Video-ಪುನೀತ್ ರಾಜ್ ಕುಮಾರ್ ಕನ್ನಡದ ಆಸ್ತಿ :ಸಿಎಂ
- by Suddi Team
- November 5, 2021
- 60 Views

ಬೆಂಗಳೂರು:ಪುನೀತ್ ರಾಜ್ ಕುಮಾರ್ ಕನ್ನಡದ ಆಸ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಇಂದು ಸಂಜೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಎಂಟು ದಿನಗಳಾದ ಹಿನ್ನೆಲೆಯಲ್ಲಿ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಲಾಗಿದೆ. ಪುನೀತ್ ಇಲ್ಲವಾಗಿರುವುದು ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡಂತಾಗಿದೆ. ಇಡೀ ಕರ್ನಾಟಕದ ಜನತೆ ಕುಟುಂಬದೊಂದಿಗೆ ಇದೆ ಎಂದು ಧೈರ್ಯ ಹೇಳಲಾಗಿದೆ ಎಂದರು.
ಕೃತಜ್ಞತೆ : ಅಪ್ಪು ಅಂತ್ಯಕ್ರಿಯೆಯನ್ನು ಅತ್ಯಂತ ಪ್ರೀತಿ ಮತ್ತು ಗೌರವಗಳಿಂದ, ಆತ್ಮೀಯತೆಯಿಂದ ಹಾಗೂ ಭಾವನಾತ್ಮಕವಾಗಿ ನಡೆಸಿಕೊಟ್ಟಿರುವುದಕ್ಕಾಗಿ ಕುಟುಂಬದವರು ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. ಹಾಗೆ ನಡೆದುಕೊಳ್ಳುವುದು ಸರ್ಕಾರದ ಕರ್ತವ್ಯವಾಗಿದ್ದು, ಈ ಕರ್ತವ್ಯವನ್ನು ಪ್ರೀತಿ, ವಿಶ್ವಾಸದಿಂದ ನಡೆಸಿಕೊಡಲಾಗಿದೆ ಎಂದು ಹೇಳಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಕುಟುಂಬದವರು ಮುಂದೆ ಜರುಗಬೇಕಾದ ಕಾರ್ಯಕ್ರಮಗಳ ಬಗ್ಗೆ ತೀರ್ಮಾನ ಮಾಡುತ್ತಿದ್ದಾರೆ. ಅಪ್ಪು ಅವರಿಗಿದ್ದ ಜನಮನ್ನಣೆ, ಗೌರವಗಳಿಗೆ ತಕ್ಕ ಹಾಗೆ ಮುಂದಿನ ಕಾರ್ಯಗಳನ್ನು ನೆರವೇರಿಸಲಾಗುವುದು ಎಂದ ಮುಖ್ಯಮಂತ್ರಿಗಳು, ಅಪಾರ ಜನಸ್ತೋಮ ಪುನೀತ್ ಸಮಾಧಿ ಬಳಿ ದರ್ಶನವನ್ನು ಕಂಠೀರವ ಸ್ಟುಡಿಯೋದಲ್ಲಿ ಇಂದಿಗೂ ಪಡೆಯುತ್ತಿದ್ದಾರೆ.
ಕುಟುಂಬದ ಸದಸ್ಯರಿಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲಾಗುವುದು ಎಂದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನವೆಂಬರ್ 16 ರಂದು ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಅಗತ್ಯವಿರುವ ಭದ್ರತೆ ನೀಡಲಾಗುವುದು ಎಂದರು.
ಪದ್ಮಶ್ರೀ: ದಿ. ನಟ ಪುನೀತ್ ಅವರ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡಬೇಕೆಂಬ ಅಭಿಮಾನಿಗಳ ಅಭಿಲಾಷೆಯಂತೆ ಕ್ರಮ ವಹಿಸಲಾಗುವುದು ಎಂದ ಮುಖ್ಯಮಂತ್ರಿಗಳು, ಸದ್ಯ ಪುನೀತ್ ಅವರ ಕುಟುಂಬ ದುಃಖದಲ್ಲಿದ್ದು, ನವೆಂಬರ್ 16 ರ ಕಾರ್ಯಕ್ರಮ ಮುಗಿದ ನಂತರ ಈ ಬಗ್ಗೆ ಚರ್ಚಿಸಲಾಗುವುದು. ಅಪ್ಪು ಅವರಿಗೆ ಪದ್ಮಶ್ರೀ ನೀಡುವ ವಿಚಾರ ಸರ್ವಸಮ್ಮತವಾಗಿದೆ ಎಂದು ಸ್ಪಷ್ಟಪಡಿಸಿದರು.
Related Articles
Thank you for your comment. It is awaiting moderation.
Comments (0)