ಮೈಸೂರು ದಸರಾ ಹಾಗೂ ಹಬ್ಬದ ರಜೆ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ 3,700ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ ವ್ಯವಸ್ಥೆ

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ-2026 ಹಾಗೂ ಸಾಲು ಸಾಲು ಹಬ್ಬಗಳ ರಜೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಬೃಹತ್ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ. ನಾಡಹಬ್ಬ ದಸರಾ ವೀಕ್ಷಣೆಗೆ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಮತ್ತು ಹಬ್ಬದ ರಜೆಗೆ ಊರುಗಳಿಗೆ ತೆರಳುವ ಜನರಿಗಾಗಿ ಒಟ್ಟು 3,700ಕ್ಕೂ ಹೆಚ್ಚು ವಿಶೇಷ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲು ನಿಗಮವು ಸರ್ವಸನ್ನದ್ಧವಾಗಿದೆ.

ಈ ವಿಶೇಷ ಸಾರಿಗೆ ವ್ಯವಸ್ಥೆಯಲ್ಲಿ ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಸಾಮಾನ್ಯ ಸಾರಿಗೆಗಳಾದ ವೇಗದೂತ ಬಸ್‌ಗಳ ಜೊತೆಗೆ ಐಷಾರಾಮಿ ಬಸ್‌ಗಳಾದ ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ ಕ್ಲಬ್ ಕ್ಲಾಸ್, ಪಲ್ಲಕ್ಕಿ ಸ್ಲೀಪರ್ ಹಾಗೂ ಅಶ್ವಮೇಧ ಸಾರಿಗೆ ಸೇವೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

ಹಬ್ಬದ ರಜೆ ಪ್ರಯುಕ್ತ 3,000ಕ್ಕೂ ಹೆಚ್ಚು ವಿಶೇಷ ಬಸ್:

ಸಾರ್ವಜನಿಕರ ದಟ್ಟಣೆಯನ್ನು ನಿಯಂತ್ರಿಸಲು ದಿನಾಂಕ 16/10/2026 ರಿಂದ 20/10/2026 ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಾಗೂ ಅಂತರರಾಜ್ಯದ ಪ್ರಮುಖ ನಗರಗಳಿಗೆ 3,000ಕ್ಕೂ ಹೆಚ್ಚು ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಈ ವಾಹನಗಳು ಬೆಂಗಳೂರಿನ ಮೆಜೆಸ್ಟಿಕ್ (ಕೆಂಪೇಗೌಡ ಬಸ್ ನಿಲ್ದಾಣ), ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣಗಳಿಂದ ಹೊರಡಲಿವೆ. ಅಷ್ಟೇ ಅಲ್ಲದೆ, ಮುಂಗಡ ಕಾಯ್ದಿರಿಸಿದ ಹೆಚ್ಚುವರಿ ವಾಹನಗಳನ್ನು ವಿಜಯನಗರ TTMC, ಯಶವಂತಪುರ TTMC, ಜಯನಗರ TTMC, ಬಸವೇಶ್ವರನಗರ ಬಸ್ ನಿಲ್ದಾಣ, ಡೊಮ್ಮಲೂರು ಬಸ್ ನಿಲ್ದಾಣ ಹಾಗೂ ಬನಶಂಕರಿ TTMC ನಿಲ್ದಾಣಗಳಿಂದಲೂ ಕಾರ್ಯಾಚರಣೆ ಮಾಡಲಾಗುತ್ತದೆ. ನಂತರ ದಿನಾಂಕ 20/10/2026 ರಿಂದ 21/10/2026 ರವರೆಗೆ ರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಮರಳಿ ಬರಲು ವಿಶೇಷ ಬಸ್‌ಗಳು ಸಂಚರಿಸಲಿವೆ.

ಈ ಬಸ್‌ಗಳು ಮಂಗಳೂರು, ಉಡುಪಿ, ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ಬೆಳಗಾವಿ, ಬಿಜಾಪುರ, ಕಾರವಾರ, ಬಳ್ಳಾರಿ, ಕಲಬುರಗಿ ಹಾಗೂ ನೆರೆ ರಾಜ್ಯಗಳಾದ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಮುಂಬೈ, ಪುಣೆ ಮತ್ತು ಪಣಜಿ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಿಗೆ ಸಂಚರಿಸಲಿವೆ.

