ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಪೆಟ್ರೋಲ್, ಡೀಸೆಲ್ ತೆರಿಗೆಯಲ್ಲಿ ಪಾಲು ನೀಡಿ; ಸಂತೋಷ್ ಲಾಡ್ ಮನವಿ
- by Suddi Team
- July 1, 2025
- 180 Views

ಧಾರವಾಡ: ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ವಿಧಿಸುತ್ತಿರುವ ಕರದಲ್ಲಿ ಪಾಲು ಕೊಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದೇವೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ಹುಬ್ಬಳ್ಳಿಯ ಬೆಂಗೇರಿಯ ಸಂತೆ ಮೈದಾನದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಧಾರವಾಡ ಜಿಲ್ಲೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಸ್ಮಾರ್ಟ್ ಕಾರ್ಡ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಸಂಘಟಿತ ವಲಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಸಾರಿಗೆ ಕಾರ್ಮಿಕರ ಕಲ್ಯಾಣಕ್ಕಾಗಿ ಸಾರಿಗೆ ಮಂಡಳಿ ರಚನೆ ಮಾಡಿದ್ದೇವೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಸಹಕಾರ ಹಾಗೂ ಬೆಂಬಲದಿಂದ ಈ ಮಂಡಳಿ ರಚನೆ ಸಾಧ್ಯವಾಯಿತು. ಮುಖ್ಯಮಂತ್ರಿಗಳು ಎಲ್ಲ ರೀತಿಯಿಂದ ಸಹಕಾರ ನೀಡಿದರು. ಹೊಸ ವಾಹನಗಳನ್ನು ಖರೀದಿ ಮಾಡಿದಾಗ ಸಂಗ್ರಹಿಸುವು ಕರದಿಂದ ಈ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರಿಗೆ ನಿಧಿ ಸ್ಥಾಪಿಸಿ ಜೀವ ವಿಮೆ ಸೇರಿದಂತೆ ಸೌಲಭ್ಯಗಳನ್ನು ಒದಗಿಸಲಾಗುವುದು. ಇಂತಹ ಮಂಡಳಿಯನ್ನು ರಚನೆ ಮಾಡಿರುವುದು ಇಡೀ ದೇಶದಲ್ಲೇ ನಾವು ಎಂಬುದು ಹೆಮ್ಮೆಯ ಸಂಗತಿ ಎಂದು ವಿವರಿಸಿದರು.
ಅಸಂಘಟಿತ ವಲಯದಲ್ಲಿ ಕೋಟ್ಯಂತರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಲು ಹಣಕಾಸಿನ ಅಗತ್ಯವಿದೆ. ಅದಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ವಿಧಿಸುತ್ತಿರುವ ಕರದಲ್ಲಿ ಪಾಲು ಕೊಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದೇವೆ. ಅದಕ್ಕೆ ಒಪ್ಪಿಗೆ ಸಿಕ್ಕಲ್ಲಿ 2 ಸಾವಿರ ಕೋಟಿ ಹಣ ಮಂಡಳಿಗೆ ಬರಲಿದೆ. ಇದರೊಂದಿಗೆ ಜಿಎಸ್‌ಟಿಯಲ್ಲಿ ಒಂದಂಶ ಕೊಡಲು ಕೇಳಿದ್ದೇವೆ. ಕಾರ್ಪೋರೇಟ್ ತೆರಿಗೆಯಲ್ಲಿ ಪಾಲು ಕೇಳಿದ್ದೇವೆ. ಇದು ಸಿಕ್ಕರೆ ಸಾವಿರಾರು ಕೋಟಿ ಹಣ ಸಿಗಲಿದೆ. ಆ ಹಣದಿಂದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಸೌಲಭ್ಯ ಕೊಡಲು ಅನುಕೂಲವಾಗಲಿದೆ ಎಂದರು.
ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣಕ್ಕಾಗಿ ಕಾಯ್ದೆ ಜಾರಿ ಮಾಡಿದ್ದೇವೆ. ಈ ಕ್ಷೇತ್ರದಲ್ಲೂ ಅಸಂಖ್ಯಾತ ಕಾರ್ಮಿಕರು ಕೆಲಸ ಮಾಡುತ್ತಾ ಇದ್ದಾರೆ. ಸಿನಿಮಾ ಟಿಕೆಟ್ ಮೇಲೆ ಸಣ್ಣ ಮೊತ್ತದ ಕರ ಹಾಕಿ ಅದಕ್ಕೆ ಸರ್ಕಾರದ ಹಣವೂ ನೀಡಿ ನಿಧಿ ಸ್ಥಾಪಿಸಿ ಈ ಕ್ಷೇತ್ರದ ಜನರಿಗಾಗಿ ಸೌಲಭ್ಯ ಒದಗಿಸಲಾಗುವುದು ಎಂದರು.
ಇನ್ನು ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಕ್ರಾಂತಿಕಾರಕ ಕ್ರಮಗಳನ್ನು ಜಾರಿ ಮಾಡಿದೆ. ಇದು ರಾಹುಲ್ ಗಾಂಧಿ ಅವರ ಕನಸು. ಭಾರತ್ ಜೋಡೊ ಯಾತ್ರೆ ವೇಳೆ ಗಿಗ್ ಕಾರ್ಮಿಕರ ಸೌಲಭ್ಯಕ್ಕಾಗಿ ಮನವಿ ಮಾಡಿದ್ದರು. ರಾಜಸ್ಥಾನಕ್ಕಿಂತ ಒಳ್ಳೆಯ ಮಸೂದೆ ಜಾರಿ ಮಾಡಿದ್ದೇವೆ. ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ ಸಂಬಂಧ ಸಾಕಷ್ಟು ಸಭೆ ಮಾಡಿದ್ದೇನೆ. ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇನೆ. ಗಿಗ್ ಕಾರ್ಮಿಕರಾಗಿ ಕೆಲಸ ಮಾಡುವವರು ಮತ್ತು ಅವರ ಅವಲಂಬಿತರಿಗೆ ಜೀವವಿಮೆ ಸೇರಿದಂತೆ ಹಲವಾರು ಸೌಲಭ್ಯಗಳು ಸಿಗಲಿವೆ ಎಂದರು.
Related Articles
Thank you for your comment. It is awaiting moderation.
Comments (0)