ಕೇಂದ್ರದ ವೈಫಲ್ಯಕ್ಕೆ ರಾಜ್ಯದ ಮೇಲೆ ಗೂಬೆ ಕೂರಿಸುವುದು ಸಲ್ಲ: ಸಚಿವ ರಾಮಲಿಂಗಾರೆಡ್ಡಿ ಕಿಡಿ

ಬೆಂಗಳೂರು: ನಿರುದ್ಯೋಗದಂತಹ ಗಂಭೀರ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಿಭಟನೆ ಮಾಡಬೇಕಾದವರು ಕೇಂದ್ರದ ವಿರುದ್ಧವೇ ಹೊರತು ರಾಜ್ಯ ಸರ್ಕಾರದ ವಿರುದ್ಧವಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ನಿರುದ್ಯೋಗದ ವಿರುದ್ಧ ಮೊದಲ ಬಾರಿಗೆ ಧ್ವನಿಯೆತ್ತಿದ್ದು ಕಾಂಗ್ರೆಸ್ ಪಕ್ಷ. ಆದರೆ ಬಿಜೆಪಿ ನಾಯಕರಿಗೆ ಕೇವಲ ರಾಜಕೀಯ ಮಾಡಲು ಒಂದು ವಿಷಯ ಬೇಕಾಗಿದೆ ಅಷ್ಟೇ” ಎಂದು ಟೀಕಿಸಿದ್ದಾರೆ.

ಹನ್ನೊಂದು ವರ್ಷದ ವೈಫಲ್ಯ:

“ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದ ಮೋದಿ ಸರ್ಕಾರ, ಕಳೆದ ಹನ್ನೊಂದು ಮುಕ್ಕಾಲು ವರ್ಷಗಳಲ್ಲಿ ಭರ್ತಿ ಮಾಡಿರುವುದು ಕೇವಲ 7 ಲಕ್ಷ ಉದ್ಯೋಗಗಳನ್ನು ಮಾತ್ರ. ಇಂದಿಗೂ ಕೇಂದ್ರದ ವಿವಿಧ ಇಲಾಖೆಗಳಲ್ಲಿ ಸುಮಾರು 40 ಲಕ್ಷ ಹುದ್ದೆಗಳು ಖಾಲಿ ಇವೆ. ಹೀಗಿರುವಾಗ ರಾಜ್ಯ ಬಿಜೆಪಿ ಘಟಕವು ಕೇಂದ್ರದ ವಿರುದ್ಧ ಹೋರಾಟ ನಡೆಸಬೇಕೋ ಅಥವಾ ರಾಜ್ಯ ಸರ್ಕಾರದ ವಿರುದ್ಧವೋ ಎಂಬ ಗೊಂದಲದಲ್ಲಿದೆ” ಎಂದು ಸಚಿವರು ವ್ಯಂಗ್ಯವಾಡಿದ್ದಾರೆ.

ಸ್ವಂತ ಕಾರ್ಯಕರ್ತರಿಗೇ ಅನ್ಯಾಯ:

ಕೇಂದ್ರದ ನಿಗಮ ಮಂಡಳಿಗಳಲ್ಲೇ ಸುಮಾರು 2,000 ನಿರ್ದೇಶಕರ ಹುದ್ದೆಗಳು ಖಾಲಿ ಬಿದ್ದಿವೆ. ಸ್ವಂತ ಪಕ್ಷದ ಕಾರ್ಯಕರ್ತರಿಗೇ ಉದ್ಯೋಗ ನೀಡದ ಬಿಜೆಪಿ, ಇತರೆ ಯುವಜನತೆಗೆ ನ್ಯಾಯ ಒದಗಿಸಲು ಸಾಧ್ಯವೇ? ಎಂದು ಪ್ರಶ್ನಿಸಿರುವ ರೆಡ್ಡಿ, ಕೇಂದ್ರದ ಅನ್ಯಾಯದ ವಿರುದ್ಧ ಸೊಲ್ಲೆತ್ತುವ ಧೈರ್ಯ ರಾಜ್ಯ ಬಿಜೆಪಿ ನಾಯಕರಿಗಿಲ್ಲ ಎಂದು ಕುಟುಕಿದ್ದಾರೆ.

ಸಾಮಾಜಿಕ ನ್ಯಾಯದ ಹರಣ:

ಸಚಿವಾಲಯದ ಹುದ್ದೆಗಳಲ್ಲಿ ‘ಲ್ಯಾಟರಲ್ ಎಂಟ್ರಿ’ ತರುವ ಮೂಲಕ ಕೇಂದ್ರ ಸರ್ಕಾರವು ಸಾಮಾಜಿಕ ನ್ಯಾಯದ ಕಗ್ಗೋಲೆ ಮಾಡುತ್ತಿದೆ. ನೇಮಕಾತಿ ಪ್ರಕ್ರಿಯೆಯ ಮೂಲಕವೇ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಗಟ್ಟಿ ನಿಲುವಾಗಿದೆ ಎಂದು ಅವರು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಾರಿಗೆ ಇಲಾಖೆಯಲ್ಲಿ 10 ಸಾವಿರ ನೇಮಕಾತಿ: 

