ಪಿಎಂ ಇ-ಡ್ರೈವ್‌ ಯೋಜನೆಯಡಿ ಇವಿ ಟ್ರಕ್‌‌ಗಳಿಗೆ ಪ್ರೋತ್ಸಾಹ ಧನ; ಕುಮಾರಸ್ವಾಮಿ ಘೋಷಣೆ

ನವದೆಹಲಿ: ಸರಕು ಸಾಗಣೆ ವಲಯದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸುವ ಗುರಿ ತಲುಪಲು ಪೂರಕವಾಗಿ ಮೊದಲ ಬಾರಿಗೆ ವಿದ್ಯುತ್ ಚಾಲಿತ ಟ್ರಕ್‌‌ಗಳಿಗೆ (ಇ-ಟ್ರಕ್‌ಗಳು) ಆರ್ಥಿಕ ಉತ್ತೇಜನ ನೀಡಲು ನಿರ್ಧರಿಸಿದ್ದು, ಪಿಎಂ ಇ ಡ್ರೈವ್ (PM E-DRIVE) ಯೋಜನೆ ಅಡಿಯಲ್ಲಿ ಟ್ರಕ್‌‌ಗಳಿಗೆ ಪ್ರೋತ್ಸಾಹ ಧನ ಕೊಡಲಾಗುವುದು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ದೆಹಲಿಯ ತಮ್ಮ ಸಚಿವಾಲಯದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಈ ಯೋಜನೆಯನ್ನು ಪ್ರಕಟಿಸಿದ ಕುಮಾರಸ್ವಾಮಿ, ದೇಶದಲ್ಲಿ ಸಾಮೂಹಿಕ ಸಾರಿಗೆ ಹಾಗೂ ಸರಕು ಸಾಗಣೆ ವ್ಯವಸ್ಥೆಯಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಪರಿಪೂರ್ಣವಾಗಿ ತಗ್ಗಿಸುವ ನಿಟ್ಟಿನಲ್ಲಿ ಪ್ರಧಾನಿ ಅವರ ಮಹತ್ವಾಕಾಂಕ್ಷೀಯ ಪಿಎಂ ಇ ಡ್ರೈವ್ ಯೋಜನೆಯನ್ನು ಈಗಾಗಲೇ ಅನುಷ್ಠಾನಕ್ಕೆ ತರಲಾಗಿದೆ. ಈ ಮೂಲಕ ಆರ್ಥಿಕ ಪ್ರೋತ್ಸಾಹ ನೀಡುವ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಸ್ವಚ್ಛ, ದಕ್ಷ ಮತ್ತು ಸುಸ್ಥಿರ ಸರಕು ಸಾಗಣೆಗೆ ಪೂರಕವಾಗಿ ಪರಿವರ್ತನಾತ್ಮಕ ಹೆಜ್ಜೆಗಳನ್ನು ಇಡಲಾಗಿದೆ. ಕೇಂದ್ರ ಸರ್ಕಾರವು ವಿದ್ಯುತ್ ಟ್ರಕ್‌ಗಳಿಗೆ ನೇರ ಆರ್ಥಿಕ ಪ್ರೋತ್ಸಾಹ ನೀಡುತ್ತಿರುವುದು ಇದೇ ಮೊದಲು ಎಂದರು.

ಯೋಜನೆಯ ಮಹತ್ವವನ್ನು ವಿವರಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಡೀಸೆಲ್ ಟ್ರಕ್‌ಗಳು ಒಟ್ಟು ವಾಹನ ಜನಸಂಖ್ಯೆಯಲ್ಲಿ ಕೇವಲ ಶೇ. 3 ಇದ್ದರೂ, ಸಾರಿಗೆ ಸಂಬಂಧಿತ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಶೇ.42 ಕೊಡುಗೆ ನೀಡುತ್ತವೆ ಮತ್ತು ವಾಯುಮಾಲಿನ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಿಂದ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ವಿದ್ಯುತ್ ಟ್ರಕ್‌ಗಳಿಗೆ ಮೀಸಲಾದ ಮೊತ್ತ ಮೊದಲ ಆರ್ಥಿಕ ಉತ್ತೇಜನ ಕಾರ್ಯಕ್ರಮ ಇದಾಗಿದೆ. ಈ ಮೂಲಕ ರಾಷ್ಟ್ರವನ್ನು ಸುಸ್ಥಿರ ಸರಕು ಸಾಗಣೆ, ಸ್ವಚ್ಛ ಭವಿಷ್ಯ ಮತ್ತು 2047ರ ವೇಳೆಗೆ ವಿಕಸಿತ ಭಾರತ ಸಾಕಾರದತ್ತ ಕೊಂಡೊಯ್ಯುತ್ತದೆ. 2070ರ ವೇಳೆಗೆ ಇಂಗಾಲದ ನಿವ್ವಳ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಮುಟ್ಟಲಿದ್ದೇವೆ. ಇದು ಪ್ರಧಾನಿಗಳ ಸಂಕಲ್ಪವಾಗಿದೆ ಎಂದು ಕೇಂದ್ರ ಸಚಿವರು ನುಡಿದರು.

