ಸಾರಿಗೆ ಮುಷ್ಕರಕ್ಕೆ ಬಿಗ್ ಶಾಕ್: ಜಂಟಿ ಕ್ರಿಯಾ ಸಮಿತಿಯಿಂದ ಹೊರಬಂದ ನೌಕರರ ಸಂಘ

ಬೆಂಗಳೂರು: ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ರಾಜ್ಯ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಭಾರಿ ಹಿನ್ನಡೆಯಾಗಿದೆ. ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಒಳಗೆ ತೀವ್ರ ಅಸಮಾಧಾನ ಮತ್ತು ಭಿನ್ನಾಭಿಪ್ರಾಯಗಳು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ (ರಿ) ಜಂಟಿ ಸಮಿತಿಯಿಂದ ಹೊರಬರಲು ಮಹತ್ವದ ತೀರ್ಮಾನ ಕೈಗೊಂಡಿದೆ. ಇದರೊಂದಿಗೆ ಮುಷ್ಕರಕ್ಕೆ ನೀಡಿದ್ದ ಬೆಂಬಲವನ್ನು ಸಂಘವು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆದಿದೆ.

ನೌಕರರಿಗೆ ನ್ಯಾಯ ಸಿಗಲ್ಲ ಎಂದ ಸಂಘ!

ಕಳೆದ ನಾಲ್ಕು ವರ್ಷಗಳಿಂದ ಸಾರಿಗೆ ನೌಕರರ ಹಿತರಕ್ಷಣೆಗಾಗಿ ಹೋರಾಡುತ್ತಾ ಬಂದಿರುವ ನೌಕರರ ಸಂಘವು, 2020-24ರ ವೇತನ ಒಪ್ಪಂದದ ಸಲುವಾಗಿ ಜಂಟಿ ಕ್ರಿಯಾ ಸಮಿತಿಗೆ ಸಂಪೂರ್ಣ ಬೆಂಬಲ ನೀಡಿತ್ತು. ಆದರೆ, ಈ ಬಾರಿ ಮುಷ್ಕರದ ಕರೆ ನೀಡಿದ ಬಳಿಕ ಸಮಿತಿಯ ಒಳಗಿನ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಮೂಲ ಉದ್ದೇಶಗಳೇ ಹಳ್ಳ ಹಿಡಿಯುತ್ತಿವೆ. ಈ ಸಮಿತಿಯಲ್ಲಿದ್ದರೆ ನೌಕರರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾದ ಕಾರಣ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.

ಅಧಿಕಾರಿಗಳ ಗಟ್ಟಿ ಭರವಸೆಗೆ ಗೌರವ

ಸಾರಿಗೆ ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮೇ 18 ರಂದು ಕಾರ್ಮಿಕ ಆಯುಕ್ತರು ಸಂಧಾನ ಸಭೆ ನಡೆಸಿದ್ದು, ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿ ಮೇ 25 ಕ್ಕೆ ಮುಂದಿನ ಸಭೆ ನಿಗದಿಪಡಿಸಿದ್ದಾರೆ. ಇದರ ಬೆನ್ನಲ್ಲೇ ಮೇ 18 ರ ರಾತ್ರಿ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು (MD) ನೌಕರರ ಸಂಘದೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಸರ್ಕಾರದ ಕಾರ್ಯಕ್ರಮಗಳು ಮುಗಿದ ತಕ್ಷಣ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಡುವುದಾಗಿ ಎಂಡಿ ಅವರು ಗಟ್ಟಿ ಭರವಸೆ ನೀಡಿದ್ದಾರೆ.

ತುರ್ತು ಸಭೆಯಲ್ಲಿ ಸರ್ವಾನುಮತದ ನಿರ್ಧಾರ

ವ್ಯವಸ್ಥಾಪಕ ನಿರ್ದೇಶಕರ ಭರವಸೆಯನ್ನು ನಂಬಿ, ಅವರ ಮಾತಿಗೆ ಗೌರವ ನೀಡುವ ಸಲುವಾಗಿ ನೌಕರರ ಸಂಘದ ಪದಾಧಿಕಾರಿಗಳು ಮೇ 18 ರ ರಾತ್ರಿ 11 ಗಂಟೆಗೆ ತುರ್ತು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಎಲ್ಲ ಪದಾಧಿಕಾರಿಗಳು ಸರ್ವಾನುಮತದಿಂದ ಜಂಟಿ ಕ್ರಿಯಾ ಸಮಿತಿಯಿಂದ ಹೊರಬರಲು ಮತ್ತು ಮುಷ್ಕರದ ಬೆಂಬಲವನ್ನು ವಾಪಸ್ ಪಡೆಯಲು ತೀರ್ಮಾನಿಸಿದ್ದಾರೆ ಎಂದು ಸಂಘದ ಅಧ್ಯಕ್ಷರಾದ ಜಗದೀಶ್ ಹೆಚ್.ಆರ್ ಮತ್ತು ಪ್ರಧಾನ ಕಾರ್ಯದರ್ಶಿ ರಾಮು ಡಿ. ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related Articles

Comments (0)

Leave a Comment