ಪಡಿತರ ಸಾಗಾಣಿಕಾ‌ ಲಾರಿ ಮಾಲೀಕರಿಗೆ  250 ಕೋಟಿ ಬಾಕಿ ; ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: ‘ಅನ್ನರಾಮಯ್ಯ’ ಎಂದು ಹೊಗಳಿಸಿಕೊಳ್ಳುವ ಸಿದ್ದರಾಮಯ್ಯನವರೇ, ಅನ್ನಭಾಗ್ಯಕ್ಕೆ ಏಕೆ ಭಂಗ ತಂದಿದ್ದೀರಿ? ಪಡಿತರ ಸಾಗಾಣಿಕಾ ಲಾರಿಗಳ ಲಾರಿ ಮಾಲೀಕರಿಗೆ 6 ತಿಂಗಳಿಂದ 250 ಕೋಟಿ ರೂ. ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದು ಯಾವ ಕಾರಣಕ್ಕೆ ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಕುರಿತು ಸಾಲಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸರ್ಕಾರದ ಖಜಾನೆ ಬರಿದಾಗಿಲ್ಲ ಎಂಬ ಸ್ಪಷ್ಟನೆಯ ನಿಮ್ಮ ಹೇಳಿಕೆಗಳು ಸುಳ್ಳು ಹಾಗೂ ಭಂಡತನದ ಪರಮಾವಧಿ ಎನ್ನುವುದನ್ನು ಅನ್ನಭಾಗ್ಯ ಯೋಜನೆಯ ಸಾರಥಿಗಳಾಗಿ ಕೆಲಸ ಮಾಡುತ್ತಿದ್ದ ಲಾರಿ ಮಾಲೀಕರಿಗೆ ತಿಂಗಳುಗಟ್ಟಲೆ ಬಾಡಿಗೆ ಪಾವತಿಸದೇ (4,500 ಲಾರಿಗಳು) ಅವರ ಬದುಕಿನ ಭಾಗ್ಯಕ್ಕೆ ಬರೆ ಎಳೆದಿದ್ದೀರಿ. ಇದರ ಪರಿಣಾಮ ಇಂದಿನಿಂದ ಅನ್ನ ಭಾಗ್ಯವನ್ನು ಅವಲಂಬಿಸಿದ್ದ ಲಕ್ಷಾಂತರ ಬಡ ಕುಟುಂಬಗಳಿಗೆ ‘ಖಾಲಿ ತಟ್ಟೆಯಲ್ಲಿ ಕೈ ತೊಳೆಯುವ ಭಾಗ್ಯ ಕರುಣಿಸುತ್ತಿದ್ದೀರಿ’ ಎಂದು ಟೀಕಿಸಿದ್ದಾರೆ.

