ಸಿದ್ದರಾಮಯ್ಯ ರಾಜೀನಾಮೆ ಪಡೆಯಲು ಭೂಮಿಕೆ ಸಿದ್ಧತೆಗೆ ಸುರ್ಜೇವಾಲಾ ಭೇಟಿ: ಬಿ.ವೈ. ವಿಜಯೇಂದ್ರ
- by Suddi Team
- July 3, 2025
- 379 Views

ಬೆಂಗಳೂರು: ಸಿದ್ದರಾಮಯ್ಯನವರ ರಾಜೀನಾಮೆ ತೆಗೆದುಕೊಳ್ಳಲು ಒಂದು ಭೂಮಿಕೆ ಸಿದ್ಧಪಡಿಸಲು ಕಾಂಗ್ರೆಸ್ಸಿನ ಹಿರಿಯ ನಾಯಕರೂ ಆಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಕರ್ನಾಟಕಕ್ಕೆ ಬಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರ್ಜೇವಾಲಾ ಅವರು ಕರ್ನಾಟಕದಲ್ಲಿ ಬೀಡುಬಿಟ್ಟಿದ್ದಾರೆ. ಶಾಸಕರ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಗಾದಿಗೆ ಪೈಪೋಟಿ ಹೆಚ್ಚಾಗಿದ್ದು, ಕುದುರೆ ವ್ಯಾಪಾರ ಜೋರಾಗಲಿದೆ. ಕುದುರೆ ವ್ಯಾಪಾರದ ಬಗ್ಗೆ ಮಾನ್ಯ ರಾಜ್ಯಪಾಲರೂ ಗಮನಿಸಬೇಕು ಎಂದು ವಿನಂತಿಸಿದರು.
ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಅವರು ಡಿಕೆಶಿಯವರಿಗೆ 100 ಜನ ಶಾಸಕರ ಬೆಂಬಲ ಇದೆ, ಅವರು ಮುಖ್ಯಮಂತ್ರಿ ಆಗಬೇಕು ಎಂದಿದ್ದಾರೆ. ಕಾಂಗ್ರೆಸ್ಸಿನ ಹಿರಿಯ ಶಾಸಕರಾದ ಬಿ.ಆರ್. ಪಾಟೀಲ್, ರಾಜು ಕಾಗೆಯವರು ಸೇರಿ ಬೇರೆ ಬೇರೆ ಶಾಸಕರು ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಮುಖ್ಯಮಂತ್ರಿಗಳು ಅವರ ಪಕ್ಷದ ಶಾಸಕರ ವಿಶ್ವಾಸವನ್ನೂ ಕಳಕೊಂಡಿದ್ದಾರೆ ಎಂದರು.
ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ದಿನೇದಿನೇ ಹೆಚ್ಚಳ:
ರಾಜ್ಯದಲ್ಲಿ ಪರಿಸ್ಥಿತಿ ದಿನೇದಿನೇ ಕೈಮೀರಿ ಹೋಗುತ್ತಿದೆ. ಆಡಳಿತ ಯಂತ್ರವು ಸಂಪೂರ್ಣವಾಗಿ ಕುಸಿದುಬಿದ್ದಿದೆ. ಆಡಳಿತ ಪಕ್ಷದಲ್ಲಿ ಶಾಸಕರ ನಡುವೆ ಪೈಪೋಟಿ ಆರಂಭವಾಗಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ದಿನೇದಿನೇ ಹೆಚ್ಚಾಗಿದೆ ಎಂದು ವಿಶ್ಲೇಷಿಸಿದರು. ಇದರ ಪರಿಣಾಮವಾಗಿ ಅಭಿವೃದ್ಧಿ ಕೆಲಸ ಕಾರ್ಯಗಳು ಏನೂ ನಡೆಯುತ್ತಿಲ್ಲ. ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.