ಮೈಸೂರು ದಸರಾ ಪ್ರಯುಕ್ತ 700 ವಿಶೇಷ ಬಸ್:

ದಸರಾ ಮಹೋತ್ಸವಕ್ಕಾಗಿ ಪ್ರತ್ಯೇಕವಾಗಿ 700 ವಿಶೇಷ ಬಸ್‌ಗಳನ್ನು ನಿಯೋಜಿಸಲಾಗಿದೆ. ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ನೇರವಾಗಿ 300 ಹೆಚ್ಚುವರಿ ಬಸ್‌ಗಳು ಓಡಾಡಲಿವೆ. ಉಳಿದಂತೆ ಮೈಸೂರಿನ ಸುತ್ತಮುತ್ತಲಿನ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿಬೆಟ್ಟ, ಕೆ.ಆರ್.ಎಸ್. ಅಣೆಕಟ್ಟು/ಬೃಂದಾವನ, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಮಂಡ್ಯ, ಕೊಳ್ಳೇಗಾಲ, ಎಚ್.ಡಿ.ಕೋಟೆ, ಚಾಮರಾಜನಗರ ಹಾಗೂ ಹುಣಸೂರಿಗೆ ಸಂಪರ್ಕ ಕಲ್ಪಿಸಲು 400 ವಿಶೇಷ ಬಸ್‌ಗಳನ್ನು ಓಡಿಸಲಾಗುತ್ತದೆ. ಇದರ ಜೊತೆಗೆ, ಬೆಂಗಳೂರಿನ ಕೆಂಪೇಗೌಡ ಅಂತರರಾಜ್ಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ನೇರ ಸಾರಿಗೆಯಾಗಿ ‘ಫ್ಲೈ ಬಸ್’ (Fly Bus) ಸೌಲಭ್ಯವನ್ನು ನೀಡಲಾಗಿದೆ.

ಮುಂಗಡ ಟಿಕೆಟ್ ಬುಕಿಂಗ್ ಮತ್ತು ಭಾರಿ ರಿಯಾಯಿತಿಗಳು:

ಪ್ರಯಾಣಿಕರು ನಿಗಮದ ಅಧಿಕೃತ ವೆಬ್‌ಸೈಟ್ www.ksrtc.karnataka.gov.in ಅಥವಾ ಮೊಬೈಲ್ ಆಪ್ ಮೂಲಕ ಆನ್‌ಲೈನ್ ಇ-ಟಿಕೆಟ್ ಬುಕ್ ಮಾಡಬಹುದು. ಕರ್ನಾಟಕ ಹಾಗೂ ನೆರೆ ರಾಜ್ಯಗಳಲ್ಲಿರುವ ಗಣಕೀಕೃತ ಮುಂಗಡ ಬುಕಿಂಗ್ ಕೌಂಟರ್‌ಗಳ ಮೂಲಕವೂ ಆಸನ ಕಾಯ್ದಿರಿಸಬಹುದು. ಮುಂಗಡ ಬುಕಿಂಗ್ ಮಾಡುವ ಗ್ರಾಹಕರಿಗೆ ಕೆಇಆರ್‌ಟಿಸಿ ಭರ್ಜರಿ ಆಫರ್ ನೀಡಿದೆ:

ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇಕಡಾ 5ರಷ್ಟು ರಿಯಾಯಿತಿ ಸಿಗಲಿದೆ.

ಹೋಗುವ ಮತ್ತು ಬರುವ (ರೌಂಡ್ ಟ್ರಿಪ್) ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದರೆ, ಬರುವ ಪ್ರಯಾಣದ ದರದಲ್ಲಿ ಶೇಕಡಾ 10ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಟಿಕೆಟ್‌ನಲ್ಲಿ ನಮೂದಿಸಲಾಗಿರುವ ಬಸ್ ನಿಲ್ದಾಣ ಅಥವಾ ಪಿಕ್-ಅಪ್ ಪಾಯಿಂಟ್ ಹೆಸರನ್ನು ಗಮನಿಸುವಂತೆ ಕೋರಲಾಗಿದೆ. ನಿಗಮದ ವ್ಯಾಪ್ತಿಯ ಎಲ್ಲಾ ತಾಲೂಕು/ಜಿಲ್ಲಾ ಕೇಂದ್ರಗಳಿಂದಲೂ ಜನದಟ್ಟಣೆಗೆ ಅನುಗುಣವಾಗಿ ವಿಶೇಷ ಸಾರಿಗೆ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

 

Related Articles

Comments (0)

Leave a Comment