ರಾಜ್ಯದಲ್ಲಿ ಹಳೇ ಪಿಂಚಣಿ ಯೋಜನೆ ಜಾರಿಗೆ ಕ್ರಮ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಹಳೇ ಪಿಂಚಣಿ ಯೋಜನೆಯನ್ನು (ಒಪಿಎಸ್) ರಾಜ್ಯದಲ್ಲಿ ಮರಳಿ ಜಾರಿಗೆ ತರುವ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ನೌಕರರ ಸಂಘದ ವಜ್ರ ಮಹೋತ್ಸವ ಸಮಾರಂಭ ಉದ್ಘಾಟಿಸಿ, ವಜ್ರಜ್ಯೋತಿ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಮ್ಮದು ನುಡಿದಂತೆ ನಡೆಯುವ ಸರ್ಕಾರ. ನಿಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಎನ್‌ಪಿಎಸ್ ಜಾರಿ ಮಾಡಿದ್ದು ಕೇಂದ್ರ ಸರ್ಕಾರ. ನಾವು ಒಪಿಎಸ್ ಜಾರಿಯನ್ನು ಪ್ರಣಾಳಿಕೆಯಲ್ಲೇ ಘೋಷಿಸಿದ್ದೇವೆ. ಈ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.

1964ರಲ್ಲಿ ಆರಂಭವಾದ ನೌಕರರ ಸಂಘ ಇಷ್ಟು ಮಹತ್ತರ ವರ್ಷಗಳ ಕಾಲ ನಿರಂತರವಾಗಿ ನೌಕರರ ಕಷ್ಟ ಸುಖಗಳಿಗೆ ಸ್ಪಂದಿಸಿ, ಪ್ರಾಮಾಣಿಕ ಹೋರಾಟ ನಡೆಸುತ್ತಿದೆ. ಜತೆಗೆ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಸುವ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಇದಕ್ಕೆ ನೀವೆಲ್ಲರೂ ಅಭಿನಂದನಾರ್ಹರು ಎಂದು ಶ್ಲಾಘಿಸಿದರು.

ಇಡೀ ಏಷ್ಯಾದಲ್ಲಿ ಮೊದಲಿಗೆ ವಿದ್ಯುತ್ ಉತ್ಪಾದನೆ ಆಗಿದ್ದು 1902ರಲ್ಲಿ ಕರ್ನಾಟಕದಲ್ಲಿ. 1905ರಲ್ಲಿ ಬೆಂಗಳೂರಿನಲ್ಲಿ ಪ್ರಥಮ ವಿದ್ಯುತ್ ಸರಬರಾಜು ಕಂಪನಿ ಆರಂಭಿಸಲಾಯಿತು. 1908ರಲ್ಲಿ ಮೊದಲ ಬಾರಿ ಅರಮನೆಗೆ ವಿದ್ಯುತ್ ಬಂತು. ಅಲ್ಲಿಂದ ಇಲ್ಲಿಯವರೆಗೆ 34,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ರಾಜ್ಯ ಎನ್ನುವ ಹೆಗ್ಗಳಿಕೆ ಕೇವಲ ನಮ್ಮ ರಾಜ್ಯದ್ದಾಗಿದೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿರುವ ಕಾರಣಕ್ಕೇ ಆಹಾರ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗುತ್ತಿದ್ದೇವೆ ಎಂದು ವಿಶ್ಲೇಷಿಸಿದರು.

ರೈತರಿಗೆ, ಕೃಷಿಗೆ, ಪಂಪ್‌ಸೆಟ್‌ಗಳಿಗೆ ಹಗಲಲ್ಲೂ 7 ಗಂಟೆ ಅಗತ್ಯ ವಿದ್ಯುತ್ ಸರಬರಾಜು ಮಾಡಲು ಶಕ್ತರಾಗುತ್ತೇವೆ. ಈ ಗುರಿ ಇಟ್ಟುಕೊಂಡು ಕೆಲಸಗಳು ನಡೆಯುತ್ತಿವೆ. 60,000 ಮೆಗಾ ವ್ಯಾಟ್ ಉತ್ಪಾದನೆ ಗುರಿ ನಾವು ತಲುಪಿದ ತಕ್ಷಣ ಇದು ಸಾಧ್ಯವಾಗಲಿದೆ. ವಿದ್ಯುತ್ ಪ್ರಮುಖ ಕಚ್ಛಾವಸ್ತು ಎನ್ನುವುದನ್ನು ನಾವು ಮರೆಯಬಾರದು ಎಂದರು.

ನೌಕರರು ಮತ್ತು ಕಾರ್ಮಿಕರು ಬಹಳ ಶ್ರಮ ವಹಿಸಿ ಕೆಲಸ ನಿರ್ವಹಿಸುತ್ತಿದ್ದೀರಿ. ನಿಮ್ಮ ಎಲ್ಲ ಬೇಡಿಕೆಗಳನ್ನೂ ಈಡೇರಿಸಲು ನಮ್ಮ ಸರ್ಕಾರ ಸಿದ್ಧವಿದೆ. ನಾವು ನಿಮ್ಮ ಜತೆಗೆ ಇದ್ದೇವೆ. ನೀವು ನಮ್ಮ ಜತೆಗೆ ಇರಿ ಎಂದು ಕರೆ ನೀಡಿದರು.

ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35,000 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಇಲಾಖೆಯ 532 ಮಂದಿ ಪೌರ ಕಾರ್ಮಿಕರ ಹುದ್ದೆ ಕಾಯಂ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

Related Articles

Comments (0)

Leave a Comment