ಕರುನಾಡಿನಲ್ಲಿ ‘ಪೆದ್ದಿ’ ಕಮಾಲ್: ರಾಮ್ ಚರಣ್ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಗ್ಯಾರಂಟಿ ಎಂದ ಶಿವಣ್ಣ!

ಬೆಂಗಳೂರು:ರಾಜಧಾನಿ ಬೆಂಗಳೂರು ಮತ್ತೊಂದು ಅದ್ಧೂರಿ ಸಿನಿಮಾ ಹಬ್ಬಕ್ಕೆ ಸಾಕ್ಷಿಯಾಗಿದೆ. ದೇಶಾದ್ಯಂತ ಭಾರಿ ಕುತೂಹಲ ಕೆರಳಿಸಿರುವ, ಬುಚ್ಚಿ ಬಾಬು ಸನಾ ನಿರ್ದೇಶನದ ಪ್ಯಾನ್-ಇಂಡಿಯಾ ಸಿನಿಮಾ ‘ಪೆದ್ದಿ’ (Peddi) ಚಿತ್ರದ ಪ್ರಚಾರದ ಅಬ್ಬರ ಕರುನಾಡಿನಲ್ಲಿ ಜೋರಾಗಿದೆ. ಚಿತ್ರದ ಪ್ರಚಾರ ಪ್ರವಾಸದ (Peddi Powerplay Tour) ಭಾಗವಾಗಿ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್ ಹಾಗೂ ಹ್ಯಾಟ್ರಿಕ್ ಹೀರೊ ಡಾ. ಶಿವರಾಜ್‌ಕುಮಾರ್ ಚಿತ್ರದ ಕುರಿತು ಹಲವು ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

‘ನ ಭೂತೋ ನ ಭವಿಷ್ಯತಿ’ ಚರಣ್ ಆಕ್ಟಿಂಗ್: ಶಿವಣ್ಣ ಮೆಚ್ಚುಗೆ

ಈ ಚಿತ್ರದಲ್ಲಿ ಅತ್ಯಂತ ವಿಶಿಷ್ಟ ಹಾಗೂ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ವೇದಿಕೆಯಲ್ಲಿ ರಾಮ್ ಚರಣ್ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ಪೆದ್ದಿ ಸಿನಿಮಾದಲ್ಲಿ ರಾಮ್ ಚರಣ್ ಅವರ ಶ್ರಮ ಮತ್ತು ರಗಡ್ ಲುಕ್ ಅದ್ಭುತವಾಗಿದೆ. ಚಿತ್ರದಲ್ಲಿನ ಅವರ ನಟನೆಯನ್ನು ನೋಡಿದ ಮೇಲೆ ನನಗೆ ಒಂದು ಮಾತು ಗ್ಯಾರಂಟಿ ಅನಿಸಿದೆ; ಈ ಸಿನಿಮಾಗೆ ಚರಣ್ ಅವರಿಗೆ ಖಂಡಿತವಾಗಿಯೂ ರಾಷ್ಟ್ರ ಪ್ರಶಸ್ತಿ (National Award) ಒಲಿಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಿವಣ್ಣ ಅವರ ಈ ಮಾತುಗಳು ಥೇಟಿನಲ್ಲಿದ್ದ ಸಾವಿರಾರು ಅಭಿಮಾನಿಗಳಲ್ಲಿ ರೋಮಾಂಚನ ಸೃಷ್ಟಿಸಿತು.

ಕನ್ನಡ ಪ್ರೇಕ್ಷಕರಿಗೆ ಚರಣ್ ಸಲಾಂ: “ಮುಂದಿನ ಬಾರಿ ಇನ್ನೂ ಜಾಸ್ತಿ ಮಾತನಾಡ್ತೀನಿ”

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕ್ಷಣದಿಂದಲೇ ಅಭಿಮಾನಿಗಳ ಸಾಗರವನ್ನು ಕಂಡು ಭಾವುಕರಾದ ರಾಮ್ ಚರಣ್, ವೇದಿಕೆಯ ಮೇಲೆ ಅಚ್ಚ ಕನ್ನಡದಲ್ಲೇ ಮಾತನಾಡಿ ನೆರೆದಿದ್ದವರ ಹೃದಯ ಗೆದ್ದರು. “ತುಂಬಾ ಕಷ್ಟಪಟ್ಟು ಮತ್ತು ಇಷ್ಟಪಟ್ಟು ಈ ಸಿನಿಮಾ ಮಾಡಿದ್ದೇವೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಕ್ಕೆ ಬಂದು ನೋಡಿ ಬೆಂಬಲಿಸಿ. ನನ್ನ ಕನ್ನಡ ಈಗ ಸ್ವಲ್ಪ ಸ್ವಲ್ಪ, ಮುಂದಿನ ಬಾರಿ ಇನ್ನೂ ಜಾಸ್ತಿ ಮಾತನಾಡುತ್ತೇನೆ” ಎಂದು ಕರತಾಡನದ ನಡುವೆ ಭರವಸೆ ನೀಡಿದರು. ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾದಲ್ಲಿ ರಾಮ್ ಚರಣ್‌ಗೆ ಜೋಡಿಯಾಗಿ ನಟಿಸಿರುವ ಗ್ಲಾಮರಸ್ ನಟಿ ಜಾಹ್ನವಿ ಕಪೂರ್ ಕೂಡ ಕನ್ನಡದಲ್ಲೇ ಮಾತನಾಡಿ ಕನ್ನಡಿಗರ ಪ್ರೀತಿಯನ್ನು ಸಂಪಾದಿಸಿದರು.

ಎ.ಆರ್. ರೆಹಮಾನ್ ಮ್ಯೂಸಿಕ್ ಮ್ಯಾಜಿಕ್; ಜೂನ್ 4 ಕ್ಕೆ ಸಿನಿಮಾ ದರ್ಬಾರ್

ಮೈತ್ರಿ ಮೂವಿ ಮೇಕರ್ಸ್ ಮತ್ತು ವೃದ್ಧಿ ಸಿನಿಮಾಸ್ ಜಂಟಿಯಾಗಿ ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಿರುವ ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಕ್ರೀಡಾ ಲೋಕದ ಹಿನ್ನೆಲೆಯುಳ್ಳ ರಫ್ ಆಂಡ್ ಟಫ್ ಹಾಗೂ ಅಷ್ಟೇ ಭಾವನಾತ್ಮಕ ಕಥಾಹಂದರ ಹೊಂದಿರುವ ‘ಪೆದ್ದಿ’ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ಬೆಂಗಳೂರಿನ ಈ ಅದ್ಧೂರಿ ಪ್ರಚಾರ ಕಾರ್ಯಕ್ರಮದ ಬಳಿಕ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಮೇಲಿನ ನಿರೀಕ್ಷೆಗಳು ಗಗನಕ್ಕೇರಿವೆ. ಜೂನ್ 4 ರಂದು ಈ ‘ಪೆದ್ದಿ’ ಆರ್ಭಟ ಬೆಳ್ಳಿಪರದೆ ಮೇಲೆ ಹೇಗೆ ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

 

 

Related Articles

Comments (0)

Leave a Comment