“ಸಚಿವರ ಸಾಮರ್ಥ್ಯ ಅಳೆಯುವುದು ಆಡಳಿತಾನುಭವದಿಂದಲೇ ಹೊರತು ಅವರ ಊರಿನಿಂದಲ್ಲ”: ಶಾಸಕ ತಮ್ಮಯ್ಯಗೆ ಆರ್.ಕೆ. ರಮೇಶ್ ತಿರುಗೇಟು
- by Suddi Team
- November 24, 2026
- 10 Views
ಬೆಂಗಳೂರು / ಚಿಕ್ಕಮಗಳೂರು: ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಬೆಂಗಳೂರಿನವರಾಗಿದ್ದು, ಅವರಿಗೆ ಅರಣ್ಯದ ಬಗ್ಗೆ ಏನು ಗೊತ್ತು ಎಂದು ಪ್ರಶ್ನಿಸಿರುವ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಅವರ ಹೇಳಿಕೆಗೆ ಆರ್.ಕೆ. ರಮೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಸಚಿವರ ಕಾರ್ಯಕ್ಷಮತೆಯನ್ನು ನಿರ್ಧರಿಸುವುದು ಅವರ ಆಡಳಿತ ವೈಖರಿಯೇ ಹೊರತು ಅವರು ಹುಟ್ಟಿ ಬೆಳೆದ ಊರಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಕುರಿತು ಫೇಸ್ಬುಕ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಆರ್.ಕೆ. ರಮೇಶ್, ರಾಮಲಿಂಗಾರೆಡ್ಡಿ ಅವರು ಬೆಂಗಳೂರಿನ ಆನೇಕಲ್ ತಾಲೂಕಿನವರಾಗಿದ್ದು, ಪ್ರಸಿದ್ಧ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇರುವುದು ಅದೇ ತಾಲೂಕಿನಲ್ಲಿ ಎಂಬುದನ್ನು ಶಾಸಕರು ಮರೆತಂತಿದೆ ಎಂದು ನೆನಪಿಸಿದ್ದಾರೆ.
ತರ್ಕಕ್ಕೆ ಪ್ರಶ್ನೆಗಳ ಸುರಿಮಳೆ:
ಶಾಸಕ ತಮ್ಮಯ್ಯ ಅವರ ತರ್ಕವನ್ನು ಪ್ರಶ್ನಿಸಿರುವ ರಮೇಶ್, “ನಿಮ್ಮ ವಾದದ ಪ್ರಕಾರ ಕಾನೂನು ಸಚಿವರು ವಕೀಲರೇ ಆಗಿರಬೇಕೇ? ಆರೋಗ್ಯ ಸಚಿವರು ವೈದ್ಯರೇ ಆಗಿರಬೇಕೇ? ಲೋಕೋಪಯೋಗಿ ಸಚಿವರು ಸಿವಿಲ್ ಎಂಜಿನಿಯರ್ಗಳೇ ಆಗಿರಬೇಕೇ? ಗಣಿ ಸಚಿವರು ಭೂವಿಜ್ಞಾನಿಗಳೇ, ಜಲಸಂಪನ್ಮೂಲ ಸಚಿವರು ಜಲವಿಜ್ಞಾನಿಗಳೇ, ಕೃಷಿ ಸಚಿವರು ರೈತರೇ, ಇಂಧನ ಸಚಿವರು ಎಲೆಕ್ಟ್ರಿಕಲ್ ಎಂಜಿನಿಯರ್, ಹಣಕಾಸು ಸಚಿವರು ಅರ್ಥಶಾಸ್ತ್ರಜ್ಞ, ಗೃಹ ಸಚಿವರು ಪೊಲೀಸ್ ಅಧಿಕಾರಿ, ಕಾರ್ಮಿಕ ಸಚಿವರು ಕಾರ್ಮಿಕರೇ ಹಾಗೂ ಪಶುಸಂಗೋಪನೆ ಸಚಿವರು ಪಶುವೈದ್ಯರೇ ಆಗಿರಬೇಕೇ?” ಎಂದು ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಸಚಿವರ ಸಾಮರ್ಥ್ಯವನ್ನು ಅವರ ಆಡಳಿತಾನುಭವ, ನಿರ್ಧಾರ ತೆಗೆದುಕೊಳ್ಳುವ ಚಾಕಚಕ್ಯತೆ ಮತ್ತು ಜನಪರ ಕಾಳಜಿಯ ಆಧಾರದ ಮೇಲೆ ಅಳೆಯಬೇಕೇ ಹೊರತು ಅವರ ಊರಿನ ಆಧಾರದ ಮೇಲಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷಕ್ಕೆ ಪರ್ಯಾಯ ಪರಿಹಾರವೇನು?
ಕಾಡಾನೆಗಳ ಸ್ಥಳಾಂತರ ವಿಚಾರವನ್ನೂ ಪ್ರಸ್ತಾಪಿಸಿರುವ ಅವರು, “ಕಾಡಾನೆಗಳು ಬೇಲೂರಿನ ಕಾಫಿ ತೋಟಗಳು, ಕೃಷಿ ಜಮೀನು ಹಾಗೂ ಜನವಸತಿ ಪ್ರದೇಶಗಳಲ್ಲಿ ಇರಬೇಕೇ ಅಥವಾ ಸುಮಾರು 565 ಚದರ ಕಿಲೋಮೀಟರ್ (1.40 ಲಕ್ಷ ಎಕರೆ ಕೋರ್ ಫಾರೆಸ್ಟ್) ವಿಸ್ತೀರ್ಣದ ಭದ್ರಾದಂತಹ ವಿಶಾಲ ಅಭಯಾರಣ್ಯದಲ್ಲಿ ಇರಬೇಕೇ?” ಎಂದು ಕೇಳಿದ್ದಾರೆ. ಆನೆಗಳ ಸ್ಥಳಾಂತರಕ್ಕೆ ಆಕ್ಷೇಪ ವ್ಯಕ್ತಪಡಿಸುವ ಶಾಸಕರು, ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯಲು ತಮ್ಮ ಬಳಿಯಿರುವ ಪರ್ಯಾಯ ಪರಿಹಾರವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರು ಶಾಸಕರಾಗಿ ಜನರ ಜೀವ ರಕ್ಷಣೆ ಹಾಗೂ ವನ್ಯಜೀವಿಗಳ ಸಂರಕ್ಷಣೆ ಎರಡನ್ನೂ ಖಾತ್ರಿಪಡಿಸಲು ನಿಮ್ಮ ಕೊಡುಗೆ ಏನು ಮತ್ತು ಈ ನಿಟ್ಟಿನಲ್ಲಿ ನೀವು ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿರುವ ರಮೇಶ್, ಇಂತಹ ಗಂಭೀರ ವಿಚಾರಗಳಲ್ಲಿ ವೈಯಕ್ತಿಕ ಟೀಕೆಗಳ ಬದಲು ವೈಜ್ಞಾನಿಕ ಚರ್ಚೆ, ರಚನಾತ್ಮಕ ಸಲಹೆ ಹಾಗೂ ಶಾಶ್ವತ ಪರಿಹಾರಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದ್ದಾರೆ.
Related Articles
Thank you for your comment. It is awaiting moderation.


Comments (0)