ಸಂವೇದನೆ ಉಳ್ಳವರು ನರನಿಂದ ನಾರಾಯಣರಾಗಬಲ್ಲರು: ಡಾ.ಮೋಹನ್ ಭಾಗವತ್

ಬೆಂಗಳೂರು: ಸೂಕ್ಷ್ಮ ಸಂವೇದನೆಯಿದ್ದರೆ ಮನುಷ್ಯನು ನರನಿಂದ ನಾರಾಯಣನಾಗುತ್ತಾನೆ. ಅದೇ ರೀತಿ, ಸೂಕ್ತ ಸಂಸ್ಕಾರ ಇಲ್ಲದಿದ್ದರೆ ನರಾಧಮನೂ ಆಗುತ್ತಾನೆ. ವಿಶ್ವದಲ್ಲಿ ಎಲ್ಲರಿಗೂ ನಾರಾಯಣನಾಗುವ ಅವಕಾಶ ಸಿಗಬೇಕು ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ. ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟಿದ್ದಾರೆ.

ಅವಕಾಶವಂಚಿತ ಮಕ್ಕಳ ಆಶ್ರಯ ತಾಣವಾದ ‘ನೆಲೆ’ಯ 25 ವರ್ಷದ ಸಮಾರೋಪ ಸಮಾರಂಭದ ಪ್ರಯುಕ್ತ ಜೆ.ಪಿ. ನಗರದ ಆರ್‌.ವಿ. ದಂತ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಕೆಲಸವನ್ನು 25 ವರ್ಷ ನಿರಂತರವಾಗಿ ನಡೆಸುವುದು ಕಷ್ಟದ ಕೆಲಸ. ಕೆಲಸ‌ ಒಳ್ಳೆಯದೇ ಆದರೂ ಸಾಗುವ ದಾರಿಯಲ್ಲಿ ಬಳಲಿಕೆ ಆಗುತ್ತದೆ. ಗುಡ್ಡ ಏರಬೇಕಾದರೆ ಶ್ರಮ ವಹಿಸಬೇಕಾಗುತ್ತದೆ, ಇಳಿಯಬೇಕಾದರೂ ಸಮತೋಲನಕ್ಕೆ ಶ್ರಮ ವಹಿಸಬೇಕಾಗುತ್ತದೆ. ಯಾರು ಜೊತೆಗೆ ಬರಲಿ, ಬಿಡಲಿ ಎಂಬ ಚಿಂತೆಯಿಲ್ಲದೆ ಆರಂಭವಾದ ನೆಲೆಯ ಕೆಲಸ 25 ವರ್ಷ ಪೂರೈಸಿ ಮುನ್ನಡೆಯುತ್ತಿದೆ ಎನ್ನುವುದು ನಮ್ಮೆಲ್ಲರಿಗೆ ಸಂತಸದ ವಿಚಾರ ಎಂದು ನುಡಿದರು‌.

ಭೌತಿಕವಾದದ ಜಾಲಕ್ಕೆ ಸಿಕ್ಕಿರುವ ಪ್ರಪಂಚವು ಇಂದು ಎಲ್ಲದರಲ್ಲೂ ಲಾಭ‌-ನಷ್ಟದ ಯೋಚನೆ ಮಾಡುತ್ತಿದೆ. ಮನುಷ್ಯ, ಕುಟುಂಬ, ಸಮಾಜ, ಸೃಷ್ಟಿ ಎಲ್ಲವೂ ಪ್ರತ್ಯೇಕ, ಎಲ್ಲವೂ ತಮ್ಮ ಸಂತೋಷಕ್ಕಾಗಿ ಶ್ರಮಿಸಬೇಕು ಎನ್ನುತ್ತದೆ. ಯಾವುದೇ ಕೆಲಸದಿಂದ ನಷ್ಟವಾಗುವುದಾದರೆ ಅದನ್ನು ಮಾಡುವುದಿಲ್ಲ ಎನ್ನುವ ಮಾನಸಿಕತೆಯಲ್ಲಿ ಪ್ರಪಂಚ ಸುಮಾರು ಎರಡು ಸಾವಿರ ವರ್ಷ ನಡೆದುಬಂದಿದೆ. ಎಲ್ಲರೂ ತಂತಮ್ಮ ಹಿತಕ್ಕಾಗಿ ಶ್ರಮಿಸಬೇಕು, ಅವರೇ ಸಂತಸಕ್ಕೆ ದಾರಿಮಾಡಿಕೊಳ್ಳಬೇಕು ಎನ್ನುತ್ತದೆ. ಇಂದು ಜಗತ್ತಿನಲ್ಲಿ ಎಲ್ಲ ಸೌಲಭ್ಯ ಇದೆ, ವಿಜ್ಞಾನ ಮುಂದುವರಿದಿದೆ. ಆದರೂ ಅನಾಥ ಮಕ್ಕಳೇಕಿದ್ದಾರೆ? ನಮಗೂ ಸಮಾಜಕ್ಕೂ ಸಂಬಂಧ ಇಲ್ಲ ಎನ್ನುವ ಮನೋಭಾವವೇ ಇದಕ್ಕೆ ಕಾರಣ ಎಂದರು.

