ಕೆಎಸ್ಆರ್ಟಿಸಿ ಸಿಬ್ಬಂದಿಗೆ ವಂಚನೆ ಆರೋಪ; ಕೇಂದ್ರ ಕಚೇರಿ ನೌಕರನ ಅಮಾನತು…!

ಬೆಂಗಳೂರು: ವರ್ಗಾವಣೆ ಮಾಡಿಸಿಕೊಡುತ್ತೇನೆ, ಪುನರ್ ನೇಮಕ ಆದೇಶ ಮಾಡಿಸಿಕೊಡುತ್ತೇನೆ ಎಂದು ಸಿಬ್ಬಂದಿಯನ್ನು ವಂಚಿಸುತ್ತಿದ್ದ ಪ್ರಕರಣವನ್ನು ಸಾರಿಗೆ ನಿಗಮ ಪತ್ತೆ ಹಚ್ಚಿದ್ದು,ವಂಚನೆ ಆರೋಪದಡಿ ಕೆಎಸ್ಆರ್ಟಿಸಿ ನೌಕರನನ್ನು ಸೇವೆಯಿಂದ ಅಮಾನತುಗೊಳಿಸಿ‌ ಆದೇಶಿಸಲಾಗಿದೆ.

ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ಕುಳಿತೇ ಸಾರಿಗೆ ನಿಗಮದ‌ ಸಿಬ್ಬಂದಿಯನ್ನು ವಂಚಿಸುತ್ತಿದ್ದ ವ್ಯಕ್ತಿಯ ಬಂಡವಾಳ ಬಯಲಾಗಿದೆ. ಸಾರಿಗೆ ನಿಗಮದಲ್ಲಿ ವರ್ಗಾವಣೆ ಮತ್ತು ಪುನರ್ ಆದೇಶದ‌ ದಾಖಲೆಗಳು ನಕಲಿ ಎನ್ನುವ ವಿಷಯ ಬೆಳಕಿಗೆ ಬರುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಾರಿಗೆ‌ ಸಚಿವ ರಾಮಲಿಂಗಾರೆಡ್ಡಿ ತನಿಖೆಗೆ ಆದೇಶಿಸಿದ್ದಾರೆ.

ಪ್ರಕರಣದ ತನಿಖೆ ಆರಂಭಿಸಿದ ಕೆಎಸ್ಆರ್ಟಿಸಿ ಅಧಿಕಾರಿಗಳು ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಯಲ್ಲಿ ಕಿರಿಯ ಸಹಾಯಕ -ಕಂ- ಡಾಟಾ ಎಂಟ್ರಿ ಆಪರೇಟರ್ ರಿಚರ್ಡ್ ಜೆ ರನ್ನು ಕರ್ತವ್ಯದಿಂದ ಅಮಾನತು ಮಾಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.

ಪ್ರಕರಣವೇನು?

ಕರಾರಸಾ ನಿಗಮದ ಕೇಂದ್ರ ಕಛೇರಿಯ ಲೆಕ್ಕಪತ್ರ ಇಲಾಖೆಯಲ್ಲಿ ಕಿರಿಯ ಸಹಾಯಕ -ಕಂ- ಡಾಟಾ ಎಂಟ್ರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಿಚರ್ಡ್ ಜೆ, ಶಿವಮೊಗ್ಗ ಘಟಕದ ಸಹಾಯಕ ಕುಶಲಕರ್ಮಿ ನಾಗರಾಜಪ್ಪರನ್ನು ಅವರ ಕೋರಿಕೆಯಂತೆ ದಾವಣಗೆರೆ ವಿಭಾಗಕ್ಕೆ ವರ್ಗಾವಣೆ ಮಾಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆದಿದ್ದಾರೆ ಬಳಿಕೆ ವಜಾಗೊಂಡ ಚಾಲಕ ನಾಗರಾಜ ಎನ್.ಎ ರವರನ್ನು ಪುನರ್ ನೇಮಕ ಮಾಡಿಸುವುದಾಗಿ ಮತ್ತು ಅವರ ಸ್ನೇಹಿತ ಚಾಲಕ ಚಂದ್ರಹಾಸ ಎಸ್ ಆಚಾರಿ ರವರನ್ನು ಕುಂದಾಪುರ ಘಟಕದಿಂದ ಶಿವಮೊಗ್ಗ ವಿಭಾಗಕ್ಕೆ ವರ್ಗಾವಣೆ ಮಾಡಿಸುವುದಾಗಿ ನಂಬಿಸಿ ಅವರಿಂದ ಹಣವನ್ನು ಪಡೆದು, ಅವರುಗಳಿಗೆ ನಕಲಿ ವರ್ಗಾವಣೆ ಮತ್ತು ಪುನರ್ ನೇಮಕಾತಿ ಆದೇಶಗಳನ್ನು ಸೃಷ್ಟಿಸಿ, ಆ ಆದೇಶಗಳ ಮೇಲೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಾದ ಮುಖ್ಯ ಯಾಂತ್ರಿಕ ಅಭಿಯಂತರರು, ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾ) ಮತ್ತು ನಿಕಟ ಪೂರ್ವ ವ್ಯವಸ್ಥಾಪಕ ನಿರ್ದೇಶಕ ರವರುಗಳ ಸಹಿಗಳನ್ನು ಸ್ಕ್ಯಾನ್ ಮಾಡಿ ಅವರೇ ತಯಾರಿಸಿದ್ದ ಆದೇಶಗಳಿಗೆ ಲಗತ್ತಿಸಿ, ಪ್ರಿಂಟ್ ತೆಗೆಯುವ ಮೂಲಕ ನಕಲಿ ಆದೇಶಗಳನ್ನು ಸೃಷ್ಟಿಸಿದ್ದರು.

ಎಲ್ಲಾ ಆದೇಶಗಳನ್ನು ಮೂವರಿಗೂ ಕಳುಹಿಸುವ ಮೂಲಕ ಸಿಬ್ಬಂದಿಗಳಿಗೆ ವಂಚಿಸಿರುವುದಲ್ಲದೆ, ಸಂಸ್ಥೆಯ ಹಿರಿಯ ಅಧಿಕಾರಿಗಳ ಸಹಿಯನ್ನು ಸ್ಕ್ಯಾನ್ ಮಾಡುವ ಮೂಲಕ ದುರುಪಯೋಗಪಡಿಸಿಕೊಂಡು ನಕಲಿ ಆದೇಶಗಳನ್ನು ಸೃಷ್ಟಿಸಿ, ಸಂಸ್ಥೆಯ ಘನತೆಗೆ ಕುಂದುಂಟಾಗುವಂತೆ ನಡೆದುಕೊಳ್ಳುವ ಮೂಲಕ ದುರ್ನಡತೆಯನ್ನು ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎನ್ನವ ಕಾರಣದಿಂದ  ತಕ್ಷಣದಿಂದ ಜಾರಿಗೆ ಬರುವಂತೆ ರಿಚರ್ಡ್ ರನ್ನು ಕರ್ತವ್ಯದಿಂದ ಅಮಾನತ್ತು ಮಾಡಲಾಗಿದೆ.

Related Articles

Comments (0)

Leave a Comment