ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು; ಬೆಂಗಳೂರು-ಮೈಸೂರು ರೈಲು ಸಂಚಾರ ಅಸ್ತವ್ಯಸ್ತ

ರಾಮನಗರ: ಜಿಲ್ಲೆಯ ಬಿಡದಿ ಸಮೀಪದ ದಾಸಪ್ಪನದೊಡ್ಡಿ ಗ್ರಾಮದ ಬಳಿ ಮಂಗಳವಾರ ಸಂಜೆ ಗೂಡ್ಸ್ ರೈಲೊಂದರ ಬೋಗಿ ಹಳಿ ತಪ್ಪಿದ ಪರಿಣಾಮ, ಬೆಂಗಳೂರು-ಮೈಸೂರು ನಡುವಿನ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.

ವಾಹನಗಳನ್ನು ಸಾಗಿಸುವ ಖಾಲಿ ಗೂಡ್ಸ್ ರೈಲು (NMG Rake) ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿತ್ತು. ಸಂಜೆ ಸುಮಾರು 4:35ರ ವೇಳೆಗೆ ದಾಸಪ್ಪನದೊಡ್ಡಿ ಬಳಿ ರೈಲಿನ ಒಂದು ಬೋಗಿಯ ಚಕ್ರಗಳು ಹಳಿ ತಪ್ಪಿವೆ. ಹಳಿ ತಪ್ಪಿದ ತಕ್ಷಣ ರೈಲಿನ ಲೋಕೋ ಪೈಲಟ್ ಸಮಯಪ್ರಜ್ಞೆ ಮೆರೆದು ಬ್ರೇಕ್ ಹಾಕಿದ್ದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಪ್ರಯಾಣಿಕರ ಪರದಾಟ:

ಈ ಅವಘಡದಿಂದಾಗಿ ಮೈಸೂರು-ಬೆಂಗಳೂರು ನಡುವಿನ ದ್ವಿಪಥ ರೈಲು ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಸಾವಿರಾರು ಪ್ರಯಾಣಿಕರು ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾಯುವಂತಾಯಿತು. ಮೈಸೂರು ಕಡೆಗೆ ಹೋಗುತ್ತಿದ್ದ ರೈಲುಗಳನ್ನು ಕೆಂಗೇರಿ ಮತ್ತು ನಾಯಂಡಹಳ್ಳಿಯಲ್ಲಿ ಸ್ಥಗಿತಗೊಳಿಸಿದರೆ, ಬೆಂಗಳೂರು ಕಡೆಗೆ ಬರುತ್ತಿದ್ದ ರೈಲುಗಳನ್ನು ಚನ್ನಪಟ್ಟಣ ಹಾಗೂ ಮಂಡ್ಯ ನಿಲ್ದಾಣಗಳಲ್ಲಿ ತಡೆಹಿಡಿಯಲಾಗಿತ್ತು.

ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ – ಸಂಚಾರ ಪುನರಾರಂಭ:

ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಿಂದ ತಾಂತ್ರಿಕ ತಂಡ ಸ್ಥಳಕ್ಕೆ ಧಾವಿಸಿ ಹಳಿ ದುರಸ್ತಿ ಕಾರ್ಯ ಕೈಗೊಂಡಿತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಸತತ ಕಾರ್ಯಾಚರಣೆಯ ನಂತರ ಹಳಿ ತಪ್ಪಿದ ಬೋಗಿಯನ್ನು ಮರಳಿ ಹಳಿಗೆ ತಂದು ರೈಲನ್ನು ಸ್ಥಳಾಂತರಿಸಲಾಯಿತು. ರಾತ್ರಿ ವೇಳೆಗೆ ಹಳಿಗಳ ಸುರಕ್ಷತೆಯನ್ನು ಪರಿಶೀಲಿಸಿದ ಅಧಿಕಾರಿಗಳು ರೈಲು ಸಂಚಾರಕ್ಕೆ ಹಸಿರು ನಿಶಾನೆ ನೀಡಿದರು. ಪ್ರಸ್ತುತ ರೈಲು ಸಂಚಾರ ಪುನರಾರಂಭಗೊಂಡಿದ್ದರೂ, ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆಯಾಗಿದೆ.

ರೈಲುಗಳ ಸಂಚಾರದ ಇತ್ತೀಚಿನ ಮಾಹಿತಿಗಾಗಿ ಪ್ರಯಾಣಿಕರು National Train Enquiry System (NTES) ಅಧಿಕೃತ ಜಾಲತಾಣವನ್ನು ಗಮನಿಸಬಹುದು ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ

Related Articles

Comments (0)

Leave a Comment