ಮನುಷ್ಯನು ಎಲ್ಲ ಜೀವಿಗಳ ಕುರಿತು ಸಂವೇದನೆ ಹೊಂದಿರುತ್ತಾನೆ ಎನ್ನುವುದೇ ಇತರೆ ಪ್ರಾಣಿಗಳಿಂದ ಆತನನ್ನು ಭಿನ್ನವಾಗಿಸುತ್ತದೆ. ಸಂವೇದನೆ ಇದ್ದದ್ದರಿಂದಲೇ ಕ್ರೌಂಚ ಪಕ್ಷಿಯ ವಿಲಾಪದಿಂದ ವಾಲ್ಮೀಕಿ ಋಷಿಯಲ್ಲಿ ಕರುಣೆ ಹೊರಹೊಮ್ಮಿ ರಾಮಾಯಣ ರಚನೆಯಾಯಿತು.‌ ಸೂಕ್ಷ್ಮ ಸಂವೇದನೆಯಿದ್ದರೆ ಮನುಷ್ಯನು ನರನಿಂದ ನಾರಾಯಣನಾಗುತ್ತಾನೆ. ಅದೇ ರೀತಿ, ಸೂಕ್ತ ಸಂಸ್ಕಾರ ಇಲ್ಲದಿದ್ದರೆ ನರಾಧಮನೂ ಆಗುತ್ತಾನೆ. ವಿಶ್ವದಲ್ಲಿ ಎಲ್ಲರಿಗೂ ನಾರಾಯಣನಾಗುವ ಅವಕಾಶ ಸಿಗಬೇಕು. ಆದರೆ ವಿಶ್ವದೊಂದಿಗೆ ನಾವೂ ಸಂಬಂಧ ಹೊಂದಿದ್ದೇವೆ ಎಂಬ ಭಾವನೆ ಇಲ್ಲದಿದ್ದರೆ ಕೆಲವರು ನರಾಧಮರೂ ಆಗಬಹುದು. ಈ‌ ರೀತಿ‌ ಕೆಲವರು ನರಾಧಮರಾದರೆ ಅದು ಅವರ ತಪ್ಪು ಮಾತ್ರವಲ್ಲ, ಇಡೀ ಸಮಾಜದ ದೋಷ. ಹಾಗಾಗಿ ಕೆಲವು ಸಹೃದಯರು ಇಂತಹ ಉತ್ತಮ ವಾತಾವರಣ ನಿರ್ಮಾಣಕ್ಕಾಗಿ ನೆಲೆಯಂತಹ ಸಂಸ್ಥೆಗಳನ್ನು ಮಾಡುತ್ತಿದ್ದಾರೆ ಎಂದರು.

ಆದರೆ ಇಂತಹ ಸಂಸ್ಥೆಗಳನ್ನು ನಡೆಸುವವರ ಗುರಿ ಏನಾಗಬೇಕು? ಭವಿಷ್ಯದಲ್ಲಿ ಸಮಾಜದಲ್ಲಿ ಸಂವೇದನೆ ಜಾಗೃತವಾಗಬೇಕು, ಸಂಬಂಧಗಳ ಅರಿವಾಗಬೇಕು, ಎಲ್ಲ ಮಕ್ಕಳನ್ನೂ ಸಮಾಜವೇ ನೋಡಿಕೊಳ್ಳುವಂತಾಗಬೇಕು. ಇಂತಹ ಸಂಸ್ಥೆಯ ಅವಶ್ಯಕತೆಯೇ ಇಲ್ಲದಂತೆ ಸಮಾಜವೇ ಕೆಲಸವನ್ನು ಕೈಗೆತ್ತಿಕೊಳ್ಳಬೇಕು. ನಮ್ಮ‌ಹೃದಯದಲ್ಲಿರುವ ದೀಪವನ್ನು ಬೆಳಗಿ ಎಲ್ಲರ ಹೃದಯವನ್ನೂ ಬೆಳಗಿದರೆ ಭಾರತ ಸದೃಢವಾಗಿ ಎದ್ದು ನಿಲ್ಲುತ್ತದೆ, ಆಗ ಭಾರತ‌ ವಿಶ್ವಗುರುವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ 25ನೇ ವರ್ಷಾಚರಣೆ ಸಮಿತಿ ಅಧ್ಯಕ್ಷ ಶ್ರೀನಾಥ್‌ ಭೈಸಾನಿ, ನೆಲೆ ಫೌಂಡೇಷನ್‌ ಅಧ್ಯಕ್ಷ ಡಿ. ಶಿವಕುಮಾರ್‌, ನೆಲೆ ಫೌಂಡೇಷನ್‌ ಟ್ರಸ್ಟಿ ಸುರೇಶ್‌ ಜೆ.ಆರ್‌. ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ ಆರ್,ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೇಂಢೆ, ಅಖಿಲ ಭಾರತೀಯ ಸಹಬೌದ್ಧಿಕ್ ಪ್ರಮುಖ್ ಸುಧೀರ್ ಉಪಸ್ಥಿತರಿದ್ದರು.

Related Articles

Comments (0)

Leave a Comment