ಎಲೆಕ್ಟ್ರಿಕ್ ಟ್ರಕ್ ದರ ಕೈಗೆಟುಕುವ ಹಾಗೆ ಇರಬೇಕು ಎನ್ನುವ ಉದ್ದೇಶದಿಂದ ಈ ಉತ್ತೇಜನ ಯೋಜನೆಯ ಪ್ರೋತ್ಸಾಹಕ ಮೊತ್ತವು ಎಲೆಕ್ಟ್ರಿಕ್ ಟ್ರಕ್‌ನ GVW ಅನ್ನು ಅವಲಂಬಿಸಿರುತ್ತದೆ. ಗರಿಷ್ಠ ಪ್ರೋತ್ಸಾಹಕ ಮೊತ್ತವನ್ನು ಪ್ರತಿ ವಾಹನಕ್ಕೆ ₹9.6 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಈ ಪ್ರೋತ್ಸಾಹಕಗಳನ್ನು ಖರೀದಿ ಬೆಲೆಯಲ್ಲಿ ಮುಂಗಡ ಕಡಿತವಾಗಿ ನೀಡಲಾಗುತ್ತದೆ ಮತ್ತು ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ PM E-DRIVE ಪೋರ್ಟಲ್ ಮೂಲಕ OEM ಗಳಿಗೆ ಮರುಪಾವತಿ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ದೇಶಾದ್ಯಂತ ಸುಮಾರು 5,600 ಇ-ಟ್ರಕ್‌ಗಳ ನಿಯೋಜನೆಯನ್ನು ಈ ಯೋಜನೆ ಬೆಂಬಲಿಸುವ ನಿರೀಕ್ಷೆಯಿದೆ. ದೆಹಲಿಯಲ್ಲಿ ನೋಂದಾಯಿಸಲಾದ 1,100 ಇ-ಟ್ರಕ್‌ಗಳಿಗೆ ಮೀಸಲಾದ ನಿಬಂಧನೆಯನ್ನು ರೂಪಿಸಲಾಗಿದೆ. ಇದರ ಅಂದಾಜು ವೆಚ್ಚ 100 ಕೋಟಿ ರೂ. ರಾಜಧಾನಿಯ ಗಂಭೀರ ವಾಯು ಗುಣಮಟ್ಟದ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಇದು ಹೊಂದಿದೆ ಎಂದರು.

ಸಿಮೆಂಟ್ ಉದ್ಯಮ, ಬಂದರುಗಳು, ಉಕ್ಕು ಮತ್ತು ಇತರ ಸಾಗಾಣಿಕೆ ವಲಯವು ಈ ಯೋಜನೆಯ ಪ್ರಯೋಜನ ಪಡೆಯಲಿರುವ ಪ್ರಮುಖ ಕ್ಷೇತ್ರಗಳಾಗಿವೆ. ವೋಲ್ವೋ, ಐಷರ್, ಟಾಟಾ ಮೋಟಾರ್ಸ್ ಮತ್ತು ಅಶೋಕ್ ಲೇಲ್ಯಾಂಡ್‌ನಂತಹ ಹಲವಾರು ಪ್ರಮುಖ ಕಂಪನಿಗಳು ಈಗಾಗಲೇ ಭಾರತದಲ್ಲಿ ಎಲೆಕ್ಟ್ರಿಕ್ ಟ್ರಕ್‌ಗಳನ್ನು ತಯಾರಿಸುವಲ್ಲಿ ತೊಡಗಿಸಿಕೊಂಡಿವೆ. ಆತ್ಮನಿರ್ಭರ ಭಾರತ ದೃಷ್ಟಿಕೋನದ ಅಡಿಯಲ್ಲಿ ಸ್ಥಳೀಯ ಸಾಮರ್ಥ್ಯಗಳನ್ನು ಹೆಚ್ಚಿಸುತ್ತವೆ ಎಂದು ಸಚಿವರು ಹೇಳಿದರು.

150 ಇ-ಟ್ರಕ್ ಗಳನ್ನು ನಿಯೋಜಿಸಲಿದೆ ಉಕ್ಕು ಪ್ರಾಧಿಕಾರ:

ವಿದ್ಯುತ್ ಚಾಲಿತ ಟ್ರಕ್‌‌ಗಳ ಬಳಕೆಯಲ್ಲಿ ದೊಡ್ಡ ಹೆಜ್ಜೆ ಇರಿಸಿರುವ ಉಕ್ಕು ಸಚಿವಾಲಯದ ಅಧೀನ ಸಂಸ್ಥೆಯಾಗಿರುವ ಭಾರತೀಯ ಉಕ್ಕು ಪ್ರಾಧಿಕಾರ (SAIL) ಮುಂದಿನ 2 ವರ್ಷಗಳಲ್ಲಿ 150 ಇ-ಟ್ರಕ್‌ಗಳನ್ನು ತನ್ನ ಕಾರ್ಯಾಚರಣೆಯ ವಿವಿಧ ವ್ಯೂಹಾತ್ಮಕ ಸ್ಥಳಗಳಲ್ಲಿ ನಿರ್ಧರಿಸಿದೆ. ಅಲ್ಲದೆ, ವಿವಿಧ ಉದ್ದೇಶಗಳಿಗೆ ತಾನು ಬಳಕೆ ಮಾಡುತ್ತಿರುವ ಒಟ್ಟಾರೆ ಟ್ರಕ್‌ಗಳ ಪೈಕಿ ಕನಿಷ್ಠ ಶೇ. 15 ವಿದ್ಯುತ್ ಚಾಲಿತ ಟ್ರಕ್‌‌ಗಳನ್ನೇ ಬಳಕೆ ಮಾಡಲು ಪ್ರಾಧಿಕಾರ ನಿರ್ಧರಿಸಿದೆ.

Related Articles

Comments (0)

Leave a Comment