ಬರ ಪರಿಹಾರಕ್ಕೆ ₹22,400 ಕೋಟಿ ಬಿಡುಗಡೆ ಮಾಡಿ: ಕೇಂದ್ರಕ್ಕೆ ಡಾ. ಜಿ. ಪರಮೇಶ್ವರ್ ಒತ್ತಾಯ
- by Suddi Loka
- November 24, 2026
- 8 Views
ಬೆಂಗಳೂರು: ಕರ್ನಾಟಕವು ತೀವ್ರ ಬರಗಾಲ ಎದುರಿಸುತ್ತಿದ್ದು, ರಾಜ್ಯದ 226 ತಾಲ್ಲೂಕುಗಳಲ್ಲಿ 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಇದರಿಂದ ಅಂದಾಜು ₹62,481.88 ಕೋಟಿ ನಷ್ಟ ಉಂಟಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದು, ರಾಜ್ಯದ ಬರ ಪರಿಸ್ಥಿತಿಯನ್ನು ವಿವರಿಸಲು ಭೇಟಿಗೆ ಸಮಯ ಕೋರಿರುವುದಾಗಿ ಹೇಳಿದ್ದಾರೆ.
ರಾಜ್ಯ ಸರ್ಕಾರ ತನ್ನ ಸಂಪನ್ಮೂಲಗಳಿಂದಲೇ ಮೊದಲ ಕಂತಿನ ಬರ ಪರಿಹಾರ ಬಿಡುಗಡೆ ಮಾಡಿದ್ದು, ಅರ್ಹ ರೈತರಿಗೆ ಕನಿಷ್ಠ ₹5,000 ಪರಿಹಾರ ನೀಡುವುದಾಗಿ ಘೋಷಿಸಿದೆ. ಆದರೆ ಬರದ ತೀವ್ರತೆ ಮತ್ತು ನಷ್ಟದ ಪ್ರಮಾಣ ಗಮನಿಸಿದರೆ ರಾಜ್ಯದ ಸಂಪನ್ಮೂಲಗಳಿಂದ ಮಾತ್ರ ಪರಿಸ್ಥಿತಿ ನಿಭಾಯಿಸುವುದು ಕಷ್ಟ. ಆದ್ದರಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಅಡಿಯಲ್ಲಿ ₹22,400.58 ಕೋಟಿ ನೆರವು ನೀಡುವಂತೆ ಪರಿಷ್ಕೃತ ಮನವಿ ಸಲ್ಲಿಸಲಾಗಿದೆ ಎಂದರು.

ನವೆಂಬರ್ 2ರಂದು ಸಲ್ಲಿಸಿದ ಮನವಿ ಸೇರಿದಂತೆ ಹಲವು ಬಾರಿ ಕೇಂದ್ರದ ಗಮನ ಸೆಳೆದಿದ್ದರೂ ಅಗತ್ಯ ತುರ್ತು ಸ್ಪಂದನೆ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನೈಸರ್ಗಿಕ ವಿಕೋಪಗಳಿಗೆ ರಾಜಕೀಯ ಗಡಿಗಳು ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಅಡ್ಡಿಯಾಗಬಾರದು. ರೈತರ ಬದುಕು ಮತ್ತು ಜೀವನೋಪಾಯ ರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಪರಿಷ್ಕೃತ ಮನವಿಗೆ ತಕ್ಷಣ ಅನುಮೋದನೆ ನೀಡಿ, ಪರಿಹಾರದ ಹಣವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.


Comments (0)