ಸ್ವಚ್ಛ ವಾಯು ಸರ್ವೇಕ್ಷಣ್ 2026: ಬೆಂಗಳೂರಿನ ಕೋರಮಂಗಲ, ದಾವಣಗೆರೆಯ ಎರಡು ವಾರ್ಡ್‌ಗಳಿಗೆ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಗೌರವ

ಬೆಂಗಳೂರು:ಭಾರತ ಸರ್ಕಾರದ ಸ್ವಚ್ಛ ವಾಯು ಸರ್ವೇಕ್ಷಣ್ 2026ರ ರಾಜ್ಯ ಮಟ್ಟದ ಪ್ರಶಸ್ತಿಗಳಲ್ಲಿ ಕರ್ನಾಟಕವು ಗಮನಾರ್ಹ ಸಾಧನೆ ಮಾಡಿದ್ದು, ಬೆಂಗಳೂರು ಮತ್ತು ದಾವಣಗೆರೆಯ ವಾರ್ಡ್‌ಗಳು ವಿವಿಧ ಜನಸಂಖ್ಯೆ ಆಧಾರಿತ ವಿಭಾಗಗಳಲ್ಲಿ ಪ್ರಶಸ್ತಿಗೆ ಭಾಜನವಾಗಿವೆ.

30,000 ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ವಾರ್ಡ್‌ಗಳ ವಿಭಾಗದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಕೋರಮಂಗಲ ವಾರ್ಡ್-151 ರಾಷ್ಟ್ರೀಯ ಪ್ರಶಸ್ತಿ ವಿಜೇತ ವಾರ್ಡ್ ಆಗಿ ಗುರುತಿಸಿಕೊಂಡಿದೆ. ಈ ಸಾಧನೆಯು ಸ್ವಚ್ಛ ವಾಯು ನಿರ್ವಹಣೆ, ಪರಿಸರ ಸಂರಕ್ಷಣೆ, Solid waste managent ಉಪಕ್ರಮಗಳು, ಸುಸ್ಥಿರ ನಗರಾಭಿವೃದ್ಧಿ ಹಾಗೂ ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ.

10,000 ರಿಂದ 30,000 ಜನಸಂಖ್ಯೆ ಹೊಂದಿರುವ ವಾರ್ಡ್‌ಗಳ ವಿಭಾಗದಲ್ಲಿ ದಾವಣಗೆರೆ ನಗರದ ವಾರ್ಡ್-36 ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ವಾಯು ಮಾಲಿನ್ಯ ನಿಯಂತ್ರಣ ಮತ್ತು ನಗರ ಸ್ವಚ್ಛತೆಯಲ್ಲಿ ಕೈಗೊಂಡ ಪರಿಣಾಮಕಾರಿ ಕ್ರಮಗಳಿಗೆ ಈ ಗೌರವ ದೊರೆತಿದೆ.

ಅದೇ ರೀತಿ, 10,000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ವಾರ್ಡ್‌ಗಳ ವಿಭಾಗದಲ್ಲಿ ದಾವಣಗೆರೆ ನಗರದ ವಾರ್ಡ್-07 ಪ್ರಶಸ್ತಿ ಪಡೆದು ಕರ್ನಾಟಕದ ಸಾಧನೆಯನ್ನು ಮತ್ತಷ್ಟು ಉಜ್ವಲಗೊಳಿಸಿದೆ.

ಬೆಂಗಳೂರು ಮತ್ತು ದಾವಣಗೆರೆಯ ಈ ಸಾಧನೆಗಳು ಉತ್ತಮ ವಾಯುಗುಣಮಟ್ಟ ಹಾಗೂ ಆರೋಗ್ಯಕರ ನಗರ ಪರಿಸರ ನಿರ್ಮಾಣದತ್ತ ಕರ್ನಾಟಕದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಈ ಮಾನ್ಯತೆಗಳು ಇತರೆ ನಗರ ಸ್ಥಳೀಯ ಸಂಸ್ಥೆಗಳಿಗೂ ಪ್ರೇರಣೆಯಾಗಿದ್ದು, ಸ್ವಚ್ಛ ಮತ್ತು ಹಸಿರು ನಗರಗಳ ನಿರ್ಮಾಣಕ್ಕೆ ಉತ್ತೇಜನ ನೀಡಲಿವೆ.

ಭಾರತ ಸರ್ಕಾರದ ಸ್ವಚ್ಛ ವಾಯು ಸರ್ವೇಕ್ಷಣ್ 2026ರಲ್ಲಿ ಕರ್ನಾಟಕದ ಪ್ರಶಸ್ತಿ ವಿಜೇತ ವಾರ್ಡ್‌ಗಳು:

• ವಿಭಾಗ-1 (30,000 ಕ್ಕಿಂತ ಹೆಚ್ಚು ಜನಸಂಖ್ಯೆ): ಬೆಂಗಳೂರು – ಕೋರಮಂಗಲ ವಾರ್ಡ್-151

• ವಿಭಾಗ-2 (10,000 ರಿಂದ 30,000 ಜನಸಂಖ್ಯೆ): ದಾವಣಗೆರೆ – ವಾರ್ಡ್-36

• ವಿಭಾಗ-3 (10,000 ಕ್ಕಿಂತ ಕಡಿಮೆ ಜನಸಂಖ್ಯೆ): ದಾವಣಗೆರೆ – ವಾರ್ಡ್-07

ಈ ಮಹತ್ವದ ಸಾಧನೆಗೆ ಕಾರಣಕರ್ತರಾದ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು, ಪೌರಕಾರ್ಮಿಕರು ಹಾಗೂ ನಾಗರಿಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಸಾಮೂಹಿಕ ಪ್ರಯತ್ನದಿಂದ ಕರ್ನಾಟಕಕ್ಕೆ ಈ ಗೌರವ ಲಭಿಸಿದೆ ಎಂದು ಬಿ.ಟಿ.ಎಂ ವಿಧಾನಸಭಾ ಕ್ಷೇತ್ರ ( ಕೋರಮಂಗಲ )ದ ಶಾಸಕರೂ ಆದ ಅರಣ್ಯ,ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ರಾಮಲಿಂಗಾರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.

Related Articles

Comments (0)

Leave a Comment