ತುಂಗಭದ್ರಾ ಜಲಾಶಯದ ಎಲ್ಲ ಗೇಟ್‌ಗಳ ಬದಲಾವಣೆ; ತಜ್ಞರ ಸಭೆಯಲ್ಲಿ ಅಂತಿಮ ನಿರ್ಧಾರ
- by Suddi Team
- June 28, 2025
- 47 Views

ಬೆಂಗಳೂರು: ತುಂಗಭದ್ರಾ ಜಲಾಶಯದ ಎಲ್ಲ ಗೇಟ್‌ಗಳ ಬದಲಾವಣೆಗೆ ಬೇಡಿಕೆ ಇದೆ. ಈ ಬಗ್ಗೆ ತಜ್ಞರೊಂದಿಗಿನ ಸಭೆಯಲ್ಲಿ ಸಿಎಂ, ಡಿಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 124ನೇ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಲಾಶಯದ 32 ಗೇಟ್‌ಗಳನ್ನು ಬದಲಾವಣೆ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಈ ಸಭೆಯಲ್ಲಿ ಅಣೆಕಟ್ಟೆಯ ಪರಿಣಿತ ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ವಿವರಿಸಿದರು.
ಅಣೆಕಟ್ಟೆಯ ಸುರಕ್ಷತೆ ಮತ್ತು ಬೆಳೆ ಸಂರಕ್ಷಣೆ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾಲ್ಕು ಜಿಲ್ಲೆಯ ಶಾಸಕರು ಹಾಗೂ ರೈತರನ್ನು ಒಳಗೊಂಡಂತೆ ಸಭೆ ನಡೆಸಬೇಕು ರೈತರು ಬೇಡಿಕೆ ಇಟ್ಟಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜುಲೈ 2ನೇ ವಾರ ಅಥವಾ 3ನೇ ವಾರದಲ್ಲಿ ಸಭೆ ನಡೆಸಲು ದಿನಾಂಕ ನಿಗದಿಪಡಿಸಲಾಗುವುದು ಎಂದರು.
ಬೋರ್ಡ್‌ನ ಕೆಲ ಅಧಿಕಾರಿಗಳು ಈ ಬಾರಿ ಒಂದು ಬೆಳೆಗೆ ಮಾತ್ರ ನೀರು ನೀಡಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದೀಗ ಒಂದು ಬೆಳೆಗೆ ನೀರು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ಸಭೆಯಲ್ಲಿ ಎರಡನೇ ಬೆಳೆಗೆ ನೀರು ನೀಡುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು. ರೈತರ ಹಿತ ಕಾಪಾಡುವುದು ನಮ್ಮ ಉದ್ದೇಶ. ಇದರಲ್ಲಿ ಯಾರೂ ಕೂಡ ರಾಜಕಾರಣ ಮಾಡಬಾರದು ಎಂದರು.
ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 57 ಟಿಎಂಸಿ ನೀರಿನ ಸಂಗ್ರಹ ಇದ್ದು, ಜುಲೈ 2 ರಿಂದ ನವೆಂಬರ್ 11ರವರೆಗೆ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜುಲೈ 2 ರಿಂದ 15 ರವರೆಗೆ 2 ಸಾವಿರ ಕ್ಯೂಸೆಕ್‌ನಂತೆ, ಜುಲೈ 16 ರಿಂದ 31ರವರೆಗೆ 3 ಸಾವಿರ ಕ್ಯೂಸೆಕ್‌ನಂತೆ ಮತ್ತು ಆಗಸ್ಟ್ 1ರಿಂದ ನವೆಂಬರ್ 30ರವರೆಗೆ 4,100 ಕ್ಯೂಸೆಕ್‌ನಂತೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜುಲೈ 10ರಿಂದ 31ರವರೆಗೆ ಸರಾಸರಿ 700 ಕ್ಯೂಸೆಕ್‌ನಂತೆ ಆಗಸ್ಟ್ 1ರಿಂದ ನವೆಂಬರ್ 30ರವರೆಗೆ 1,300 ಕ್ಯೂಸೆಕ್, ಬಲದಂಡೆಯ ಕೆಳಮಟ್ಟದ ಕಾಲುವೆಗೆ 500 ಕ್ಯೂಸೆಕ್, ಆಗಸ್ಟ್ 1 ರಿಂದ ನವೆಂಬರ್ 31ರವರೆಗೆ 650 ಕ್ಯೂಸೆಕ್ ನೀರನ್ನು ಹರಿಸಲಾಗುವುದು. ರಾಯ ಬಸವಣ್ಣ ಕಾಲುವೆಗೆ 220 ಕ್ಯೂಸೆಕ್ ಹಾಗೂ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ 25 ಕ್ಯೂಸೆಕ್ ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಆಧಾರದ ಮೇರೆಗೆ ನೀರು ಹರಿಸಲು ಸಲಹಾ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
Related Articles
Thank you for your comment. It is awaiting moderation.
Comments (0)