ಬೆಂಗಳೂರಿನಲ್ಲಿ ‘ಭಜ ಮನ’ ಸಂಗೀತ ಕಾರ್ಯಾಗಾರ ಯಶಸ್ವಿ: ಸೂರ್ಯಗಾಯತ್ರಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಶಿಬಿರಾರ್ಥಿಗಳು!
- by Suddi Team
- June 15, 2026
- 22 Views
ಬೆಂಗಳೂರು: ರಾಜಧಾನಿಯ ಉದಯೋನ್ಮುಖ ಗಾಯಕರು ಹಾಗೂ ಕಲಾಭಿಮಾನಿಗಳಿಗಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ವಿಶೇಷ ಪ್ರಿ-ಕನ್ಸರ್ಟ್ ಸಂಗೀತ ಕಾರ್ಯಾಗಾರ ‘ಭಜ ಮನ’ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ‘ಪರಮ್ ಕಲ್ಚರ್’ ಸಂಸ್ಥೆಯು ‘ಹರಿವಂಶ ಗ್ರೂಪ್’ ಸಹಯೋಗದೊಂದಿಗೆ ಜಯನಗರದ ಯುವಕ ಸಂಘದಲ್ಲಿ ಈ ವಿನೂತನ ಶಿಬಿರವನ್ನು ಹಮ್ಮಿಕೊಂಡಿತ್ತು.
ಜಾಗತಿಕ ಮಟ್ಟದಲ್ಲಿ ಭಕ್ತಿ ಸಂಗೀತದ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಖ್ಯಾತ ಯುವ ಶಾಸ್ತ್ರೀಯ ಗಾಯಕಿ ಹಾಗೂ ಎಂ.ಎಸ್. ಸುಬ್ಬುಲಕ್ಷ್ಮಿ ಫೆಲೋಶಿಪ್ ಪುರಸ್ಕೃತೆ ಸೂರ್ಯಗಾಯತ್ರಿ ಅವರು ಜೂನ್ 12 ಮತ್ತು 13ರಂದು ನಡೆದ ಈ ಕಾರ್ಯಾಗಾರವನ್ನು ಮುನ್ನಡೆಸಿದರು. ಒಟ್ಟು 45 ಗಾಯನ ಆಸಕ್ತರು ಈ ಅಪೂರ್ವ ಕಲಿಕಾ ಅವಕಾಶದ ಸದುಪಯೋಗ ಪಡಿಸಿಕೊಂಡರು.
ನೇರ ಕಲಿಕೆಯ ಅಪೂರ್ವ ಅನುಭವ:
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳಿಗೆ ಗಾಯಕಿ ಸೂರ್ಯಗಾಯತ್ರಿ ಅವರಿಂದ ನೇರವಾಗಿ ಭಜನೆಗಳು, ದಾಸರಪದಗಳು ಹಾಗೂ ಅಭಂಗ್‌ಗಳನ್ನು ಶಾಸ್ತ್ರೀಯವಾಗಿ ಕಲಿಯುವ ಸುವರ್ಣಾವಕಾಶ ಲಭಿಸಿತು. ಒಟ್ಟು 4 ಗಂಟೆಗಳ ಕಾಲ ನಡೆದ ಈ ತರಬೇತಿ ಅವಧಿಯಲ್ಲಿ ಸೂರ್ಯಗಾಯತ್ರಿ ಅವರು ತಮ್ಮ ಕಲಾ ಪಯಣ ಹಾಗೂ ಭಕ್ತಿ ಸಂಗೀತದ ಹಿನ್ನೆಲೆಯ ಅನುಭವಗಳನ್ನು ಯುವ ಗಾಯಕರೊಂದಿಗೆ ಹಂಚಿಕೊಂಡರು. ಭಾಗವಹಿಸಿದ ಎಲ್ಲರಿಗೂ ಅಗತ್ಯ ಸಾಹಿತ್ಯ ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಮಹಾನ್ ವೇದಿಕೆ ಹಂಚಿಕೊಂಡ ಪ್ರತಿಭೆಗಳು:
ಈ ಕಾರ್ಯಾಗಾರವು ಕೇವಲ ತರಬೇತಿಗೆ ಸೀಮಿತವಾಗಿರದೆ, ಉದಯೋನ್ಮುಖ ಪ್ರತಿಭೆಗಳಿಗೆ ದೊಡ್ಡ ವೇದಿಕೆಯನ್ನೂ ಕಲ್ಪಿಸಿಕೊಟ್ಟಿತ್ತು. ಶಿಬಿರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಯ್ದ ಕಲಾಭಿಮಾನಿಗಳಿಗೆ ಜೂನ್ 14ರ ಭಾನುವಾರ ಸಂಜೆ ಮೀನಾಕ್ಷಿ ರಂಗಮಂಚದಲ್ಲಿ ನಡೆದ ಭವ್ಯ ಲೈವ್ ಕನ್ಸರ್ಟ್‌ನಲ್ಲಿ ಖುದ್ದಾಗಿ ಸೂರ್ಯಗಾಯತ್ರಿ ಅವರೊಂದಿಗೇ ವೇದಿಕೆ ಹಂಚಿಕೊಂಡು ಗಾಯನ ಪ್ರಸ್ತುತಪಡಿಸುವ ಬಂಪರ್ ಅವಕಾಶ ದೊರೆತಿತ್ತು. ಅಮೆರಿಕದ 29 ನಗರಗಳ ಯಶಸ್ವಿ ಪ್ರವಾಸ ಮುಗಿಸಿ ಬಂದಿರುವ ಸೂರ್ಯಗಾಯತ್ರಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮವು ಬೆಂಗಳೂರಿನ ಸಂಗೀತ ಲೋಕದಲ್ಲಿ ಹೊಸ ಉತ್ಸಾಹ ಮೂಡಿಸಿದೆ.
Related Articles
Thank you for your comment. It is awaiting moderation.


Comments (0)