ಬಾಲ್ಯ ವಿವಾಹ ತಡೆಗೆ ವಿಶೇಷ ಕ್ರಮ ಕೈಗೊಳ್ಳಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ
- by Suddi Team
- July 5, 2025
- 38 Views

ಬೀದರ್: ಬಾಲ್ಯ ವಿವಾಹವನ್ನು ತಡೆಯಲು ಅಧಿಕಾರಿಗಳು ವಿಶೇಷ ಕ್ರಮಕೈಗೊಳ್ಳಬೇಕು, ಸ್ವತಃ ಕರೆ ಮಾಡಿ ತನ್ನ ವಿವಾಹವನ್ನು ತಪ್ಪಿಸುವಂತೆ ಅಧಿಕಾರಿಗಳನ್ನು ಕೋರಿದ್ದ ಜಿಲ್ಲೆಯ ಬಾಲಕಿಯನ್ನು ಕರೆಸಿ ಸನ್ಮಾನಿಸಬೇಕು ಎಂದು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚಿಸಿದರು.
ಬೀದರ್ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಕಲಬುರಗಿ ವಿಭಾಗ ಮಟ್ಟದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎರಡನೇ ದಿನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು,
ಬಾಲ್ಯ ವಿವಾಹವನ್ನು ತಡೆಯಲು ಅಧಿಕಾರಿಗಳು ವಿಶೇಷ ಕ್ರಮಕೈಗೊಳ್ಳಬೇಕು, ಸ್ವತಃ ಕರೆ ಮಾಡಿ ತನ್ನ ವಿವಾಹವನ್ನು ತಪ್ಪಿಸುವಂತೆ ಅಧಿಕಾರಿಗಳನ್ನು ಕೋರಿದ್ದ ಜಿಲ್ಲೆಯ ಬಾಲಕಿಯನ್ನು ಕರೆಸಿ ಸನ್ಮಾನಿಸಬೇಕು, ಜೊತೆಗೆ ಆರ್ಥಿಕ ಸಹಾಯ ಮಾಡಬೇಕು. ಇದರಿಂದ ಬೇರೆಯವರಿಗೂ ಕೂಡ ಸಹಾಯವಾಗುತ್ತದೆ ಎಂದ ಸಚಿವರು, ಎಲ್ಲಾ ಇಲಾಖೆಗಳು ಕೈಜೋಡಿಸಿದಾಗ ಅನಿಷ್ಟ ಪದ್ಧತಿಗಳನ್ನು ತಡೆಯಲು ಸಾಧ್ಯ. ಜಾಗೃತಿ ಮೂಡಿಸುವುದರ ಜೊತೆಗೆ ಕಠಿಣ ಕ್ರಮದ ಮೂಲಕ ಭಯ ಹುಟ್ಟಿಸಿದರೆ ಅನಿಷ್ಟ ಪದ್ಧತಿ ನಿಲ್ಲಲು ಸಾಧ್ಯ ಎಂದು ತಿಳಿಸಿದರು.
ರಾಜ್ಯದಲ್ಲಿ 30 ರಿಂದ 40 ಲಕ್ಷ ಗೃಹಲಕ್ಷ್ಮಿ ಸಂಘಗಳನ್ನು ರಚಿಸುವ ಯೋಜನೆಯಿದ್ದು, ಈ ಮೂಲಕ ಯಜಮಾನಿಯರಿಗೆ ಆರ್ಥಿಕವಾಗಿ ಬಲ ತುಂಬಲು ಕ್ರಮ ಕೈಗೊಳ್ಳಲಾಗುವುದು,
ಈ ವರ್ಷ ಅಂಗನವಾಡಿ ಆರಂಭವಾಗಿ 50 ವರ್ಷ ತುಂಬುತ್ತಿದ್ದು, ಅಕ್ಟೋಬರ್ ನಲ್ಲಿ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗೃಹಲಕ್ಷ್ಮಿ ಸಂಘಗಳ ಘೋಷಣೆ ಮಾಡಿ ಇನ್ನಷ್ಟು ಬಲ ತುಂಬಲಾಗುವುದು ಎಂದರು.
ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳಿದ್ದು, ಜನರಿಗೆ ತಿಳಿವಳಿಕೆ ಮೂಡಿಸಲು ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಬೇಕು. ನಮ್ಮ ಇಲಾಖೆ ಜನರಿಗೆ, ಜನರ ಬದುಕಿಗೆ ಹತ್ತಿರವಾದ ಇಲಾಖೆ, ಅಧಿಕಾರಿಗಳು ಹೆಚ್ಚು ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕೇಂದ್ರ ಹಾಗೂ ರಾಜ್ಯದಿಂದ ಕಾಲಕಾಲಕ್ಕೆ ನೀಡಲಾಗುವ ಗುರಿಯನ್ನು ತಲುಪಲೇಬೇಕು. ಇಲಾಖೆ ಯೋಜನೆ ಅನುಷ್ಠಾನದಲ್ಲಿ ಹಿಂದೆ ಬಿದ್ದಲ್ಲಿ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಲಬುರಗಿ ವಿಭಾಗದಲ್ಲಿ ಗೃಹಲಕ್ಷ್ಮಿ ಯೋಜನೆಗೆ 10 ಸಾವಿರ ಕೋಟಿ:
ಈ ಭಾಗಕ್ಕೆ ಗೃಹ ಲಕ್ಷ್ಮೀ ಯೋಜನೆ ಮೂಲಕ 10 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ. ಯಾರಿಗೂ ಯೋಜನೆ ಕೈ ತಪ್ಪದಂತೆ ಕ್ರಮ ಕೈಗೊಳ್ಳಬೇಕು. ಗೃಹ ಲಕ್ಷ್ಮೀ ಹಣದಿಂದ ಮಹಿಳೆಯರು ಸಾಕಷ್ಟು ಕಾರ್ಯಕ್ರಮ ಮಾಡುತ್ತಿದ್ದಾರೆ. ಅವುಗಳನ್ನು ಪ್ರಚಾರ ಮಾಡುವುದರಿಂದ ಇತರರಿಗೂ ಲಾಭವಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಧಿಕಾರಿಗಳಿಗೆ ಸೂಚಿಸಿದರು.
ಗೃಹ ಲಕ್ಷ್ಮೀ ಸಂಘಗಳ ಮೂಲಕ ಇನ್ನೂ ಹೆಚ್ಚಿನ ಪ್ರಯೋಜನವಾಗುವಂತೆ ಹೇಗೆ ಮಾಡಬಹುದು ಎನ್ನುವ ಚಿಂತನೆ ಮಾಡುತ್ತಿದ್ದೇವೆ ಎಂದರು.
ಅಕ್ಕ ಪಡೆಗೆ ಸಚಿವರ ಶ್ಲಾಘನೆ:
ಬೀದರ್ ಜಿಲ್ಲೆಯಲ್ಲಿ 10 ಜನ ಮಹಿಳಾ ಪೊಲೀಸ್ ತಂಡದಿಂದ ಅಕ್ಕ ಪಡೆ ರಚಿಸಿ ಶಾಲಾ- ಕಾಲೇಜು, ಗಾರ್ಡನ್, ಹಾಸ್ಟೆಲ್ ಮೊದಲಾದ ಕಡೆ ನಿರಂತರ ನಿಗಾ ವಹಿಸುವ ಮೂಲಕ ಹೆಣ್ಣು ಮಕ್ಕಳಿಗೆ ವಿಶೇಷ ರಕ್ಷಣೆ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಇದೇ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Related Articles
Thank you for your comment. It is awaiting moderation.
Comments (0)