ರಾಜಧಾನಿಯ ಸದ್ದಿಲ್ಲದ ಸಾಂಸ್ಕೃತಿಕ ಕ್ರಾಂತಿ: ಜಯನಗರದಲ್ಲಿ ‘ರಸಂ’ ಸವಿದ ಗಾನರಸಿಕರು!

ಬೆಂಗಳೂರು:ಐಟಿ ಹಬ್‌ನ ವೇಗದ ಬದುಕಿನಲ್ಲಿ ಸದಾ ಯಾಂತ್ರಿಕವಾಗಿ ಓಡುವ ಬೆಂಗಳೂರಿಗರಿಗೆ ಸಾಂಸ್ಕೃತಿಕ ರೀಚಾರ್ಜ್ ಸಿಗುವುದು ಅಪರೂಪ. ಆದರೆ, ಕಳೆದ ಸಜೆ ಜಯನಗರದ ಯುವಪಥ ಸಭಾಂಗಣದಲ್ಲಿ ನಡೆದ ದೃಶ್ಯವೇ ಬೇರೆಯಾಗಿತ್ತು. ಅಲ್ಲಿ ಕೇವಲ ಸಂಗೀತದ ಸ್ವರಗಳು ಮೊಳಗಲಿಲ್ಲ; ಬದಲಿಗೆ ಭಾರತೀಯ ಪರಂಪರೆಯ ‘ರಸ’ವನ್ನೇ ಉಣಬಡಿಸುವ ವಿಶಿಷ್ಟ ಸಾಂಸ್ಕೃತಿಕ ಪ್ರಯೋಗವೊಂದು ಯಶಸ್ವಿಯಾಗಿ ನೆರವೇರಿತು. ಅದೇ ‘ರಸಂ’ (RaSam) ಸಂಗೀತ ಮತ್ತು ಸಂವಾದದ ಅಪರೂಪದ ಜುಗಲ್‌ಬಂದಿ!

ಪರಮ್‌ ಫೌಂಡೇಶನ್‌, ಯುವಪಥ ಮತ್ತು ವಿಪಿ ಕಲ್ಚರ್ ಕ್ಲಬ್ ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವು ಕೇವಲ ಒಂದು ಸಂಗೀತ ಸಂಜೆಯಾಗಿ ಉಳಿಯದೆ, ವಿಶಿಷ್ಟ ವೈಚಾರಿಕ ಮತ್ತು ಕಲಾತ್ಮಕ ಹಬ್ಬವಾಗಿ ಮಾರ್ಪಟ್ಟಿತ್ತು.

ಕ್ಲಾಸಿಕಲ್ ಟಚ್ ಟು ಸಿನಿಮಾ ಸಾಂಗ್ಸ್: ಸಂಗೀತದ ಹೊಸ ಆಯಾಮ!

ವೇದಿಕೆಯ ಮೇಲೆ ಮೈಕ್ ಹಿಡಿದು ನಿಂತಿದ್ದು ಇಬ್ಬರು ದಿಗ್ಗಜರು. ಒಬ್ಬರು ಚಿತ್ರರಂಗದಲ್ಲಿ ತಮ್ಮ ಕಂಠಸಿರಿಯಿಂದ ಕೋಟ್ಯಂತರ ಹೃದಯ ಗೆದ್ದ ರಾಗರತ್ನ ವಿಜಯ್ ಪ್ರಕಾಶ್, ಮತ್ತೊಬ್ಬರು ಭಾರತೀಯ ಸಂಗೀತದ ತತ್ವಗಳನ್ನು ಆಳವಾಗಿ ಬಲ್ಲ ವಿದ್ವಾಂಸ ಜಗದೀಶ್ ಶರ್ಮಾ ಸಂಪಾ.

ಈ ಇಬ್ಬರ ಜಂಟಿ ಪ್ರಸ್ತುತಿಯಲ್ಲಿ ಮೂಡಿಬಂದ ಹಾಡುಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ಶಾಸ್ತ್ರೀಯ ಮತ್ತು ಭಕ್ತಿ ಸಂಗೀತದ ಗಾಂಭೀರ್ಯದಿಂದ ಆರಂಭವಾದ ಗಾನಯಾನ, ಸುಗಮ ಸಂಗೀತದ ಭಾವಲೋಕವನ್ನು ದಾಟಿ, ಜನಪ್ರಿಯ ಚಲನಚಿತ್ರ ಗೀತೆಗಳ ರೋಮಾಂಚನದವರೆಗೆ ಸಾಗಿತು. ಕೇವಲ ಹಾಡುವುದಷ್ಟೇ ಅಲ್ಲ, ಆ ಹಾಡಿನ ಹಿಂದಿನ ತಾಂತ್ರಿಕತೆ ಏನು? ಅದರ ಭಾವನೆ ಎಲ್ಲಿಂದ ಹುಟ್ಟಿತು? ಎಂಬ ರಸಮಯ ಸಂವಾದವು ಪ್ರೇಕ್ಷಕರಿಗೆ ಕೇವಲ ಮನರಂಜನೆಯನ್ನಷ್ಟೇ ನೀಡದೆ, ಸಂಗೀತದ ಜ್ಞಾನವನ್ನೂ ಧಾರೆ ಎರೆಯಿತು.

