ದೇಶದ ಎರಡನೇ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆ ಲೋಕಾರ್ಪಣೆ; ಸಿಗಂದೂರು ಚೌಡೇಶ್ವರಿ ದೇವಿ ಹೆಸರು ಪ್ರಕಟಿಸಿದ ಗಡ್ಕರಿ
- by Suddi Team
- July 14, 2025
- 928 Views
ಶಿವಮೊಗ್ಗ: ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಿರುವ ಅಂಬಲಗೋಡು- ಕಳಸವಳ್ಳಿ- ಸಿಗಂದೂರು ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದು, ಈ ಸೇತುವೆ ಮತ್ತು ರಸ್ತೆಯನ್ನು ಸಿಗಂದೂರು ಚೌಡೇಶ್ವರಿ ಮಾತೆಗೆ ಸಮರ್ಪಿಸುವುದಾಗಿ ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದರು. ಅಲ್ಲದೆ ಸೇತುವೆಗೆ ಸಿಗಂದೂರು ಚೌಡೇಶ್ವರಿ ದೇವಿ ಹೆಸರಿಡುವುದಾಗಿ ಪ್ರಕಟಿಸಿ ನಾಮಕರಣ ವಿವಾದಕ್ಕೆ ಅಧಿಕೃತವಾಗಿ ತೆರೆ ಎಳೆದರು.
ದೇಶದ ಎರಡನೇ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆ ಉದ್ಘಾಟಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ನಂತರ ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಸೇತುವೆ. ಮಾತೆ ಸಿಗಂದೂರು ಚೌಡೇಶ್ವರಿ ದೇವಿ ಸೇತುವೆ ಎಂದು ಇದರ ಹೆಸರನ್ನು ಪ್ರಕಟಿಸಿದರು.
ಕರ್ನಾಟಕದ ವಿಕಾಸಕ್ಕೆ ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಕೋಟಿಯ ಕೆಲಸಗಳನ್ನು ಮಾಡಲಾಗುವುದು ಎಂದು ಅವರು ಪ್ರಕಟಿಸಿದರು. 10 ಸಾವಿರ ಕೋಟಿ ಮೊತ್ತದ ಬೆಳಗಾವಿ- ಹುನಗುಂದ- ರಾಯಚೂರು ಚತುಷ್ಪಥ ಕಾಮಗಾರಿ ತ್ವರಿತಗೊಳಿಸಲಾಗುವುದು ಎಂದು ತಿಳಿಸಿದರು. ದೇಶದ ವಿವಿಧೆಡೆ ಆಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಅವರು ಮಾಹಿತಿ ಕೊಟ್ಟರು. ದೆಹಲಿ- ಬೆಂಗಳೂರು ನಡುವಿನ ಅಂತರ ಕಡಿಮೆ ಮಾಡುವ ರಸ್ತೆ ಕುರಿತು ಅವರು ವಿವರ ನೀಡಿದರು. ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್ ಹೈವೇ ಈಗಾಗಲೇ ಪೂರ್ಣಗೊಂಡಿದೆ ಎಂದರು.
ಬೆಂಗಳೂರು ವರ್ತುಲ ರಸ್ತೆಯನ್ನು 15 ಸಾವಿರ ಕೋಟಿಯಲ್ಲಿ ನಿರ್ಮಾಣ ಮಾಡಲಾಗುವುದು. ಶೇ. 40 ಕಾಮಗಾರಿ ಮುಗಿದಿದೆ. ಇದು ಶೀಘ್ರ ಪೂರ್ಣವಾಗಲಿದ್ದು, ಬೆಂಗಳೂರಿನ ಸಂಚಾರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ವಿವರಿಸಿದರು. ಬೆಂಗಳೂರು- ಮಂಗಳೂರು ರಸ್ತೆ ಅಭಿವೃದ್ಧಿ ಸೇರಿ ವಿವಿಧ ನೂತನ ಯೋಜನೆಗಳ ಕುರಿತು ಅವರು ಪ್ರಕಟಿಸಿದರು. ಶಿವಮೊಗ್ಗ- ಮಂಗಳೂರು ಚತುಷ್ಪಥದ ಡಿಪಿಆರ್ ಮಾಡಲಾಗುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಈ ಭಾಗದ ಬಹುವರ್ಷಗಳ ಕನಸು ಇಂದು ನನಸಾಗಿದೆ ಎಂದು ಸಂತಸ ಸೂಚಿಸಿದರು. ಇಡೀ ದೇಶಕ್ಕೆ ಇದು ಪ್ರಗತಿಯ ಮೈಲಿಗಲ್ಲಾಗಿದೆ. ಇದು ಜನರ ವಿಶ್ವಾಸ- ಜನಪ್ರತಿನಿಧಿಗಳ ಪರಿಶ್ರಮದ ಪ್ರತಿಫಲ ಎನ್ನುತ್ತಾ ಆಗುಂಬೆ ಘಾಟ್‍ನಲ್ಲಿ ಸುರಂಗ ಮಾರ್ಗ ನಿರ್ಮಾಣ, ಶಿವಮೊಗ್ಗ ಬೈಪಾಸ್ ವರ್ತುಲ ರಸ್ತೆ ಸೇರಿ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಹೆದ್ದಾರಿ ಸಚಿವ ಗಡ್ಕರಿಗೆ ಮನವಿ ಮಾಡಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಮಾತನಾಡಿ, ಮ್ಯಾನ್ ಆಫ್ ನ್ಯಾಷನಲ್ ಹೈವೇಸ್ ಎಂಬ ಹೆಸರು ಗಡ್ಕರಿಯವರಿಗೆ ಸರಿಹೊಂದುತ್ತದೆ. ಗಡ್ಕರಿ ಅವರು ತಾವು ಶಂಕುಸ್ಥಾಪನೆ ಮಾಡಿದ್ದನ್ನು ತಾವೇ ಉದ್ಘಾಟಿಸುವ ಪ್ರಧಾನಿಯವರ ಸೂಚನೆಯನ್ನು ಪಾಲಿಸುತ್ತಿದ್ದಾರೆ ಎಂದರು.
ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಮಾತನಾಡಿ, ಇದು ಸಾಗರದ ಇತಿಹಾಸದಲ್ಲಿ ಬಂಗಾರದಿಂದ ಬರೆದಂತಹ ಕಾರ್ಯಕ್ರಮ ಎಂದು ಮೆಚ್ಚುಗೆ ಸೂಚಿಸಿದರು.
Related Articles
Thank you for your comment. It is awaiting moderation.


Comments (0)