ಮೂರು ವರ್ಷದಲ್ಲಿ ಬೆಂಗಳೂರು ಸುತ್ತಮುತ್ತ ರೈಲ್ವೆ ಲೆವೆಲ್ ಕ್ರಾಸಿಂಗ್ ಇಲ್ಲದಂತೆ ಕ್ರಮ; ಸೋಮಣ್ಣ
- by Suddi Team
- July 14, 2025
- 43 Views

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸುತ್ತಮುತ್ತ 100 ಕಿ.ಮೀ. ವ್ಯಾಪ್ತಿಯೊಳಗಿನ ಎಲ್ಲ ಲೆವೆಲ್ ಕ್ರಾಸಿಂಗ್‌ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ತೆಗೆದುಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಪ್ರಕಟಿಸಿದರು.
ಬೆಂಗಳೂರು-ಮೈಸೂರು ರೈಲ್ವೆ ಮಾರ್ಗದ ಕೆಂಗೇರಿ-ಹೆಜ್ಜಾಲ ಭಾಗದಲ್ಲಿ ಬರುವ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 16ಕ್ಕೆ (ರಾಮೋಹಳ್ಳಿ ಗೇಟ್) ಬದಲಾಗಿ ರಸ್ತೆ ಕೆಳ ಸೇತುವೆಯ (RUB) ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು ಮತ್ತು ಲೆವೆಲ್ ಕ್ರಾಸಿಂಗ್ ಸಂಖ್ಯೆ ಗೇಟ್ ಸಂಖ್ಯೆ 15ರ (ಚಲ್ಲಘಟ್ಟ ಗೇಟ್) ಬದಲಾಗಿ ನಿರ್ಮಿಸಲಾದ ರಸ್ತೆ ಕೆಳ ಸೇತುವೆಯನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸೋಮಣ್ಣ, ದೇಶಾದ್ಯಂತ ರಸ್ತೆ ಮೇಲ್ಸೇತುವೆಗಳು/ರಸ್ತೆ ಕೆಳಸೇತುವೆ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಭಾರತೀಯ ರೈಲ್ವೆಯೇ ಭರಿಸುತ್ತಿದೆ. ಕಳೆದ 10 ವರ್ಷಗಳಲ್ಲಿ 640ಕ್ಕೂ ಅಧಿಕ ರಸ್ತೆ ಕೆಳಸೇತುವೆಗಳು ಮತ್ತು ರಸ್ತೆ ಮೇಲ್ಸೇತುವೆಗಳು ಪೂರ್ಣಗೊಂಡಿವೆ. ಹೊಸದಾಗಿ ನಿರ್ಮಾಣವಾಗಿರುವ ಚಲ್ಲಘಟ್ಟ ರಸ್ತೆ ಕೆಳ ಸೇತುವೆ ಮತ್ತು ಈಗ ಕಾಮಗಾರಿ ಪ್ರಾರಂಭವಾಗಲಿರುವ ರಾಮೋಹಳ್ಳಿ ರಸ್ತೆ ಕೆಳ ಸೇತುವೆಗಳಿಂದ, ಲೆವೆಲ್ ಕ್ರಾಸಿಂಗ್‌ಗಳಲ್ಲಿ ವಾಹನ ಸಂಚಾರಕ್ಕೆ ಉಂಟಾಗುವ ವಿಳಂಬವು ಕಡಿಮೆಯಾಗಲಿದೆ. ಮೈಸೂರು ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಮೂಲಕ ಸ್ಥಳೀಯರಿಗೆ ಹೆಚ್ಚು ಉಪಯೋಗವಾಗಲಿದೆ ಎಂದರು.
ಸ್ಟೇಷನ್ ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು ಕೆಎಸ್ಆರ್ ಬೆಂಗಳೂರು ನಿಲ್ದಾಣವನ್ನು ವಿಶ್ವ ದರ್ಜೆಗೆ ಅನುಗುಣವಾಗಿ ಪುನರಾಭಿವೃದ್ಧಿಗೊಳಿಸುವುದೂ ಸೇರಿ ನಗರದಲ್ಲಿ ಪ್ರಸ್ತುತ ನಡೆಯುತ್ತಿರುವ ಮತ್ತು ಮುಂಬರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ಎರಡು ಹೊಸ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುವುದು, ಬೆಂಗಳೂರು ಉಪನಗರ ರೈಲು ಯೋಜನೆ ಪ್ರಗತಿಯಲ್ಲಿದೆ, ಬೈಯಪ್ಪನಹಳ್ಳಿ-ಹೊಸೂರು ಮಾರ್ಗದ ಡಬ್ಲಿಂಗ್ ಪ್ರಗತಿಯಲ್ಲಿದೆ ಮತ್ತು ಬೆಂಗಳೂರು ಬಳಿ ಮೆಗಾ ಕೋಚಿಂಗ್ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಈ ರಸ್ತೆ ಕೆಳ ಸೇತುವೆಯ ನಿರ್ಮಾಣದಿಂದ ಸ್ಥಳೀಯ ನಿವಾಸಿಗಳ ದೀರ್ಘಕಾಲದ ಬೇಡಿಕೆ ಈಡೇರಿಸಿದಂತಾಗಿದೆ. ಲೆವೆಲ್ ಕ್ರಾಸಿಂಗ್‌ಗಳ ಬಳಿ ವಾಹನಗಳು ಕಾಯುವ ಸಮಯವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕುವುದು ಅತ್ಯಗತ್ಯ ಎಂದು ಹೇಳಿದರು. ದೇಶಾದ್ಯಂತ ಇಂತಹ ಮೂಲಸೌಕರ್ಯ ಅಭಿವೃಧ್ದಿಗಳನ್ನು ತ್ವರಿತವಾಗಿ ಹೆಚ್ಚಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
Related Articles
Thank you for your comment. It is awaiting moderation.
Comments (0)