ಜೂನ್‌‌ನಲ್ಲೇ ಕಾವೇರಿಗೆ ಬಾಗಿನ; ಇತಿಹಾಸ ಬರೆದ ಸಿಎಂ ಸಿದ್ದರಾಮಯ್ಯ

ಮಂಡ್ಯ: ಕೃಷ್ಣರಾಜಸಾಗರ (ಕೆಆರ್​ಎಸ್) ಜಲಾಶಯ ನಿರ್ಮಾಣದ ನಂತರ ಮೊದಲ ಬಾರಿ ಜೂನ್‌‌ನಲ್ಲಿ ಬಾಗಿನ ಅರ್ಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈವರೆಗೂ ಮೂರು ಬಾರಿ ಕನ್ನಂಬಾಡಿ ಕಟ್ಟೆಯಲ್ಲಿ ಸಿಎಂ ಬಾಗಿನ ಅರ್ಪಿಸಿದ್ದರೂ ಈ ಬಾರಿಯದ್ದು ಮಾತ್ರ ಅವರ ಪಾಲಿಗೆ ಅವಿಸ್ಮರಣೀಯ.

ಹಳೇ ಮೈಸೂರು ಭಾಗದ ಜೀವನಾಡಿ, ಕನ್ನಡ ನಾಡಿನ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದು, 1931ರಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಿರ್ಮಿಸಿರುವ ಕೆಆರ್​ಎಸ್ ಜಲಾಶಯ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಭರ್ತಿಯಾಗಿದೆ. 1941ರಲ್ಲಿ ಪೂರ್ಣಮಟ್ಟದ ಸಮೀಪಕ್ಕೆ ಬಂದಿತ್ತಾದರೂ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಬಿಡಲಾಗಿದ್ದರಿಂದ ಗರಿಷ್ಠಮಟ್ಟ ತಲುಪಿರಲಿಲ್ಲ. ಆದರೆ, ಈ ಬಾರಿ 124.80 ಅಡಿ ಸಾಮರ್ಥ್ಯದ ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, 30 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರನ್ನು ಜಲಾಶಯದ ಎಲ್ಲ ಗೇಟ್‌‌ಗಳ ಮೂಲಕ ನದಿಗೆ ಬಿಡಲಾಗುತ್ತಿದೆ.

ವಿಶೇಷವೇನೆಂದರೆ, 93 ವರ್ಷಗಳ ನಂತರ ಜೂನ್ ತಿಂಗಳಲ್ಲಿ ಅಣೆಕಟ್ಟಿನಿಂದ ಭಾರಿ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಅಲ್ಲದೆ ಜೂನ್‌‌ನಲ್ಲಿಯೇ ಮೊದಲ ಬಾರಿಗೆ ಕಾವೇರಿಗೆ ಬಾಗಿನ ಅರ್ಪಿಸಲಾಗಿದೆ. 1979ರಿಂದ ಕಾವೇರಿಗೆ ಬಾಗಿನ ಅರ್ಪಿಸುವ ಪದ್ದತಿ ಆರಂಭವಾಯಿತು. ಮೊದಲ ಬಾರಿಗೆ ಡಿ. ದೇವರಾಜ ಅರಸು ಬಾಗಿನ ಅರ್ಪಿಸಿದ್ದರು. ಆದರೆ, ಅರಸು ಸೇರಿ ಯಾವ ಮುಖ್ಯಮಂತ್ರಿಯೂ ಈವರೆಗೆ ಜೂನ್‌ನಲ್ಲಿ ಬಾಗಿನ ಅರ್ಪಿಸಿಲ್ಲ. ಜೂನ್ ತಿಂಗಳಲ್ಲೇ ಜೀವನದಿಗೆ ಬಾಗಿನ ಅರ್ಪಿಸಿದ ಮೊದಲ ಸಿಎಂ ಎನ್ನುವ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದಾಗಿದೆ.

ಸಾಮಾನ್ಯವಾಗಿ ಕೆಆರ್​ಎಸ್ ಡ್ಯಾಂ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗುತ್ತದೆ. ಆ ನಂತರ ಮುಖ್ಯಮಂತ್ರಿಗಳಿಂದ ಬಾಗಿನ ಅರ್ಪಿಸಲಾಗುತ್ತದೆ. ಆದರೆ, ಈ ವರ್ಷ ಜೂನ್ ಕೊನೆಯ ವಾರದಲ್ಲೇ ಕೆಆರ್‌ಎಸ್ ಒಡಲು ಭರ್ತಿಯಾಯಿತು. ಹಾಗಾಗಿ ಜೂನ್ ಕೊನೆಯಲ್ಲೇ ಬಾಗಿನ ಅರ್ಪಿಸುವ ಅವಕಾಶ ಸಿದ್ದರಾಮಯ್ಯ ಅವರ ಪಾಲಿಗೆ ಒಲಿಯಿತು.

ಕಾವೇರಿ ನೀರಾವರಿ ನಿಗಮದ ವತಿಯಿಂದ ಕೃಷ್ಣರಾಜ ಸಾಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾವೇರಿ ಮಾತೆಯ ಪೂಜೆ ನೆರವೇರಿಸಿದ ನಂತರ ಬಾಗಿನ ಸಮರ್ಪಣೆ ಮಾಡಿದರು.

ಕನ್ನಂಬಾಡಿ ಅಣೆಕಟ್ಟು ಮಂಡ್ಯ ಮಾತ್ರವಲ್ಲ ಹಳೇ ಮೈಸೂರು ಭಾಗದ ಜನರ ಜೀವನಾಡಿಯಾಗಿದೆ. ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ, ವಿಶ್ವೇಶ್ವರಯ್ಯನವರ ತಂತ್ರಜ್ಞಾನದ ಫಲವಾಗಿ ಕೆಆರ್​ಎಸ್​ ನಿರ್ಮಾಣಕೊಂಡು‌ ಸಾವಿರಾರು ಎಕರೆ ಭೂಮಿಗೆ, ಕೋಟ್ಯಾಂತರ ಜನರಿಗೆ ಜೀವ ಜಲ ಒದಗಿಸುತ್ತಿದ್ದು, ಜಲಾಶಯ ಭರ್ತಿಯಾಗಿರುವುದು ರೈತಾಪಿ ಸಮುದಾಯಕ್ಕೆ ನೆಮ್ಮದಿ ತಂದಿದ್ದರೆ ಕಾವೇರಿ ಜಲವ್ಯಾಜ್ಯದಿಂದ ತಮಿಳುನಾಡಿನೊಂದಿಗೆ ಆಗುವ ಸಂಘರ್ಷ ಈ ಬಾರಿ ತಪ್ಪಿದಂತಾಗಿದೆ.

Related Articles

Comments (0)

Leave a Comment