ಬಿಜೆಪಿ ಆಡಳಿತಾವಧಿಯಲ್ಲಿ ಸ್ಥಗಿತಗೊಂಡಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ನಾವು ಮರುಜೀವ ನೀಡಿದ್ದೇವೆ. 1,000 ಅನುಕಂಪದ ಆಧಾರಿತ ಹುದ್ದೆಗಳು ಸೇರಿದಂತೆ ಒಟ್ಟು 10,000 ನೇಮಕಾತಿ ಮಾಡಿಕೊಳ್ಳಲಾಗಿದೆ. ಆದರೆ, 2019-2023ರ ಅವಧಿಯಲ್ಲಿ ಬಿಜೆಪಿ ಎಷ್ಟು ಹುದ್ದೆಗಳನ್ನು ಭರ್ತಿ ಮಾಡಿದೆ ಎಂಬ ಲೆಕ್ಕ ನೀಡಲಿ” ಎಂದು ಸವಾಲು ಹಾಕಿದ್ದಾರೆ.

ಬಿಜೆಪಿ ಅವಧಿಯಲ್ಲಿ ನೇಮಕಾತಿ ಸ್ಥಗಿತ:

“ನಾವು ಅಧಿಕಾರಕ್ಕೆ ಬಂದಾಗ ಸಾರಿಗೆ ಇಲಾಖೆಯಲ್ಲಿ 13,900 ಹುದ್ದೆಗಳ ನೇಮಕಾತಿಯನ್ನು ತಡೆಹಿಡಿಯಲಾಗಿತ್ತು. ಈ ಹಿಂದೆ ನಮ್ಮ ಅವಧಿಯಲ್ಲಿ ಹೊರಡಿಸಿದ್ದ ಅಧಿಸೂಚನೆಗಳನ್ನು ಸಹ ಬಿಜೆಪಿ ಸರ್ಕಾರ ರದ್ದುಗೊಳಿಸಿತ್ತು. ಅಷ್ಟೇ ಅಲ್ಲದೆ, ಪಿಎಸ್‌ಐ ಸೇರಿದಂತೆ ಹತ್ತಾರು ಪರೀಕ್ಷೆಗಳಲ್ಲಿ ಪೇಪರ್ ಲೀಕ್ ಮತ್ತು ಭ್ರಷ್ಟಾಚಾರ ನಡೆಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಅಂದು ಕಾಲಕಾಲಕ್ಕೆ ನೇಮಕಾತಿ ಮಾಡಿದ್ದರೆ ಇಂದು ಯುವಜನತೆ ಬೀದಿಗೆ ಇಳಿಯುವ ಪರಿಸ್ಥಿತಿ ಬರುತ್ತಿರಲಿಲ್ಲ” ಎಂದು ಸಚಿವರು ಕಿಡಿಕಾರಿದ್ದಾರೆ.

60,000 ಹುದ್ದೆಗಳ ಭರ್ತಿಗೆ ಅನುಮೋದನೆ:

ರಾಜ್ಯದಲ್ಲಿ ಈಗಾಗಲೇ 60,000 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಒಳಮೀಸಲಾತಿ ಜಾರಿಗೊಳಿಸಿ ಸಾಮಾಜಿಕ ನ್ಯಾಯ ಒದಗಿಸುವ ಸದುದ್ದೇಶದಿಂದ ನೇಮಕಾತಿ ಪ್ರಕ್ರಿಯೆ ತುಸು ವಿಳಂಬವಾಗಿದೆ ಅಷ್ಟೆ. ಶೀಘ್ರದಲ್ಲೇ ಅರ್ಹ ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ದೇಶದಲ್ಲೇ ಕಡಿಮೆ ನಿರುದ್ಯೋಗ ದರ:

ನಿರುದ್ಯೋಗ ದರದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಸಚಿವರು, “ಕರ್ನಾಟಕವು ದೇಶದಲ್ಲೇ ಅತ್ಯಲ್ಪ ನಿರುದ್ಯೋಗ ದರ (ಶೇ. 2.4 ರಿಂದ 2.8) ಹೊಂದಿರುವ ರಾಜ್ಯವಾಗಿದೆ. ಕೇರಳ (ಶೇ. 7.0), ಗೋವಾ (ಶೇ. 9.1), ಹರಿಯಾಣ (ಶೇ. 6.1) ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಉತ್ತಮವಾಗಿದೆ. ಬಿಜೆಪಿ ನಾಯಕರಿಗೆ ಆತ್ಮಾವಲೋಕನ ಮಾಡಿಕೊಳ್ಳುವ ಗುಣವಿದ್ದರೆ ಇಂದು ಅವರು ವಿರೋಧ ಪಕ್ಷದಲ್ಲಿ ಇರುತ್ತಿರಲಿಲ್ಲ” ಎಂದು ಟೀಕಿಸಿದ್ದಾರೆ.

Related Articles

Comments (0)

Leave a Comment