ಪ್ರಯಾಣಿಕರ ಸುರಕ್ಷತೆ ಸಾರಿಗೆ ನಿಗಮಗಳ ಬದ್ಧತೆ..!
- by Suddi Team
- December 3, 2025
- 25 Views
ಹುಬ್ಬಳ್ಳಿ : ಸರಕಾರಿ ಸ್ವಾಮ್ಯದ ಬಸ್‌ಗಳಲ್ಲಿ ನಿತ್ಯವೂ ಪ್ರಯಾಣಿಕರು ಸ್ವಸ್ಥವಾಗಿ ಮತ್ತು ಸುರಕ್ಷಿತವಾಗಿ ಪ್ರಯಾಣಿಸಬೇಕೆನ್ನುವುದೇ ಸಾರಿಗೆ ನಿಗಮಗಳ ಬದ್ಧತೆಯಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಗ್ರಾಮಾಂತರ ವಿಭಾಗದ ಲೆಕ್ಕಪತ್ರ ಮೇಲ್ವಿಚಾರಕ ಹುದ್ದೆಯಲ್ಲಿ ಕಳೆದ 39 ವರ್ಷಗಳ ಕಾಲ ಸೇವೆಸಲ್ಲಿಸಿದ್ದ ಅಶೋಕರೆಡ್ಡಿ ಎಸ್. ಮುಳ್ಳೂರ ಅವರ ಸೇವಾ ವಯೋ ನಿವೃತ್ತಿಯ ಅಭಿನಂದನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಲೆಕ್ಕಪತ್ರ ವಿಭಾಗದಲ್ಲಿ ಒಂದೂ ಕಪ್ಪುಚುಕ್ಕೆ ಇಲ್ಲದಂತೆ ಪ್ರಾಮಾಣಿಕ ಸೇವೆಗೈದಿರುವ ಅಶೋಕರೆಡ್ಡಿ ಮುಳ್ಳೂರ ಅವರ ಸೇವಾ ನೆನಪುಗಳು ಶಾಶ್ವತವಾಗಿ ಉಳಿಯಲಿವೆ ಎಂದರು.
ಮುಖ್ಯ ಅತಿಥಿಯಾಗಿದ್ದ ವಿಭಾಗೀಯ ಸಾರಿಗೆ ಅಧಿಕಾರಿ (ಡಿ.ಟಿ.ಓ.) ಶಿವರೆಡ್ಡಿ ಮಾತನಾಡಿ, ನಿಗಮದ ಹಣಕಾಸು ಲೆಕ್ಕಾಚಾರಗಳನ್ನು ದಕ್ಷತೆಯಿಂದ ಪಾರದರ್ಶಕವಾಗಿ ನಿರ್ವಹಿಸಿ ಇಲಾಖೆಯ ಪ್ರಶಂಸೆಗೆ ಅಶೋಕರೆಡ್ಡಿ ಮುಳ್ಳೂರ ಪಾತ್ರರಾಗಿದ್ದು, ಇವರ ವಿಶ್ರಾಂತ ಬದುಕು ನೆಮ್ಮದಿಯಿಂದ ಕೂಡಿರಲಿ ಎಂದರು.
ಗ್ರಾಮೀಣ ಡೀಪೋ ಮ್ಯಾನೇಜರ್ ಅನಿಲ ಹಳ್ಳೂರ, ನಿಗಮದ ವಿವಿಧ ವಿಭಾಗಗಳ ಆರ್.ಬಿ. ಬಡಿಗೇರ, ಅಣ್ಣಪ್ಪ ಜಾವಣ್ಣವರ ಸೇರಿದಂತೆ ಸಿಬ್ಬಂದಿ ಮಿತ್ರರು ಅಭಿನಂದನಾಪರ ಮಾತನಾಡಿದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಅಶೋಕರೆಡ್ಡಿ ಮುಳ್ಳೂರ, ನಿತ್ಯವೂ ಸಾರ್ವಜನಿಕರ ನೇರ ಸಂಪರ್ಕಕ್ಕೆ ಬರುವ ಸಾರಿಗೆ ನಿಗಮಗಳ ಸಿಬ್ಬಂದಿ ಕಷ್ಟಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ತಮ್ಮ 39 ವರ್ಷಗಳ ಸುದೀರ್ಘ ಸೇವೆಯಲ್ಲಿ ಲಭಿಸಿದ ಎಲ್ಲರ ಸಹಕಾರಕ್ಕೆ ಋಣಿಯಾಗಿರುವೆ ಎಂದರು.
ಸನ್ಮಾನ: ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡರ ಹಾಗೂ ಡಿಟಿಓ ಶಿವರೆಡ್ಡಿ ಸೇರಿದಂತೆ ವಿವಿಧ ವಿಭಾಗಗಳ ಸಿಬ್ಬಂದಿಯವರು ಅಶೋಕರೆಡ್ಡಿ ಮುಳ್ಳೂರ, ಪತ್ನಿ ಅಶ್ವಿನಿ ಮುಳ್ಳೂರ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು. ನಿವೃತ್ತ ಡಿಡಿಪಿಐ ಆರ್.ಎಸ್. ಮುಳ್ಳೂರ, ನಿವೃತ್ತ ಬಿಇಓ ಶಿವಾನಂದ ಮಲ್ಲಾಡದ, ಎನ್.ಎಂ. ಶಿವಳ್ಳಿ, ಮಲ್ಲಪ್ಪ ಕಳ್ಳಿಗುಡ್ಡಿ, ರಾಮಣ್ಣ ತೊರಗಲ್ಲ ಇತರರು ಅಭಿನಂದಿಸಿದರು. ಸುಜಾತಾ ತಿಮ್ಮಾಪೂರ ಸ್ವಾಗತಿಸಿದರು. ಎಸ್.ವೈ. ನಾಯಕ ವಂದಿಸಿದರು.
Related Articles
Thank you for your comment. It is awaiting moderation.


Comments (0)