ಜೆ.ಹೆಚ್. ಪಟೇಲರ ಹೃದಯ ಶ್ರೀಮಂತಿಕೆ ನೆನೆದ ಡಿ.ಕೆ. ಶಿವಕುಮಾರ್: ರಾಜ್ಯದ ಸರ್ವ ಮುಖ್ಯಮಂತ್ರಿಗಳ ಸಾಧನೆ ಸ್ಮರಣೆ
- by Suddi Team
- August 14, 2026
- 19 Views
ಬೆಂಗಳೂರು: “ರಾಜ್ಯದ ಇತಿಹಾಸದಲ್ಲಿ ಕಂಠಿ ಅವರ ಕಾಲದಿಂದ ಹಿಡಿದು ಸಿದ್ದರಾಮಯ್ಯ ಅವರ ವರೆಗೆ ಆಡಳಿತ ನಡೆಸಿದ ಅನೇಕ ರಾಜಕೀಯ ಮುತ್ಸದ್ಧಿಗಳು ಕರ್ನಾಟಕದ ಪ್ರಗತಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರ ‘ಅನ್ನಭಾಗ್ಯ’ ಯೋಜನೆ, ದೇವರಾಜ ಅರಸು ಅವರ ಜನಪರ ನಿಲುವುಗಳು ಹಾಗೂ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ನಡೆದ ಐಟಿ-ಬಿಟಿ ಕ್ರಾಂತಿ ನಮ್ಮ ನಾಡಿನ ಚರಿತ್ರೆಯ ಪ್ರಮುಖ ಮೈಲಿಗಲ್ಲುಗಳಾಗಿವೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಮ್ಮೆಯಿಂದ ನುಡಿದರು.
ವಿಧಾನಸಭೆಯ ಅಧಿವೇಶನದಲ್ಲಿ ಮುಕ್ತವಾಗಿ ಮಾತನಾಡಿದ ಅವರು, ಇತಿಹಾಸದ ಎಲ್ಲಾ ಮುಖ್ಯಮಂತ್ರಿಗಳ ಆಡಳಿತ ಅವಧಿಯನ್ನು ಪಕ್ಷಾತೀತವಾಗಿ ಸ್ಮರಿಸಿದರು. “ನಮ್ಮ ರಾಜಕಾರಣ ಏನೇ ಇದ್ದರೂ ಅದು ರಸ್ತೆಗೆ ಸೀಮಿತವಾಗಿರಲಿ. ಹಳೆಯ ಕಹಿ ನೆನಪುಗಳನ್ನೆಲ್ಲಾ ಮರೆತು ನಾವೀಗ ಹೊಸ ಪಯಣದತ್ತ ಸಾಗೋಣ. ಪ್ರಸ್ತುತ ನನಗೆ ಸಿಕ್ಕಿರುವ ಈ ಜವಾಬ್ದಾರಿಯುತ ಅವಕಾಶದಲ್ಲಿ, ರಾಜ್ಯದ ಒಟ್ಟು 224 ಶಾಸಕರೂ ನನ್ನ ದೃಷ್ಟಿಯಲ್ಲಿ ಸಮಾನರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ರಾಜ್ಯದ ಹಿತದೃಷ್ಟಿಯಿಂದ ನಾವೆಲ್ಲರೂ ಒಟ್ಟಾಗಿ ‘ಟೀಮ್ ಕರ್ನಾಟಕ’ವಾಗಿ ಕೆಲಸ ಮಾಡಬೇಕಿದೆ” ಎಂದು ಕರೆ ನೀಡಿದರು.