ದೈತ್ಯ ಪ್ರತಿಭೆಗಳ ವಾದ್ಯ ವೈಭವ

ಹಾಡುಗಳಿಗೆ ಪ್ರಾಣ ತುಂಬಿದ್ದು ತೆರೆಯ ಮರೆಯಲ್ಲಿದ್ದ ಆ ದೈತ್ಯ ವಾದ್ಯಗಾರರ ತಂಡ.

ಶ್ರೀನಿವಾಸ್ ಆಚಾರ್ ಅವರ ಗಿಟಾರ್ ತಂತಿಗಳ ನಾದ, ಉಮೇಶ್ ವಿ ಅವರ ಕೀಬೋರ್ಡ್ ಜಾದೂ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು.

ಬಿ.ಎಸ್. ವೇಣುಗೋಪಾಲ ರಾಜು ಅವರ ತಬಲಾ ಮತ್ತು ಪ್ರವೀಣ್ ಎಸ್ ಅವರ ಡ್ರಮ್ಸ್ ಜುಗಲ್‌ಬಂದಿ ಸಭಾಂಗಣದಲ್ಲಿ ಹೊಸ ಚೈತನ್ಯ ತುಂಬಿತು.

ರಂಜನ್ ಕುಮಾರ್ ಬೆಯುರಾ ಅವರ ವಯಲಿನ್ ಆರ್ದ್ರತೆ ತಂದರೆ, ಅನುಭವಿ ಕಲಾವಿದ ಪ್ರವೀಣ್ ಡಿ. ರಾವ್ ಅವರ ಹಾರ್ಮೋನಿಯಂ ಇಡೀ ಗಾನಯಾನಕ್ಕೆ ಭದ್ರ ಬುನಾದಿ ಹಾಕಿತ್ತು.

ತಲೆಮಾರುಗಳನ್ನು ಬೆಸೆದ ಅಮರ ಗೀತೆಗಳು

ಡಾ. ರಾಜ್‌ಕುಮಾರ್ ಅವರ ಧ್ವನಿಯಲ್ಲಿ ಅಮರವಾಗಿರುವ “ಬಾನಿಗೊಂದು ಎಲ್ಲೆ ಎಲ್ಲಿದೆ..”, ಮನ ಕರಗಿಸುವ “ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು..” ಮತ್ತು ಇಂದಿನ ತಲೆಮಾರಿನ ನೆಚ್ಚಿನ ‘ಮಗಳು ಜಾನಕಿ’ ಧಾರಾವಾಹಿಯ ಶೀರ್ಷಿಕೆ ಗೀತೆಗಳು ಮೊಳಗಿದಾಗ ಇಡೀ ಸಭಾಂಗಣ ಚಪ್ಪಾಳೆಯ ಮಳೆಯಲ್ಲಿ ತೇಲಿತು. ಹಿರಿಯರಿಂದ ಹಿಡಿದು ಇಂದಿನ ಯುವ ಪೀಳಿಗೆಯವರೆಗೂ ಎಲ್ಲರೂ ಒಟ್ಟಾಗಿ ತಲೆದೂಗುವಂತೆ ಮಾಡಿದ್ದು ಈ ಕಾರ್ಯಕ್ರಮದ ಅಸಲಿ ಶಕ್ತಿ.

‘ರಸಂ’ ಕೇವಲ ಒಂದು ಕಾರ್ಯಕ್ರಮವಲ್ಲ; ಅದು ಇಂದಿನ ಯಾಂತ್ರಿಕ ಬದುಕಿಗೆ ಸಾಂಸ್ಕೃತಿಕ ಪರಂಪರೆಯನ್ನು ದಾಟಿಸುವ ಅತ್ಯಗತ್ಯ ಸೇತುವೆ. ಇಂತಹ ಪ್ರಯೋಗಗಳು ರಾಜಧಾನಿಯಲ್ಲಿ ಇಂದಿನ ತಲೆಮಾರಿಗೆ ಸಂಗೀತದ ನೈಜ ರುಚಿಯನ್ನು ಉಣಬಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

 

 

Related Articles

Comments (0)

Leave a Comment