ಅತಿಯಾದ ರಾಸಾಯನಿಕಗಳ ಬಳಕೆಯಿಂದ ರಾಜ್ಯದ ಕೃಷಿಭೂಮಿ ವೇಗವಾಗಿ ಮರುಭೂಮಿಯಾಗುತ್ತಿದೆ: ಸಿಎಂ ಕಳವಳ
- by Suddi Team
- June 1, 2025
- 11 Views

ಬೆಂಗಳೂರು:ಏಕ ಬೆಳೆ ಪದ್ಧತಿ, ಅತಿಯಾದ ರಾಸಾಯನಿಕಗಳ ಬಳಕೆ ಮುಂತಾದ ಕಾರಣದಿಂದ ರಾಜ್ಯದ ಶೇ. 43 ಕ್ಕೂ ಹೆಚ್ಚಿನ ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲ ಕಡಿಮೆಯಾಗಿದೆ. ಇದರಿಂದ ಭೂಮಿ ವೇಗವಾಗಿ ಮರುಭೂಮಿಯಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಾವೆಲ್ಲರೂ ಗಾಬರಿ ಪಡಬೇಕಾದ ಸಂಗತಿಯಿದೆ. ಏಕ ಬೆಳೆ ಪದ್ಧತಿ, ಅತಿಯಾದ ರಾಸಾಯನಿಕಗಳ ಬಳಕೆ ಮುಂತಾದ ಕಾರಣದಿಂದ ರಾಜ್ಯದ ಶೇ. 43 ಕ್ಕೂ ಹೆಚ್ಚಿನ ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲ ಕಡಿಮೆಯಾಗಿದೆ. ಇದರಿಂದ ಭೂಮಿ ವೇಗವಾಗಿ ಮರುಭೂಮಿಯಾಗುತ್ತಿದೆ. ಕೃತಕ ರಸಗೊಬ್ಬರ ಬಳಕೆ, ರಾಸಾಯನಿಕಗಳ ಬಳಕೆ ಹೆಚ್ಚಾಗುತ್ತದೆ. ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದ ಹಲವು ಸಮಸ್ಯೆಗಳುಂಟಾಗುತ್ತವೆ. ಇದನ್ನು ನಿಭಾಯಿಸಲು, ಮಣ್ಣನ್ನು ಮತ್ತೆ ಜೀವಂತಗೊಳಿಸಲು ಆಕ್ಷನ್ ಪ್ಲಾನ್ ಸಿದ್ಧ ಪಡಿಸಲು ಸೂಚಿಸಲಾಗಿದೆ. ಈ ಕುರಿತು ರೈತರಿಗೆ ಶಿಕ್ಷಣ ನೀಡಲು ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಈ ಬಾರಿ ಮುಂಗಾರು ಅವಧಿಗೆ ಮುನ್ನವೇ ಕ್ರಿಯಾಶೀಲವಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ರಾಜ್ಯದಲ್ಲಿ ಕಳೆದ ವರ್ಷ ದಾಖಲೆ ಮಟ್ಟದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಾಗಿದೆ. ಈ ವರ್ಷ ಕೂಡ ಕೃಷಿ ಚಟುವಟಿಕೆಗಳು ಚೆನ್ನಾಗಿ ಆರಂಭವಾಗಿದೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಯಾವುದೇ ಕಾರಣಕ್ಕೂ ಕೊರತೆಯಾಗದಂತೆ ದಾಸ್ತಾನು ಮಾಡಿ ವಿತರಿಸಲು ಸೂಚನೆ ನೀಡಿದ್ದೇನೆ ಎಂದರು.
ಈ ಬಾರಿ ಮಳೆಗಾಲದ ಆರಂಭದಲ್ಲೇ ಪ್ರವಾಹ ಪರಿಸ್ಥಿತಿ, ಗುಡ್ಡ ಕುಸಿತ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಪ್ರಕರಣಗಳಲ್ಲಿ ಸಾವು ನೋವು ಸಂಭವಿಸದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಮನೆ ಹಾನಿ, ಬೆಳೆಹಾನಿ, ಜೀವ ಹಾನಿ ಪ್ರಕರಣಗಳಲ್ಲಿ ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಿ ತುರ್ತಾಗಿ ಪರಿಹಾರ ವಿತರಿಸಲು ಸೂಚನೆ ನೀಡಲಾಗಿದೆ ಎಂದರು.
ರಾಜ್ಯದ 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮಳೆ ಹಾನಿಗೆ ಪರಿಹಾರ ಒದಗಿಸಲು ಯಾವುದೇ ಅನುದಾನದ ಕೊರತೆಯಿಲ್ಲ. ಜಿಲ್ಲೆಗಳಲ್ಲಿ ಎಸ್.ಡಿ.ಆರ್.ಎಫ್ ಅಡಿ ಒಟ್ಟಾರೆಯಾಗಿ ಒಂದು ಸಾವಿರ ಕೋಟಿಗಿಂತಲೂ ಹೆಚ್ಚು ಹಣ ಲಭ್ಯವಿದ್ದು, ಅತಿವೃಷ್ಟಿಯಿಂದ ಮನೆಗಳಿಗೆ ಹಾನಿ ಉಂಟಾದರೆ ಮಾರ್ಗಸೂಚಿಯಂತೆ ಪರಿಹಾರ ಕಾರ್ಯ ನಡೆಸಲು ಸೂಚಿಸಲಾಗಿದೆ ಎಂದರು.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ರೈತರ ಆತ್ಮಹತ್ಯೆಗಳು ಕಡಿಮೆಯಾಗಿವೆ. ನಮ್ಮ ಉದ್ದೇಶ ಒಂದೂ ಆತ್ಮಹತ್ಯೆ ಯಾಗದಂತೆ ಗಮನ ಹರಿಸಬೇಕು. ಇದಕ್ಕೋಸ್ಕರ ಈಗಾಗಲೆ ಗ್ರಾಮ ಮಟ್ಟದಲ್ಲಿ ತಂಡಗಳನ್ನು ಮಾಡಲಾಗಿದೆ. ಈ ತಂಡಗಳನ್ನು ಇನ್ನಷ್ಟು ಆಕ್ಟಿವೇಟ್ ಮಾಡಬೇಕು. ಖಾಸಗಿ ಲೇವಾದೇವಿಗಾರರನ್ನು, ಮೈಕ್ರೋ ಫೈನಾನ್ಸ್ ಗಳನ್ನು ನಿಯಂತ್ರಿಸಲು ಜಿಲ್ಲಾ ಮಟ್ಟದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
Related Articles
Thank you for your comment. It is awaiting moderation.
Comments (0)