ಒಂದು ಪ್ಲೇಟ್ ಇಡ್ಲಿ ಬೆಲೆ 90 ರೂಪಾಯಿ, ಮಸಾಲ ದೋಸೆ ದರ 150 ಆಗಬಹುದು: ಹೋಟೆಲ್ ಸಂಘದ ಎಚ್ಚರಿಕೆ
- by Suddi Team
- May 25, 2026
- 7 Views
ಬೆಂಗಳೂರು:ರಾಜ್ಯ ಸರಕಾರ ಜಾರಿಗೆ ತಂದಿರುವ ಪರಿಷ್ಕೃತ ಕಾರ್ಮಿಕರ ಕನಿಷ್ಠ ವೇತನ ಹಾಗೂ ವೇತನ ಪರಿಷ್ಕರಣೆ ಗ್ರಾಹಕರ ಮೇಲೆ ಗರಿಷ್ಠ ದುಷ್ಪರಿಣಾಮ ಬೀರಬಹುದು. ಒಂದು ಪ್ಲೇಟ್ ಇಡ್ಲಿ ಬೆಲೆ 80 ರೂಪಾಯಿ ತಲುಪಿದರೆ, ಮಸಾಲೆ ದೋಸೆ ದರ 150ಕ್ಕೆ ಏರಬಹುದು ಎಂದು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ (ಕೆಎಸ್‌ಎಚ್‌ಎ) ಅಧ್ಯಕ್ಷ ಜಿ.ಕೆ. ಶೆಟ್ಟಿ ಎಚ್ಚರಿಸಿದ್ದಾರೆ. ತಕ್ಷಣ ಈ ಕುರಿತು ರಾಜ್ಯ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈಗಾಗಲೇ ಎಲ್‌ಪಿಜಿ ದರ ಏರಿಕೆಯಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳು ತತ್ತರಿಸಿವೆ. ಈಗ ಕನಿಷ್ಠ ವೇತನ ಏರಿಕೆ ಹಾಗೂ ಅವೈಜ್ಞಾನಿಕ ವೇತನ ಪರಿಷ್ಕರಣೆಯಿಂದ ಉದ್ಯಮ ಬೀದಿಗೆ ಬೀಳಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಪ್ರಸ್ತುತ ಇರುವ ವೇತನದ ಹೋಲಿಕೆ ಮಾಡಿದರೆ, ಕನಿಷ್ಠ ವೇತನದಲ್ಲಿ ಸರಾಸರಿ ಸುಮಾರು 60%ಏರಿಕೆ ಮಾಡಲಾಗಿದೆ. ಇದು ಹೋಟೆಲ್‌ಗಳು ಉಪಹಾರ ಗೃಹಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. “ಇದರ ಪರಿಣಾಮವಾಗಿ ಒಂದು ಪ್ಲೇಟ್ ಇಡ್ಲಿ ಬೆಲೆ ಪ್ರಸ್ತುತ ಇರುವ ₹50 ರಿಂದ ₹90ಕ್ಕೆ ಏರಬಹುದು ಹಾಗೂ ₹80-90 ಇರುವ ಮಸಾಲೆ ದೋಸೆ ₹150ಕ್ಕೆ ತಲುಪಬಹುದು ಎಂದು ಅವರು ಎಚ್ಚರಿಸಿದ್ದಾರೆ.
“ಪ್ರಸ್ತುತ ₹150-200 ದರದಲ್ಲಿರುವ ಸಸ್ಯಾಹಾರಿ ಊಟ ₹250-300 ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ₹300-350 ದರದಲ್ಲಿರುವ ಬಿರಿಯಾನಿ ಪದಾರ್ಥಗಳು ಸುಮಾರು ₹500 ಕ್ಕೆ ಏರಬಹುದು. ಇಂತಹ ಬೆಲೆ ಏರಿಕೆಯಿಂದ ಸಾಮಾನ್ಯ ಜನರಿಗೆ ಹೊರಗೆ ಊಟ ಮಾಡುವುದು ದುಬಾರಿಯಾಗಲಿದ್ದು, ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀಳಲಿದೆ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರವು ವಲಯ-೩ ತಾಲ್ಲೂಕು ಮಟ್ಟದ ಅಪ್ರಶಿಕ್ಷಿತ ಕಾರ್ಮಿಕರಿಗೆ ₹19,300 ಅಥವಾ ₹23,376/-GBA ರಿಂದ ಹಿಡಿದು ವಲಯ-1 ರ ಅತ್ಯಂತ ಪರಿಣತಿ ಹೊಂದಿದ ಕಾರ್ಮಿಕರಿಗೆ ₹31,100 ವರೆಗೆ ಕನಿಷ್ಠ ವೇತನ ಪರಿಷ್ಕರಿಸಿದೆ. ಪ್ರಸ್ತುತ ವೇತನದ ಹೋಲಿಕೆಯಲ್ಲಿ ಈ ಏರಿಕೆ ಸರಾಸರಿ ಸುಮಾರು 60% ಆಗಿದೆ. ಸುಮಾರು 60 ಶೇಕಡಾ ಕನಿಷ್ಠ ವೇತನ ಏರಿಕೆಯಿಂದ ಹೋಟೆಲ್‌ಗಳನ್ನು ನಡೆಸುವುದು ಅಸಾಧ್ಯವಾಗಲಿದ್ದು, ಈಗಾಗಲೇ ಹೆಚ್ಚುತ್ತಿರುವ ವೆಚ್ಚಗಳಿಂದ ಸಂಕಷ್ಟದಲ್ಲಿರುವ ಸಣ್ಣ ಹಾಗೂ ಕುಟುಂಬ ಆಧಾರಿತ ಹೋಟೆಲ್‌ಗಳಿಗೆ ಇದು ಭಾರೀ ಹೊಡೆತ ನೀಡಲಿದೆ ಎಂದು ಶೆಟ್ಟಿ ಹೇಳಿದರು.
