ಶಕ್ತಿ ಯೋಜನೆಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗರಿ ; ಮೆಡಲ್ ನೋಡಿ ಹರ್ಷಗೊಂಡ ಸಿಎಂ

ಬೆಂಗಳೂರು: ಶಕ್ತಿ ಯೋಜನೆಯಡಿ 500 ಕೋಟಿಗೂ ಹೆಚ್ಚು ಬಾರಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಬಸ್ ಗಳಲ್ಲಿ ಪಯಣಿಸಿರುವುದು ಗೋಲ್ಡನ್  ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಾದ  ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೋರಿಸಿ ಸಂಭ್ರಮಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪಂಚ‌ ಗ್ಯಾರಂಟಿಗಳ ಪ್ರಗತಿ ಪರಿಶೀಲನಾ ಸಭೆ ಮುನ್ನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಕ್ತಿ ಯೋಜನೆಗೆ ಸಿಕ್ಕಿರುವ ಅಂತಾರಾಷ್ಟ್ರೀಯ ಮನ್ನಣೆಯ ಮಾಹಿತಿ ನೀಡಿದರು.ಶಕ್ತಿ ಯೋಜನೆಯು ಪ್ರತಿಷ್ಠಿತ ವಿಶ್ವ ದಾಖಲೆಗೆ  ಗೋಲ್ಡನ್  ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ( Golden Book of World Records) ನಲ್ಲಿ  ಸೇರ್ಪಡೆಯಾಗಿರುವುದನ್ನು ತಿಳಿಸಿ, ದಾಖಲೆಯ ಪ್ರಮಾಣ ಪತ್ರ ಮತ್ತು ಮೆಡಲ್ ಅನ್ನು ತೋರಿಸಿದರು.

ಗೋಲ್ಡನ್  ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಶಕ್ತಿ ಯೋಜನೆ ಸೇರ್ಪಡೆಯಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಸಂತೋಷ ವ್ಯಕ್ತಪಡಿಸಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಾರಿಗೆ ಸಂಸ್ಥೆಗಳ ಸಮಸ್ತ ಅಧಿಕಾರಿ/ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಹಾಗೂ ಮಹಿಳಾ ಸಬಲೀಕರಣದ‌ ದಿಟ್ಟ ಯೋಜನೆಯಾದ ಶಕ್ತಿ ಯೋಜನೆಯು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಮಹಿಳೆಯರನ್ನು ಸಬಲರನ್ನಾಗಿಸಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್‌, ಪಂಚ ಗ್ಯಾರೆಂಟಿ ಯೋಜನೆಗಳ ರಾಜ್ಯಾಧ್ಯಕ್ಷ .ಹೆಚ್.ಎಂ ರೇವಣ್ಣ,ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಉಪಸ್ಥಿತರಿದ್ದರು.

Related Articles

Comments (0)

Leave a Comment