ಜಿಎಸ್ಟಿ ರಿಟರ್ನ್ ಸಲ್ಲಿಸಿದವರು ಗೃಹಲಕ್ಷ್ಮಿ ಯೋಜನೆ ವ್ಯಾಪ್ತಿಗೆ ಬರ್ತಾರಾ?; ಗೊಂದಲ ನಿವಾರಿಸಲು ಸಿಎಂ ಸೂಚನೆ
- by Suddi Team
- September 8, 2025
- 130 Views
ಬೆಂಗಳೂರು: ಜಿಎಸ್ಟಿ ಸಲ್ಲಿಕೆ ಮಾಡುವ ಮಹಿಳೆಯರು ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ವ್ಯಾಪ್ತಿಗೆ ಬರುತ್ತಾರಾ?ಈ ಯೋಜನೆಯ ಲಾಭಪಡೆಯಬಹುದಾ? ಎನ್ನುವ ಕುರಿತು ಫಲಾನುಭವಿಗಳಲ್ಲಿ ಗೊಂದಲ ಮೂಡಿದ್ದು ಶೀಘ್ರ ಈ ಗೊಂದಲ ನಿವಾರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆನಡೆಯಿತು.ಪಂಚ ಗ್ಯಾರಂಟಿ ಯೋಜನೆ ಅಡಿ ಇದುವರೆಗೆ ರೂ. 97,813 ಕೋಟಿ ಅನುದಾನವನ್ನು ವೆಚ್ಚ ಮಾಡಲಾಗಿದೆ. ಇದರಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1.24ಕೋಟಿ ಫಲಾನುಭವಿಗಳಿಗೆ ಒಟ್ಟು ರೂ.50,005 ಕೋಟಿ, ಗೃಹಜ್ಯೋತಿ ಯೋಜನೆಯಡಿ 1.64 ಕೋಟಿ ಫಲಾನುಭವಿಗಳಿಗೆ ರೂ. 18,139 ಕೋಟಿ, ಯುವನಿಧಿ ಯೋಜನೆಯಡಿ 2.55ಲಕ್ಷ ಫಲಾನುಭವಿಗಳಿಗೆ ರೂ.623 ಕೋಟಿ, ಶಕ್ತಿ ಯೋಜನೆಯಡಿ 544ಕೋಟಿ ಫಲಾನುಭವಿಗಳಿಗೆ ರೂ.13,903ಕೋಟಿ ಹಾಗೂ ಅನ್ನಭಾಗ್ಯ ಯೋಜನೆಯಡಿ 72.02ಕೋಟಿ ಫಲಾನುಭವಿಗಳಿಗೆ ಒಟ್ಟು 11,821.17 ಕೋಟಿ ವೆಚ್ಚ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ಸಿಎಂ ಗಮನಕ್ಕೆ ತಂದರು.
ಮರಣ ಹೊಂದುವ ಫಲಾನುಭವಿಗಳ ಪಟ್ಟಿಯನ್ನು ಪ್ರತಿ ತಿಂಗಳು ಪಂಚಾಯತ್ ಹಂತದಲ್ಲಿ ನವೀಕರಿಸಿ ಸಂಬಂಧಪಟ್ಟ ಬ್ಯಾಂಕುಗಳಿಗೆ ಮಾಹಿತಿಯನ್ನು ಒದಗಿಸಬೇಕು. ಮರಣ ಹೊಂದುವ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬೇಕು.ಪಂಚಾಯತ್ ಮಟ್ಟದಲ್ಲಿ ಫಲಾನುಭವಿಗಳ ಸೇರ್ಪಡೆ ಮತ್ತು ತೆಗೆದು ಹಾಕುವಿಕೆಗೆ ಕ್ರಮ ಕೈಗೊಳ್ಳಬೇಕು.ಲ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಜಿಎಸ್ಟಿ ರಿಟರ್ನ್ ಸಲ್ಲಿಸುವವರು ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುವ ಕುರಿತು ಇರುವ ಗೊಂದಲವನ್ನು ನಿವಾರಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದ ಸಿಎಂ, ಅನರ್ಹ ಬಿಪಿಎಲ್ ಕಾರ್ಡುದಾರರನ್ನು ಗುರುತಿಸಿ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಕಾರ್ಯವನ್ನು ಪಂಚಾಯತ್ ಮಟ್ಟದಲ್ಲಿ ನಡೆಸಬೇಕು. ಈ ಕುರಿತಾಗಿರುವ ಮಾನದಂಡಗಳನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.
ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಅಕ್ಕಿಯ ಬದಲು ಪ್ರದೇಶವಾರು ಇತರ ಧಾನ್ಯಗಳನ್ನು ನೀಡುವ ಬಗ್ಗೆ ಪರಿಶೀಲನೆ ನಡೆಸಬೇಕು, ಗ್ಯಾರಂಟಿ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಆಂದೋಲನ ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.
Related Articles
Thank you for your comment. It is awaiting moderation.


Comments (0)