ಜೆ.ಹೆಚ್. ಪಟೇಲರ ಹೃದಯ ಶ್ರೀಮಂತಿಕೆ ಮತ್ತು ವಿಪಕ್ಷ ನಾಯಕರ ಶ್ಲಾಘನೆ:
ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಅವರೊಂದಿಗಿನ ಹಳೆಯ ನೆನಪನ್ನು ಹಂಚಿಕೊಂಡ ಸಿಎಂ, “ಪಟೇಲರ ಹೃದಯ ಶ್ರೀಮಂತಿಕೆ ಬಹಳ ದೊಡ್ಡದಾಗಿತ್ತು. ಈ ಹಿಂದೆ ಬೇರೆಯವರ ಒತ್ತಡದಿಂದಾಗಿ ನನ್ನನ್ನು ಒಮ್ಮೆ ಬಂಧಿಸುವ ಪರಿಸ್ಥಿತಿ ಎದುರಾದಾಗ, ಪಟೇಲರು ‘ನಿಮ್ಮ ರಾಜಕೀಯ ಹಿತಾಸಕ್ತಿಗಾಗಿ ನಾನು ಶಾಸಕರೊಬ್ಬರನ್ನು ಬಂಧಿಸಲು ಬಿಡುವುದಿಲ್ಲ’ ಎಂದು ಧೀಮಂತ ನಿಲುವು ತಳೆದಿದ್ದರು” ಎಂದು ಅವರ ರಾಜಕೀಯ ಮುತ್ಸದ್ದಿತನವನ್ನು ನೆನೆದರು. ಇದೇ ವೇಳೆ ವಿರೋಧ ಪಕ್ಷದ ನಾಯಕರ ಕೊಡುಗೆಗಳನ್ನು ಮುಕ್ತವಾಗಿ ಶ್ಲಾಘಿಸಿದ ಅವರು, “ಹೆಚ್.ಡಿ. ದೇವೇಗೌಡರು ಅಂದು ನೈಸ್ (NICE) ರಸ್ತೆ ಯೋಜನೆಗೆ ಸಹಿ ಹಾಕಿದರು. ಆ ರಸ್ತೆ ಇಲ್ಲದಿದ್ದರೆ ಇಂದು ಬೆಂಗಳೂರಿನ ಸಂಚಾರ ವ್ಯವಸ್ಥೆ ಏನಾಗುತ್ತಿತ್ತು? ಆ ಯೋಜನೆಯಲ್ಲಿ ಏನಾದರೂ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸೋಣ. ಹೆಚ್.ಡಿ. ಕುಮಾರಸ್ವಾಮಿ ಅವರು ಕೂಡ ಒಳ್ಳೆಯ ಉದ್ದೇಶ ಇಟ್ಟುಕೊಂಡೇ ಅದಕ್ಕೆ ಸಹಿ ಹಾಕಿದ್ದರು. ಇನ್ನು ಬಿ.ಎಸ್. ಯಡಿಯೂರಪ್ಪ ಅವರು ರೈತರಿಗಾಗಿ ದೇಶದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ಅನ್ನದಾತರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ” ಎಂದರು.
ಬೆಂಗಳೂರು ಇಂಜಿನಿಯರಿಂಗ್ ಹಬ್ – ಕ್ಯಾಲಿಫೋರ್ನಿಯಾಗಿಂತಲೂ ಮುಂದು:
ಇಡೀ ಪ್ರಪಂಚವು ಭಾರತವನ್ನು ಬೆಂಗಳೂರು ಮತ್ತು ಕರ್ನಾಟಕದ ಮುಖೇನ ನೋಡುತ್ತಿದೆ ಎಂದ ಸಿಎಂ, ನಮ್ಮಲ್ಲಿರುವ ಜ್ಞಾನ, ಪ್ರತಿಭೆ, ಮಾನವ ಸಂಪನ್ಮೂಲ ಹಾಗೂ ಪ್ರಕೃತಿ ಸಂಪತ್ತು ಬೇರೆಲ್ಲೂ ಇಲ್ಲ ಎಂದರು. “ನಮ್ಮ ರಾಜ್ಯ ಪ್ರತಿ ವರ್ಷ 13,940 ವೈದ್ಯರನ್ನು ದೇಶಕ್ಕೆ ನೀಡುತ್ತಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇಂಜಿನಿಯರ್‌ಗಳಿದ್ದರೆ, ನಮ್ಮ ಹೆಮ್ಮೆಯ ಬೆಂಗಳೂರಿನಲ್ಲೇ ಬರೋಬ್ಬರಿ 26 ಲಕ್ಷ ಇಂಜಿನಿಯರ್‌ಗಳಿದ್ದಾರೆ” ಎಂದು ಹೆಮ್ಮೆಯ ಅಂಕಿ-ಅಂಶಗಳನ್ನು ತೆರೆದಿಟ್ಟರು. ಬೆಂಗಳೂರು ಬೆಳೆಯುತ್ತಿರುವ ಮಾದರಿಯಲ್ಲೇ ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳನ್ನು ಅಭಿವೃದ್ಧಿಪಡಿಸುವ ಅನಿವಾರ್ಯತೆ ಇದೆ. ಇದಕ್ಕಾಗಿ ಸ್ಯಾಟಲೈಟ್ ಟೌನ್‌ಶಿಪ್ (ಉಪನಗರ) ಹಾಗೂ ಹೊಸ ರಿಂಗ್ ರಸ್ತೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
Related Articles
Thank you for your comment. It is awaiting moderation.


Comments (0)