- ಇತರೆ
- ಮುಖ್ಯ ಮಾಹಿತಿ
- ರಾಜ್ಯ
- Like this post: 0
ಈ ಬಾರಿ ಅದ್ದೂರಿ ದಸರಾ ಆಚರಣೆ: ಸಿಎಂ ಸಿದ್ದರಾಮಯ್ಯ
- by Suddi Team
- June 28, 2025
- 87 Views

ಬೆಂಗಳೂರು: ರಾಜ್ಯದಾದ್ಯಂತ ಉತ್ತಮ ಮುಂಗಾರಿನಿಂದಾಗಿ ಮಳೆ ಬೆಳೆ ಚೆನಗಿ ಆಗಿದ್ದು, ನದಿ, ಕೆರೆಗಳು ತುಂಬಿರುವ ಹಿನ್ನಲೆಯಲ್ಲಿ ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ವೈಭವದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಾಡಹಬ್ಬ ಮೈಸೂರು ದಸರಾ-2025 ಆಚರಣೆ ಕುರಿತು ನಡೆದ ಉನ್ನತ ಮಟ್ಟದ ಸಮಿತಿ ಸಭೆ ನಡೆಯಿತು. ಈ ಬಾರಿ ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂಬುವುದನ್ನು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿಎಂ, ವೈಭವದ ದಸರಾ ಆಚರಣೆಗೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಳೆದ ವರ್ಷ ದಸರಾ ಆಚರಣೆಗೆ ಒಟ್ಟು 40 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆಗೆ ಬೇಕಾದಷ್ಟು ಅನುದಾನವನ್ನು ಒದಗಿಸಲಾಗುವುದು. ಆದರೆ, ವಿಜ್ರಂಭಣೆ ರಭಸದಲ್ಲಿ ದಸರಾದ ಚಾರಿತ್ರಿಕ ಮಹತ್ವ ಮರೆಯಾಗಬಾರದು. ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ. ಜನರ, ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕೆ ಪ್ರಥಮ ಆದ್ಯತೆ ಇರಲಿ ಎಂದು ಸೂಚನೆ ನೀಡಿದರು.
ಸೆಪ್ಟಂಬರ್ 22ರಂದು ದಸರಾ ಹಬ್ಬಕ್ಕೆ ಚಾಲನೆ ದೊರೆಯಲಿದ್ದು, ಅಕ್ಟೋಬರ್ 2ರಂದು ವಿಜಯದಶಮಿ, ಜಂಬೂ ಸವಾರಿ ನಡೆಯಲಿದೆ. ದಸರಾ ಈ ಬಾರಿ 10 ದಿನಗಳ ಬದಲು 11 ದಿನಗಳ ಕಾಲ ನಡೆಯಲಿದೆ. ದಸರಾಕ್ಕೆ ತನ್ನದೇ ಆದ ಚಾರಿತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದ್ದು, ಇದಕ್ಕೆ ಪೂರಕವಾಗಿ ದಸರಾ ಆಚರಿಸಲಾಗುವುದು. ವಿಶ್ವ ವಿಖ್ಯಾತ ದಸರಾದ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಿದ್ದಾಗಿ ತಿಳಿಸಿದರು.
ದಸರಾ ಸಂದರ್ಭದಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. 10 ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ಸಂದರ್ಭ ಇದಾಗಿದೆ. ವಿದೇಶಿಗರೂ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಾರೆ. ಯಾವುದೇ ಕಾರಣಕ್ಕೂ ಅನಾಹುತ ಸಂಭವಿಸದಂತೆ ಎಲ್ಲ ಕಡೆ ಮುನ್ನೆಚ್ಚರಿಕೆ ವಹಿಸಬೇಕು. ಅರಮನೆ ಮುಂಭಾಗದಲ್ಲಿ ಆಸನದ ವ್ಯವಸ್ಥೆಯನ್ನು ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಮಾಡಿ ಜನದಟ್ಟಣೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಚಾಮುಂಡಿ ಬೆಟ್ಟಕ್ಕೆ ಹೋಗುವ ರಸ್ತೆ, ಕೆಆರ್ಎಸ್ಗೆ ಹೋಗುವ ರಸ್ತೆ ಸೇರಿ ಎಲ್ಲ ಪ್ರಮುಖ ರಸ್ತೆಗಳನ್ನು ದುರಸ್ತಿ ಮಾಡುವ ಕಾರ್ಯವನ್ನು ಈಗಲೇ ಆರಂಭಿಸಬೇಕು. ಜಾನಪದ ಕಲೆಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಬೇಕು. ಜಾನಪದ ಪ್ರದರ್ಶನದಲ್ಲಿ ಏಕತಾನತೆ ಇಲ್ಲದಂತೆ ನೋಡಿಕೊಳ್ಳಬೇಕು. ಕಳೆದ ಬಾರಿ ವಿದ್ಯುತ್ ದೀಪ ಅಲಂಕಾರವನ್ನು ವೈಭವದಿಂದ ಮಾಡಲಾಗಿತ್ತು. ಇದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಬಾರಿಯೂ ವಿದ್ಯುತ್ ದೀಪಾಲಂಕಾರವನ್ನು ಇನ್ನಷ್ಟು ಉತ್ತಮವಾಗಿ ಮಾಡಬೇಕು ಎಂದರು.
ದಸರಾ ವೀಕ್ಷಿಸಲು ಆಗಮಿಸುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಶೌಚಾಲಯ, ವಾಹನ ಪಾರ್ಕಿಂಗ್ ವ್ಯವಸ್ಥೆ ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ಈ ಬಾರಿಯೂ ದೊಡ್ಡ ಪ್ರಮಾಣದಲ್ಲಿ ಡ್ರೋಣ್ ಶೋ ಆಯೋಜಿಸಲಾಗುವುದು ಎಂದರು.
Related Articles
Thank you for your comment. It is awaiting moderation.
Comments (0)