ನಿಮ್ಮ ಸರ್ಕಾರ ಅನ್ನ ಭಾಗ್ಯದ ಆಹಾರ ಧಾನ್ಯಗಳನ್ನು ಸಾಗಿಸುವ ಲಾರಿಗಳಿಗೆ ಬಾಡಿಗೆ ಕೊಡುವ ಸ್ಥಿತಿಯಲ್ಲೂ ಇಲ್ಲದ ಕೆಟ್ಟ ಪರಿಸ್ಥಿತಿಗೆ ತಲುಪಿದೆ ಎಂದರೆ ಸರ್ಕಾರದ ಆರ್ಥಿಕ ಸ್ಥಿತಿ ದಿವಾಳಿಯತ್ತ ಸಾಗಿರುವುದರ ಸೂಚನೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅನ್ನಭಾಗ್ಯದ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರವೊಂದೇ ಸಾಗಣೆ ವೆಚ್ಚ ಭರಿಸಬೇಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ನೀಡುತ್ತಿರುವ ಉಚಿತ 5 ಕೆ.ಜಿ ಅಕ್ಕಿಯ ಜತೆಗೆ ಆಹಾರ ಧಾನ್ಯ ಸಾಗಣೆಯ ವೆಚ್ಚವನ್ನೂ ಭರಿಸುತ್ತಿದೆ. ಆದರೂ, ಲಾರಿ ಮಾಲೀಕರಿಗೆ ಬಾಡಿಗೆ ಕೊಡದೆ ಏಕಿಷ್ಟು ಸತಾಯಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಸರ್ಕಾರದ ಭ್ರಷ್ಟ ವ್ಯವಹಾರಗಳಿಗೆ ಆದಾಯ ಮೂಲಗಳನ್ನು ಕಂಡುಹಿಡಿದುಕೊಳ್ಳಲು ಬೆಲೆ ಏರಿಕೆ, ಅವೈಜ್ಞಾನಿಕ ತೆರಿಗೆಗಳನ್ನು ಜನರ ಮೇಲೆ ಹೇರುತ್ತಲೇ ಇದ್ದೀರಿ. ನಿಮ್ಮ ಕಮಿಷನ್ ದಂಧೆಗೆ ಕನಿಷ್ಠ ಅಲ್ಪ ವಿರಾಮನ್ನಾದರೂ ನೀಡಿ ಜನರನ್ನು ಹಸಿವೆಂಬ ಬಾಧೆ ಬಾದಿಸದಂತೆ ಈ ಕೂಡಲೇ ಲಾರಿ ಮಾಲೀಕರ ಬಾಕಿ ಹಣವನ್ನು ಪಾವತಿಸಿ. ಹಸಿದವರ ಆಕ್ರೋಶ ಹಾಗೂ ಲಾರಿಯನ್ನು ನಂಬಿ ಜೀವನ ಮಾಡುತ್ತಿರುವ ಲಾರಿ ಮಾಲೀಕರು ಹಾಗೂ ಚಾಲಕರ ಕುಟುಂಬಗಳ ಶಾಪಕ್ಕೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಿ ಎಂದು ಆಗ್ರಹಿಸಿದ್ದಾರೆ.

ಇದಕ್ಕೆ ಸಾತ್ ನೀಡಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ಆಹಾರ ಧಾನ್ಯಗಳನ್ನು ಸಾಗಿಸುವ ಲಾರಿ ಮಾಲೀಕರಿಗೆ ಕಳೆದ 6 ತಿಂಗಳಿಂದ ಬಿಲ್ ಪಾವತಿಸದ ಕಾರಣಕ್ಕಾಗಿ ಲಾರಿ ಮಾಲೀಕರು ಇಂದಿನಿಂದ ಮುಷ್ಕರ ಆರಂಭಿಸಿದ್ದು ರಾಜ್ಯದಲ್ಲಿ ಆಹಾರ ಧಾನ್ಯ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಸಿಎಂ ಸಿದ್ದರಾಮಯ್ಯನವರೇ, ಲಾರಿ ಮಾಲೀಕರಿಗೆ 6 ತಿಂಗಳಿಂದ 250 ಕೋಟಿ ರೂಪಾಯಿ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದೀರಲ್ಲ, ಪಾಪ ಲಾರಿ ಮಾಲೀಕರು ಚಾಲಕರಿಗೆ ಸಂಬಳ ಹೇಗೆ ಕೊಡಬೇಕು? ಲಾರಿಗಳಿಗೆ ಡೀಸೆಲ್ ಹೇಗೆ ಹಾಕಿಸಬೇಕು? ಲಾರಿ ಮುಷ್ಕರದಿಂದ ಆಹಾರ ಧಾನ್ಯ ಪೂರೈಕೆಯಲ್ಲಿ ವ್ಯತ್ಯಾಸವಾಗಿ ಬಡವರಿಗೆ ಪಡಿತರ ಪೂರೈಕೆ ವಿಳಂಬವಾದರೆ ಅದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.

Related Articles

Comments (0)

Leave a Comment