ನಾಳೆ ಬೆಂಗಳೂರಿಗೆ ಮೋದಿ ಭೇಟಿ; ವಂದೇ ಭಾರತ್, ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ಕರ್ನಾಟಕಕ್ಕೆ ಭೇಟಿ ನೀಡಲಿದ್ದು,ಬೆಂಗಳೂರಿನ ಕೆ ಎಸ್ ಆರ್ ರೈಲು ನಿಲ್ದಾಣದಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ  ಹಸಿರು ನಿಶಾನೆ ತೋರಲಿದ್ದಾರೆ. ನಂತರ, ಬೆಂಗಳೂರು ಮೆಟ್ರೋದ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿ, ಆರ್ ವಿ ರಸ್ತೆ (ರಾಗಿಗುಡ್ಡ) ಯಿಂದ ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಲಿದ್ದಾರೆ.

ಪ್ರಧಾನಮಂತ್ರಿ ಅವರು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ನಗರ ಸಂಪರ್ಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದು, ನಂತರ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬೆಂಗಳೂರು ಮೆಟ್ರೋ ಹಂತ-2 ಯೋಜನೆಯಡಿಯಲ್ಲಿ ಆರ್.ವಿ. ರಸ್ತೆ (ರಾಗಿಗುಡ್ಡ) ಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗವನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ಸುಮಾರು 7,160 ಕೋಟಿ ರೂ. ವೆಚ್ಚದ ಈ ಮಾರ್ಗವು 19 ಕಿ.ಮೀ.ಗಿಂತ ಹೆಚ್ಚು ಉದ್ದವಿದ್ದು, 16 ನಿಲ್ದಾಣಗಳನ್ನು ಹೊಂದಿದೆ. ಈ ಹಳದಿ ಮಾರ್ಗದ ಉದ್ಘಾಟನೆಯೊಂದಿಗೆ, ಬೆಂಗಳೂರಿನಲ್ಲಿ ಮೆಟ್ರೋ ಕಾರ್ಯಾಚರಣೆಯ ಜಾಲವು 96 ಕಿ.ಮೀ.ಗಳಿಗಿಂತ ಹೆಚ್ಚಾಗುತ್ತದೆ ಮತ್ತು ಈ ಪ್ರದೇಶದ ಜನರಿಗೆ ಸೇವೆ ಒದಗಿಸುತ್ತದೆ.

ಪ್ರಧಾನಮಂತ್ರಿ ಅವರು 15,610 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ ಬೆಂಗಳೂರು ಮೆಟ್ರೋ ಹಂತ-3 ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯ ಒಟ್ಟು ಉದ್ದ 44 ಕಿ.ಮೀ.ಗಳಿಗಿಂತ ಹೆಚ್ಚು ಮತ್ತು 31 ಎತ್ತರದ ನಿಲ್ದಾಣಗಳನ್ನು ಹೊಂದಿರುತ್ತದೆ. ಈ ಮೂಲಸೌಕರ್ಯ ಯೋಜನೆಯು ನಗರದ ವಸತಿ, ಕೈಗಾರಿಕೆ, ವಾಣಿಜ್ಯ ಮತ್ತು ಶೈಕ್ಷಣಿಕ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸುತ್ತದೆ.

ಪ್ರಧಾನಮಂತ್ರಿ ಅವರು ಬೆಂಗಳೂರಿನಿಂದ ಮೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಇವುಗಳಲ್ಲಿ ಬೆಂಗಳೂರಿನಿಂದ ಬೆಳಗಾವಿ, ಅಮೃತಸರದಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮತ್ತು ನಾಗ್ಪುರ್ (ಅಜ್ನಿ) ದಿಂದ ಪುಣೆ ರೈಲುಗಳು ಸೇರಿವೆ. ಈ ಹೈಸ್ಪೀಡ್ ರೈಲುಗಳು ಪ್ರಾದೇಶಿಕ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತವೆ ಮತ್ತು ಪ್ರಯಾಣಿಕರಿಗೆ ವಿಶ್ವ ದರ್ಜೆಯ ಪ್ರಯಾಣದ ಅನುಭವವನ್ನು ಒದಗಿಸುತ್ತವೆ.

Related Articles

Comments (0)

Leave a Comment