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಕೆಲವೇ ತಿಂಗಳಲ್ಲಿ ₹1,884 ರಿಂದ ₹3,152 ಕ್ಕೆ ಏರಿಕೆಯಾಗಿದೆ. ಜೊತೆಗೆ ಎಲ್ಲಾ ದಿನಸಿ ವಸ್ತುಗಳು, ವಿದ್ಯುತ್ ದರಗಳು ಹಾಗೂ ಕಸದ ಸೆಸ್ ದರಗಳೂ ಏರಿಕೆಯಾಗಿದ್ದು, ಸಣ್ಣ ಹೋಟೆಲ್ ಮಾಲೀಕರ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಶೆಟ್ಟಿ ತಿಳಿಸಿದರು.
ಹೋಟೆಲ್ ಕ್ಷೇತ್ರವು ಈಗಾಗಲೇ ಕಾರ್ಮಿಕರಿಗೆ ಆಹಾರ, ವಸತಿ, ಯೂನಿಫಾರ್ಮ್ ಹಾಗೂ ತೊಳೆಯುವ ಭತ್ಯೆ ಸೇರಿದಂತೆ ಹಲವು ಕಲ್ಯಾಣ ಸೌಲಭ್ಯಗಳನ್ನು ಒದಗಿಸುತ್ತಿದೆ. ಇತರ ಅನೇಕ ಉದ್ಯಮಗಳಲ್ಲಿ ಇಂತಹ ಸೌಲಭ್ಯಗಳು ಇಲ್ಲವೆಂದು ಶೆಟ್ಟಿ ಹೇಳಿದರು. “ಹೋಟೆಲ್ ಉದ್ಯಮ ರಾಜ್ಯದಲ್ಲಿ ಅತಿ ಹೆಚ್ಚಿನ ಉದ್ಯೋಗ ಸೃಷ್ಟಿಸಿರುವ ಕ್ಷೇತ್ರ. ಈ ವೇತನನ ಅವೈಜ್ಞಾನಿಕ ಹೆಚ್ಚಳ ಈ ಕ್ಷೇತ್ರದ ಮೇಲೆ ಗದಾ ಪ್ರಹಾರವಾಗಿದೆ ಎಂದು ಅವರು ತಿಳಿಸಿದರು.
“ಹೋಟೆಲ್‌ಗಳು ಇತರ ಕ್ಷೇತ್ರಗಳಂತಿಲ್ಲ. ನಾವು ನೌಕರರಿಗೆ ಆಹಾರ, ವಸತಿ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುತ್ತೇವೆ. ಇಷ್ಟು ದೊಡ್ಡ ಪ್ರಮಾಣದ ವೇತನ ಏರಿಕೆಯನ್ನು ಜಾರಿಗೊಳಿಸುವ ಮೊದಲು ಆತಿಥ್ಯ ಕ್ಷೇತ್ರದ ವೈಶಿಷ್ಟತೆ ಹಾಗೂ ಆ ಕ್ಷೇತ್ರದ ವಾಸ್ತವ ಸ್ಥಿತಿಯನ್ನು ಸರ್ಕಾರ ಪರಿಗಣಿಸಬೇಕಿತ್ತು,” ಎಂದು ಅವರು ಹೇಳಿದರು.
ಕನಿಷ್ಠ ವೇತನ ಪರಿಷ್ಕರಣೆ ಜಾರಿಗೊಳಿಸುವ ಸಂದರ್ಭದಲ್ಲಿ ಆತಿಥ್ಯ ಕ್ಷೇತ್ರವನ್ನು ಪ್ರತ್ಯೇಕ ವರ್ಗವಾಗಿ ಪರಿಗಣಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸಂಘ ಮನವಿ ಮಾಡಿತ್ತು. ಆದರೆ ಆ ಮನವಿಯನ್ನು ಸರ್ಕಾರ ಪರಿಗಣಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೋಟೆಲ್ ಉದ್ಯಮಕ್ಕೆ ಸಂಬoಧಿಸಿದoತೆ ಕನಿಷ್ಠ ವೇತನ ಜಾರಿಗೆ ಮರುಪರಿಶೀಲನೆ ನಡೆಸಿ, ಸಣ್ಣ ಹೋಟೆಲ್ ನಿರ್ವಹಕರಿಗೂ ಹಾಗೂ ಗ್ರಾಹಕರಿಗೂ ಉಂಟಾಗಬಹುದಾದ ಸಂಕಷ್ಟವನ್ನು ತಪ್ಪಿಸಬೇಕು ಎಂದು ಸಂಘ ಸರ್ಕಾರವನ್ನು ಆಗ್ರಹಿಸಿದೆ.
“ಇಲ್ಲವಾದರೆ ಇದು ನಿರುದ್ಯೋಗ ಸೃಷ್ಟಿಗೆ ಕಾರಣವಾಗಿ, ಜನರು ಅಸಂಘಟಿತ ಕ್ಷೇತ್ರಗಳಾದ ಸಣ್ಣ ಮತ್ತು ಪಾದಚಾರಿ ಮಾರ್ಗದ ಹೋಟೆಲ್‌ಗಳ ಕಡೆಗೆ ಸಾಗುವ ಪರಿಸ್ಥಿತಿ ಉಂಟಾಗುತ್ತದೆ. ಇದು ಸಮಾಜದ ಆರೋಗ್ಯಕ್ಕೆ ಹಾನಿ ಕೂಡಾ ಎಂದು ಸಂಘ ಎಚ್ಚರಿಸಿದೆ.
Related Articles
Thank you for your comment. It is awaiting moderation.


Comments (0)