ಎತ್ತಿನಹೊಳೆ ಯೋಜನೆ ಆಕ್ಷೇಪ ನಿವಾರಿಸುವುದಾಗಿ ಕೇಂದ್ರ ಸಚಿವರಿಂದ ಆಶ್ವಾಸನೆ; ಡಿ.ಕೆ. ಶಿವಕುಮಾರ್
- by Suddi Team
- July 8, 2025
- 184 Views

ನವದೆಹಲಿ: ಎತ್ತಿನಹೊಳೆ ಯೋಜನೆ ವಿಚಾರವಾಗಿ ಎದುರಾಗಿರುವ ತಾಂತ್ರಿಕ ಆಕ್ಷೇಪಣೆಗಳ ಬಗ್ಗೆ ಕೇಂದ್ರ ಪರಿಸರ ಸಚಿವರಿಗೆ ಸ್ಪಷ್ಟನೆ ನೀಡಿದ್ದು, ಆಕ್ಷೇಪಣೆಗಳನ್ನು ನಿವಾರಣೆ ಮಾಡುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇಂದು ಕೇಂದ್ರ ಸರ್ಕಾರದ ಇಬ್ಬರು ಸಚಿವರನ್ನು ಭೇಟಿ ಮಾಡಿದ್ದೇವೆ. ಕೇಂದ್ರ ಪರಿಸರ ಇಲಾಖೆ ಸಚಿವರಾದ ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿ ಎತ್ತಿನಹೊಳೆ ಯೋಜನೆ ವಿಚಾರವಾಗಿ ಚರ್ಚೆ ಮಾಡಲಾಗಿದ್ದು, ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ಕೊಟ್ಟಿರುವ ವಿಚಾರವನ್ನು ಅವರಿಗೆ ವಿವರಿಸಿದ್ದೇವೆ ಎಂದರು.
ಈ ಯೋಜನೆಯ ಶೇ. 60-70 ಕಾಮಗಾರಿ ಮುಕ್ತಾಯಗೊಂಡಿದ್ದು, ಕೆಲವು ತಾಂತ್ರಿಕ ಕಾರಣಗಳಿಂದ ಕಾಮಗಾರಿಗೆ ಅಡ್ಡಿ ಎದುರಾಗಿದೆ. ಈ ವಿಚಾರವಾಗಿ ಕೇಂದ್ರ ಪರಿಸರ ಇಲಾಖೆ ಮಾಡಿರುವ ಆಕ್ಷೇಪಣೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ. ಇದು ಅತ್ಯುತ್ತಮ ಕುಡಿಯುವ ನೀರಿನ ಯೋಜನೆಯಾಗಿದ್ದು, ಅತ್ಯುನ್ನತ ತಂತ್ರಜ್ಞಾನದ ಹಾಗೂ ಏಷ್ಯಾದ ಅತಿ ದೊಡ್ಡ ಮೇಲ್ಗಾಲುವೆಯನ್ನು ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಯೂ ಲಭಿಸಿದೆ ಎಂದು ತಿಳಿಸಿದರು.
ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಕಳಸಾ ಬಂಡೂರಿ ಯೋಜನೆ ವಿಚಾರವಾಗಿ ಚರ್ಚೆ ಮಾಡಲಾಗಿದೆ. ಗೋವಾ ರಾಜ್ಯದವರು ನಮ್ಮ ರಾಜ್ಯದ ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಕಾನೂನು ತಂಡದ ಜತೆ ಚರ್ಚೆ ಮಾಡಲಾಗಿದೆ. ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ಅವರು ಅವರ ರಾಜ್ಯದ ಬಗ್ಗೆ ಮಾತನಾಡಿಕೊಳ್ಳಲಿ. ನಮ್ಮ ರಾಜ್ಯದ ಬಗ್ಗೆ ಚರ್ಚೆ ಮಾಡುವ ಅಧಿಕಾರ ಅವರಿಗಿರುವುದಿಲ್ಲ. ಮಹದಾಯಿ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಬಂದ ನಂತರ ನಾವು ಟೆಂಡರ್ ಕರೆಯಲಾಗಿದ್ದು, ಕೆಲಸ ಮಾಡಬೇಕಾಗಿದೆ. ಕೇಂದ್ರ ಸರ್ಕಾರ ದಿಟ್ಟ ತೀರ್ಮಾನ ಮಾಡಬೇಕಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರಿಗೆ ಈ ವಿಚಾರ ವಿವರಿಸಿ, ನಂತರ ನಾವು ಕಾನೂನು ಪ್ರಕಾರವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.
ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ನ್ಯಾಯಾಲಯದ ತೀರ್ಪಿನಂತೆ ಅಧಿಸೂಚನೆ ಹೊರಡಿಸುವ ಬಗ್ಗೆ ಜಲಶಕ್ತಿ ಸಚಿವರ ಜತೆ ಚರ್ಚಿಸಲಾಗಿದೆ. ಈ ಹಿಂದೆಯೇ ಈ ವಿಚಾರವಾಗಿ ಸಭೆ ನಡೆಯಲು ಸಮಯ ನಿಗದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಗಿತ್ತು ಎಂದರು.
ಈ ಮಧ್ಯೆ ಸಂಸತ್ ಅಧಿವೇಶನ ಆರಂಭವಾಗುವ ಮುನ್ನ ನಮ್ಮ ಎಲ್ಲ ಸಂಸದರ ಜತೆ ಮೇಕೆದಾಟು, ಕೃಷ್ಣಾ ಮೇಲ್ದಂಡೆ ಹಾಗೂ ಮಹದಾಯಿ ಸೇರಿ ರಾಜ್ಯದ ಎಲ್ಲ ನೀರಾವರಿ ವಿಚಾರವಾಗಿ ಚರ್ಚೆ ಮಾಡಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಒತ್ತಡ ಹೇರುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ನೀಡಲಾಗಿದೆ:
ಎತ್ತಿನಹೊಳೆ ಯೋಜನೆಯಲ್ಲಿ 423 ಎಕರೆ ಅರಣ್ಯ ಪ್ರದೇಶ ಬಳಕೆಗೆ ನಿರಾಕರಿಸಿರುವ ಬಗ್ಗೆ ಕೇಳಿದಾಗ, ನಾವು ಈಗಾಗಲೇ ಪರ್ಯಾಯ ಭೂಮಿ ನೀಡಿದ್ದೇವೆ. ಇಲ್ಲಿ ಕೆಲವು ಪ್ರದೇಶ ಅರಣ್ಯ ಇಲಾಖೆ ಭೂಮಿಯಾಗಿದ್ದು, ಮತ್ತೆ ಕೆಲವು ಕಂದಾಯ ಇಲಾಖೆ ಭೂಮಿಯಾಗಿದೆ. ಈ ಜಾಗದಲ್ಲಿ 40-50 ವರ್ಷಗಳ ಹಿಂದೆ ರೈತರು ಈ ಜಮೀನು ಬಳಸುತ್ತಿದ್ದು, ನಾವು ಅವರಿಗೆ ಪರಿಹಾರ ನೀಡಿ ಈ ಭೂಮಿಯನ್ನು ವಶಕ್ಕೆ ಪಡೆದಿದ್ದೇವೆ. ಇದಾದ ನಂತರ ಈ ಜಾಗ ಅರಣ್ಯ ಇಲಾಖೆಯದ್ದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಾವು ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಈ ಭಾಗದಲ್ಲಿ ಅರ್ಧಕ್ಕಿಂತ ಹೆಚ್ಚು ಕೆಲಸ ಆಗಿದೆ. ಅಲ್ಲಿ ಕಾಲುವೆಗೆ ಅಗೆದಿರುವ ಮಣ್ಣನ್ನು ಪಕ್ಕದಲ್ಲಿ ಹಾಕಿರುವುದಕ್ಕೆ ತಕರಾರು ಎತ್ತಿದ್ದಾರೆ. ಈಗ ಅದನ್ನು ತೆರವುಗೊಳಿಸಲು ನಾವು ಒಪ್ಪಿದ್ದೇವೆ. ನಮಗೆ ಕೆಲಸ ಆಗಬೇಕು. ಈ ಯೋಜನೆಗೆ 24 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದ್ದೇವೆ. ಈ ಎಲ್ಲ ವಿಚಾರ ತಿಳಿಸಿದ್ದು, ಅವರು ಅನುಮತಿ ನೀಡುವ ವಿಶ್ವಾಸವಿದೆ ಎಂದರು.
Related Articles
Thank you for your comment. It is awaiting moderation.
Comments (0)