ಮಾಸಕ್ಕೊಮ್ಮೆ ಬಸ್ ನಿಲ್ದಾಣ, ಶೌಚಾಲಯಗಳ ಸ್ವಚ್ಛತೆ ಪರಿಶೀಲಿಸಿ ವರದಿ ನೀಡಿ: ರಾಮಲಿಂಗಾರೆಡ್ಡಿ ಸೂಚನೆ
- by Suddi Team
- January 22, 2026
- 16 Views
ಬೆಂಗಳೂರು: ಇನ್ಮುಂದೆ ಆಯಾಯ ನಿಗಮಗಳ ವ್ಯಾಪ್ತಿಗೊಳಪಡುವ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮಾಸಕ್ಕೆ ಒಮ್ಮೆ ಖುದ್ದಾಗಿ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಬಸ್ ನಿಲ್ದಾಣಗಳನ್ನು ಹಾಗೂ ನಿಲ್ದಾಣಗಳಲ್ಲಿನ ಶೌಚಾಲಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿರುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಯ 4 ನಿಗಮಗಳಿಂದ ಪ್ರತಿನಿತ್ಯ ಅಂದಾಜು 1 ಕೋಟಿ 15 ಲಕ್ಷ ಪ್ರಯಾಣಿಕರಿಗೆ ಉತ್ತಮವಾದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತಿರುವ ಸೇವೆಗೆ ದೇಶದಲ್ಲಿಯೇ ಹೆಗ್ಗಳಿಕೆಯನ್ನು ಪಡೆದಿದೆ ಆದರೆ, ನಿಗಮಗಳ ವ್ಯಾಪ್ತಿಯಲ್ಲಿರುವ ಅನೇಕ ಬಸ್ ನಿಲ್ದಾಣಗಳಲ್ಲಿ ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವ ಬಗ್ಗೆ ಹಾಗೂ ಅಶುಚಿಯ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದಿರುತ್ತಾರೆ ಅಲ್ಲದೆ, ಉಪ ಲೋಕಾಯುಕ್ತರು ಸಹ ಈ ಬಗ್ಗೆ ಅನೇಕ ಬಾರಿ ಬಸ್ ನಿಲ್ದಾಣಗಳಿಗೆ ಬೇಟಿ ನೀಡಿ ಸ್ವಯಂ ದೂರನ್ನು ದಾಖಲಿಸಿಕೊಂಡು ಮಾಹಿತಿಯನ್ನು ಈ ಕಛೇರಿಗೆ ನೀಡಿದ್ದಾರೆ. ಆದ್ದರಿಂದ, ಸಾರ್ವಜನಿಕರ ಹಿತೃಷ್ಟಿಯಿಂದ ಹಾಗೂ ಸಂಸ್ಥೆಯ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಆಯಾಯ ನಿಗಮಗಳ ವ್ಯಾಪ್ತಿಗೊಳಪಡುವ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮಾಸಕ್ಕೆ ಒಮ್ಮೆ ಖುದ್ದಾಗಿ ನಿಲ್ದಾಣಗಳಿಗೆ ಭೇಟಿ ನೀಡಿ ನಿಲ್ದಾಣಗಳನ್ನು ಹಾಗೂ ನಿಲ್ದಾಣಗಳಲ್ಲಿನ ಶೌಚಾಲಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿರುವ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಕ್ತ ಆದೇಶವನ್ನು ಹೊರಡಿಸಲು ಸೂಚಿಸಿದ್ದಾರೆ.
ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸದರಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸಹ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
Related Articles
Thank you for your comment. It is awaiting moderation.


Comments (0)