ಅಭಿವ್ಯಕ್ತಿ ಸಭಿಕರ ರೋಮಾಂಚನಕ್ಕೆ ಕಾರಣವಾಯಿತು. ಕೊನೆಯಲ್ಲಿ ಶ್ರೀಕೃಷ್ಣನ ಸಾನ್ನಿಧ್ಯದಿಂದ ಗೋಪಿಕೆಯರು ಪಡೆಯುವ ಪರಮಾನಂದವನ್ನು ಬಿಂಬಿಸುವ ‘ಗೋಪಿಕಾ ಆನಂದ’ ನೃತ್ಯದೊಂದಿಗೆ ಈ ಕಲಾ ಸಂಜೆ ಮುಕ್ತಾಯಗೊಂಡಿತು. ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಕಲಾ ರಸಿಕರು ಉದಯೋನ್ಮುಖ ಕಲಾವಿದರ ಪ್ರತಿಭೆಗೆ ಮನಸೋತು ಕರತಾಡನದ ಮೂಲಕ ಶುಭ ಹಾರೈಸಿದರು.
Related Articles
Thank you for your comment. It is awaiting moderation.


Comments (0)