ಹಾಸನ ಜಿಲ್ಲೆಗೆ ಮಾತ್ರ ಕೋವಿಡ್ ಲಸಿಕೆ ಕೊಡಲಾಗಿದೆಯೇ?
ಹೃದಯಾಘಾತದಿಂದ ಹಾಸನ ಜಿಲ್ಲೆಯಲ್ಲಿ 35-40 ಜನರು ಸತ್ತಿದ್ದು, ಕೋವಿಡ್ ಲಸಿಕೆ ಕಾರಣ ಎಂಬ ಮುಖ್ಯಮಂತ್ರಿಗಳ ಆರೋಪಕ್ಕೆ ಉತ್ತರಿಸಿದ ಅವರು, ಹಾಸನ ಜಿಲ್ಲೆಗೆ ಮಾತ್ರ ಕೋವಿಡ್ ಲಸಿಕೆ ಕೊಡಲಾಗಿದೆಯೇ? ದೇಶದ ಕೋಟ್ಯಂತರ ಜನರಿಗೆ, ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಿಗೂ ಕೋವಿಡ್ ಲಸಿಕೆ ರಫ್ತು ಮಾಡಿದ್ದಾರೆ. ಹಾಸನದ ಸಾವುಗಳ ಸಂಬಂಧ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸಮರ್ಪಕ ತನಿಖೆ ನಡೆಸಬೇಕಿದೆ. ಮುಖ್ಯಮಂತ್ರಿಗಳು ತುರ್ತಾಗಿ ಸಭೆ ಕರೆದು ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಸಮರ್ಪಕ ಔಷಧ ಸಿದ್ಧವಾಗಿ ಇಟ್ಟುಕೊಳ್ಳುವ ಕಡೆ ಗಮನಿಸಬೇಕೆಂದು ಒತ್ತಾಯಿಸಿದರಲ್ಲದೆ, ಈ ರೀತಿಯ ಅಪಪ್ರಚಾರ ಸಲ್ಲದು ಎಂದು ಹೇಳಿದರು.
ಕೇಂದ್ರದಲ್ಲಿ ಅಧಿಕಾರ, ಆರೆಸ್ಸೆಸ್ ನಿಷೇಧ- ತಿರುಕನ ಕನಸು:
ಆರೆಸ್ಸೆಸ್ ನಿಷೇಧ ಕುರಿತ ಪ್ರಿಯಾಂಕ್ ಖರ್ಗೆಯವರ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಇದು ತಿರುಕನ ಕನಸು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಸ್ವತಃ ನಿಮ್ಮ ತಂದೆ- ಮಲ್ಲಿಕಾರ್ಜುನ ಖರ್ಗೆಯವರೇ ನಂಬಲು ಸಾಧ್ಯವಿಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರೇ ನಂಬಲಸಾಧ್ಯ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಕನಸು ಪ್ರಿಯಾಂಕ್ ಖರ್ಗೆಯವರಿಗೆ ಯಾಕೆ ಬಿತ್ತು ಎಂದು ಪ್ರಶ್ನಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಒಂದು ರಾಷ್ಟ್ರಭಕ್ತ ಸಂಘಟನೆ. ಭಾರತ-ಚೀನಾದ ಯುದ್ಧದ ವೇಳೆ ಆರೆಸ್ಸೆಸ್ ಪಾತ್ರವನ್ನು ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸ್ವಾಗತಿಸಿದ್ದರು. ಅದರ ಬಳಿಕ ರಿಪಬ್ಲಿಕ್ ಪರೇಡ್‍ನಲ್ಲಿ ಅವಕಾಶ ಕೊಡಲಾಗಿತ್ತು. ನೆಹರೂ, ಇಂದಿರಾ ಗಾಂಧಿಯವರು ಕೂಡ ಆರೆಸ್ಸೆಸ್ ನಿಷೇಧಿಸಿದ್ದರು ಎಂದರು.
Related Articles
Thank you for your comment. It is awaiting moderation.
Comments (0)