ಕೆಎಸ್ಆರ್ಟಿಸಿಗೆ ರಾಷ್ಟ್ರಮಟ್ಟದ 3 ‘ಅಡ್-ವರ್ಲ್ಡ್’ ಪ್ರಶಸ್ತಿಗಳ ಗರಿ
- by Suddi Team
- April 11, 2026
- 135 Views
ಬೆಂಗಳೂರು/ನವದೆಹಲಿ: ಒಂದು ಕಾಲದಲ್ಲಿ ಕೆಂಪು ಬಸ್ಸಿನ ಸದ್ದಿಗೆ ಸೀಮಿತವಾಗಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಇಂದು ಆಧುನಿಕ ತಂತ್ರಜ್ಞಾನ ಮತ್ತು ಐಷಾರಾಮಿ ಬ್ರ್ಯಾಂಡಿಂಗ್ ಮೂಲಕ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ. ಇದಕ್ಕೆ ಸಾಕ್ಷಿ ಎಂಬಂತೆ, ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ ‘AdWorld Showdown’ ಪ್ರಶಸ್ತಿ ಸಮಾರಂಭದಲ್ಲಿ ಕೆಎಸ್ಆರ್ಟಿಸಿ ಮೂರು ಪ್ರಮುಖ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡು ಬೀಗಿದೆ.
ಬ್ರ್ಯಾಂಡಿಂಗ್ ಲೋಕದ ಹೊಸ ಅಲೆ:
ರಸ್ತೆಯಲ್ಲಿ ಸಾಗುವ ಬಸ್ಸು ಕೇವಲ ವಾಹನವಲ್ಲ, ಅದು ಪ್ರಯಾಣಿಕರ ನಂಬಿಕೆಯ ಬ್ರ್ಯಾಂಡ್ ಎಂಬುದನ್ನು ಕೆಎಸ್ಆರ್ಟಿಸಿ ಸಾಬೀತುಪಡಿಸಿದೆ. ರಾಜಹಂಸದ ಕಾಲದಿಂದ ಅಂಬಾರಿ ಉತ್ಸವ, ಪಲ್ಲಕ್ಕಿ, ಐರಾವತ ಕ್ಲಬ್ ಕ್ಲಾಸ್ 2.0 ಮತ್ತು ಇತ್ತೀಚಿನ ಅಶ್ವಮೇಧ ಬಸ್ಸುಗಳವರೆಗೆ ನಿಗಮವು ನಡೆಸಿದ ಬ್ರ್ಯಾಂಡಿಂಗ್ ಕ್ರಾಂತಿ ಅದ್ಭುತ. ಗ್ರಾಹಕರನ್ನು ಸೆಳೆಯುವ ಮತ್ತು ಉಳಿಸಿಕೊಳ್ಳುವ (Customer Acquisition & Retention) ವಿಭಾಗದಲ್ಲಿ ಈ ಬಸ್ಸುಗಳ ವಿನ್ಯಾಸಕ್ಕೆ ಪ್ರಶಸ್ತಿ ಲಭಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.
ಬೆರಳ ತುದಿಯಲ್ಲಿ ಟಿಕೆಟ್, ನಗದುರಹಿತ ಪಾವತಿ:
ತಂತ್ರಜ್ಞಾನದ ಓಟದಲ್ಲಿ ಸಾರ್ವಜನಿಕ ಸಾರಿಗೆ ಹಿಂದೆ ಬಿದ್ದಿಲ್ಲ ಎಂಬುದಕ್ಕೆ ‘ಅವತಾರ್ 4.0’ (AWATAR 4.0) ಸಾಕ್ಷಿ. ಬಸ್ಸಿನ ಸೀಟು ಎಲ್ಲಿದೆ? ಟಿಕೆಟ್ ದರ ಎಷ್ಟು? ಎಂಬ ಮಾಹಿತಿಯಿಂದ ಹಿಡಿದು, ಜೇಬಿನಲ್ಲಿ ಹಣವಿಲ್ಲದಿದ್ದರೂ ಯುಪಿಐ (UPI) ಮೂಲಕ ಕ್ಷಣಮಾತ್ರದಲ್ಲಿ ಹಣ ಪಾವತಿಸುವವರೆಗೆ ಎಲ್ಲವನ್ನೂ ಸರಳಗೊಳಿಸಿರುವ ಈ ವ್ಯವಸ್ಥೆ ‘Best Use of Technology’ ಪ್ರಶಸ್ತಿಗೆ ಭಾಜನವಾಗಿದೆ.
ಸಿಬ್ಬಂದಿಯೇ ಶಕ್ತಿ:
ಬಸ್ಸುಗಳು ಸುಂದರವಾಗಿದ್ದರೆ ಸಾಲದು, ಅವುಗಳನ್ನು ಓಡಿಸುವ ಚಾಲಕರು ಮತ್ತು ನಿರ್ವಾಹಕರು ಸದೃಢರಾಗಿರಬೇಕು. ನಿಗಮವು ತನ್ನ ಸಿಬ್ಬಂದಿಗಾಗಿ ಹಮ್ಮಿಕೊಂಡಿರುವ ವಿಶೇಷ ಆರೋಗ್ಯ ತಪಾಸಣೆ ಮತ್ತು ಮಾನವ ಸಂಪನ್ಮೂಲ ಉಪಕ್ರಮಗಳು ದೇಶದ ಇತರ ಸಾರಿಗೆ ಸಂಸ್ಥೆಗಳಿಗೆ ಮಾದರಿಯಾಗಿವೆ. ಇದೇ ಕಾರಣಕ್ಕೆ ಮಾನವ ಸಂಪನ್ಮೂಲ ಮತ್ತು ಆರೋಗ್ಯ ವಿಭಾಗದಲ್ಲಿ ನಿಗಮಕ್ಕೆ ವಿಶೇಷ ಗೌರವ ಸಂದಿದೆ.
ನವದೆಹಲಿಯ ಸಮಾರಂಭದಲ್ಲಿ ಹುಲ್ಟ್ ಇಂಟರ್ ನ್ಯಾಷನಲ್ ಬಿಸಿನೆಸ್ ಸ್ಕೂಲ್ನ ಮಾರ್ಕೆಟಿಂಗ್ ಲೀಡರ್ ನಿಧಿ ಎಸ್ ಮಿತ್ತಲ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಅಧಿಕಾರಿಗಳಾದ ಎಂ.ಪಿ. ಶ್ರೀಹರಿ ಬಾಬು ಮತ್ತು ಎಸ್. ಎಸ್. ದಶರಥ್ ಅವರ ಮುಖದಲ್ಲಿ ಕೆಎಸ್ಆರ್ಟಿಸಿಯ ಯಶಸ್ಸಿನ ಸಂಭ್ರಮ ಎದ್ದು ಕಾಣುತ್ತಿತ್ತು. ಈ ಪ್ರಶಸ್ತಿಗಳು ಕೇವಲ ಫಲಕಗಳಲ್ಲ, ಬದಲಿಗೆ ದಿನದ 24 ಗಂಟೆಯೂ ಶ್ರಮಿಸುವ ಅಧಿಕಾರಿ, ಸಿಬ್ಬಂದಿಯ ಬೆವರಿನ ಫಲ.
Related Articles
Thank you for your comment. It is awaiting moderation.


Comments (0)