ವಾಸ್ತವ ಸತ್ಯ ತಿಳಿಯದೆ ಜಾತಿಗಣತಿಗೆ ವಿರೋಧ; ತಂಗಡಗಿ

ಬೆಂಗಳೂರು: ಹಡಪದ ಸಮುದಾಯದಲ್ಲಿ 21 ಉಪಜಾತಿಗಳನ್ನು ಸಮೀಕ್ಷೆ ವೇಳೆ ಬರೆಸಲಾಗಿದೆ. ಇದನ್ನು ಮುಖ್ಯಮಂತ್ರಿಗಳಾಗಲಿ, ಉಪಮುಖ್ಯಮಂತ್ರಿಗಳಾಗಲಿ ಅಥವಾ ನಾನಾಗಲಿ ಹೇಳಿ ಬರೆಸಿದ್ದಲ್ಲ. ಆದರೂ, ವಾಸ್ತವ ಸತ್ಯ ತಿಳಿಯದೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವರದಿಗೆ ವಿರೋಧ ವ್ಯಕ್ತಪಡಿಸಲಾಯಿತು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.

ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ‌ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ‌ ಅವರು, ಕಾಂತರಾಜು ಅವರ ವರದಿ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಹಡಪದ ಸಮುದಾಯದಲ್ಲಿ 21 ಉಪಜಾತಿಗಳನ್ನು ಸಮೀಕ್ಷೆ ವೇಳೆ ಬರೆಸಲಾಗಿದೆ. ಇದನ್ನು ನಾವ್ಯಾರೂ ಹೇಳಿ ಬರೆಸಿದ್ದಲ್ಲ. ಸಮೀಕ್ಷೆ ವೇಳೆ ನೀವೇ ಉಪಜಾತಿಗಳನ್ನು ಬರೆಸಿದ್ದೀರಿ. ನಾವು ಯಾವುದೇ ಸಮುದಾಯ 10 ಲಕ್ಷ ಇದ್ದರೂ ಸ್ವೀಕಾರ ಮಾಡುತ್ತೇವೆ, 20 ಲಕ್ಷ ಇದ್ದರೂ ಸ್ವೀಕಾರ ಮಾಡುತ್ತೇವೆ. ನಾವು ಎಂದಿಗೂ ಸಮುದಾಯದ ಸಂಖ್ಯೆಯ ಬಗ್ಗೆ ಚಿಂತಿಸಿಲ್ಲ. ಕಷ್ಟದಲ್ಲಿರುವ ಸಮುದಾಯವನ್ನು ಮೇಲಕ್ಕೆತ್ತುವ ಸಲುವಾಗಿ ಸಮೀಕ್ಷೆಯನ್ನು ಮಾಡಿಸಲಾಗಿತ್ತು ಎಂದು ಸ್ಪಷ್ಟಪಡಿಸಿದರು.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಶರಣರಾಗಿದ್ದಾರೆ. ಅವರ ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ‘ದಾರಿದೀಪಗಳಾಗಿವೆ’ ಎಂದು ಹೇಳಿದರು.

ಕರ್ನಾಟಕದ ಇತಿಹಾಸದಲ್ಲಿ ಮರೆಯಲಾರದ ಮತ್ತು ಮರೆಯಬಾರದ ಪ್ರಮುಖ ಚಳುವಳಿಗಳಲ್ಲಿ ಒಂದು ವಚನಸಾಹಿತ್ಯ ಚಳುವಳಿ ಅಥವಾ ಕಲ್ಯಾಣದ ಕ್ರಾಂತಿ. ಸಮಾಜದಲ್ಲಿನ ತಾರತಮ್ಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿ ಹರಡಿದ್ದ ಅಜ್ಞಾನ, ಮೂಢನಂಬಿಕೆಗಳನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಮಹತ್ತರವಾಗಿ ಶ್ರಮಿಸಿದರು ಎಂದರು.

ಬಸವಣ್ಣನವರ ಕ್ರಾಂತಿಕಾರಿ ಆಲೋಚನೆಗಳನ್ನು ಅತ್ಯಂತ ಸ್ಪಷ್ಟವಾಗಿ ಅರ್ಥೈಸಿಕೊಂಡು, ಅಂತೆಯೇ ನಡೆಯುತ್ತಿದ್ದ ಅಪ್ಪಣ್ಣನವರು ಬಸವಣ್ಣ ಅವರ ಆಪ್ತ ಕಾರ್ಯದರ್ಶಿ ಆಗಿದ್ದರು ಎಂದು ನೆನೆದರು.

ಇಂದು ಸಣ್ಣ ಸಮುದಾಯದಲ್ಲಿ ಹುಟ್ಟಿದ್ದೇವೆ. ಆದರೆ, ಎಲ್ಲವನ್ನೂ ಮೆಟ್ಟಿ ನಿಲ್ಲುವ ಹಾಗೆ ಬೆಳವಣಿಗೆ ಕಾಣಬೇಕು. ಮೂರ್ತಿ ಕೆತ್ತನೆಯನ್ನು ನಾವು ಮಾಡುತ್ತೇವೆ. ಆದರೆ, ಮೂರ್ತಿಯ ಮೇಲೆ ಪ್ರೋಕ್ಷಣೆ ಮಾಡಿದ ಬಳಿಕ ನಮ್ಮನ್ನೇ ಬಿಟ್ಟುಬಿಡುತ್ತಾರೆ. ಇಂತಹದನ್ನೆಲ್ಲ ತಿದ್ದಲು ಸಮಾಜದಲ್ಲಿ ಹುಟ್ಟಿ ಬಂದವರೇ ಬಸವಣ್ಣ ಹಾಗೂ ಹಡಪದ ಅಪ್ಪಣ್ಣನಂತಹ ಮಹನೀಯರು ಎಂದು ತಿಳಿಸಿದರು.

ಶ್ರೀ ಶಿವಶರಣರ ಹಡಪದ ಅಪ್ಪಣ್ಣ ಸುಕ್ಷೇತ್ರ ತಂಗಡಗಿಯ ಅಭಿವೃದ್ಧಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅನುದಾನ ಒದಗಿಸಲಾಗುವುದು ಎಂದು ಇದೆ ವೇಳೆ ಸಚಿವರು ಭರವಸೆ ನೀಡಿದರು.

ವೇದಿಕೆಯಲ್ಲಿದ್ದ ಸ್ವಾಮೀಜಿಯವರು ತಮ್ಮ ಸಮುದಾಯವನ್ನು 2ಎ ಪಟ್ಟಿಗೆ ಸೇರಿಸುವಂತೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಸಚಿವರು ಯಾವುದೇ ಸಮುದಾಯವನ್ನು 2ಎ ಪಟ್ಟಿಗೆ ಸೇರಿಸಲು ಕೆಲವೊಂದು ನಿಯಮಗಳಿರುತ್ತವ. ಅದರಂತೆ ನಡೆಯಬೇಕಾಗುತ್ತದೆ. ಸುಮ್ಮನೆ ರಾಜಕೀಯವಾಗಿ ಮಾತನಾಡಿದರೆ ಭರವಸೆಯಾಗುತ್ತದೆ ಎಂದು ಸೂಕ್ಷ್ಮವಾಗಿ ಹೇಳಿದರು.

Related Articles

Comments (0)

Leave a Comment