ರಂಗಾಯಣಗಳ ಚಟುವಟಿಕೆಗೆ ಪ್ರತಿ ವರ್ಷ ಒಂದು ಕೋಟಿ ಅನುದಾನ: ಸಚಿವ ಶಿವರಾಜ್ ತಂಗಡಗಿ
- by Suddi Team
- September 23, 2025
- 7 Views

ಮೈಸೂರು: ರಂಗಾಯಣದ ಈ ವರ್ಷದ ಬಹುರೂಪಿ ಬೆಳ್ಳಿ ರಂಗೋತ್ಸವಕ್ಕೆ ಇಲಾಖೆ ವತಿಯಿಂದ ಎರಡು ಕೋಟಿ ವಿಶೇಷ ಅನುದಾನ ಮಂಜೂರು ಮಾಡಲಾಗಿದ್ದು, ರಾಜ್ಯದ ಎಲ್ಲಾ ರಂಗಾಯಣಗಳ ಚಟುವಟಿಕೆಗಳಿಗೆ ಪ್ರತಿ ವರ್ಷ ಒಂದು ಕೋಟಿ ಅನುದಾನ ಒದಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್. ತಂಗಡಗಿ ಭರವಸೆ ನೀಡಿದರು.
ಮೈಸೂರು ರಂಗಾಯಣ ಆವರಣದಲ್ಲಿ ಸೋಮವಾರ ನಡೆದ ನವರಾತ್ರಿ ರಂಗೋತ್ಸವ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,ರಾಜ್ಯದ ಎಲ್ಲಾ ರಂಗಾಯಣಗಳ ಚಟುವಟಿಕೆಗಳಿಗೆ ಪ್ರತಿ ವರ್ಷ ಒಂದು ಕೋಟಿ ಅನುದಾನ ಒದಗಿಸುವ ಬಗ್ಗೆ ಆರ್ಥಿಕ ಇಲಾಖೆ ಅವರೊಂದಿಗೂ ಕೂಡ ಚರ್ಚೆ ನಡೆಸಲಾಗಿದೆ. ಸಧ್ಯದಲ್ಲೇ ಅನುದಾನ ಬಿಡುಗಡೆಗೆ ಒಪ್ಪಿಗೆ ಸಿಗಲಿದೆ ಇದರ ಜತೆ ರಂಗಾಯಣದ ಈ ವರ್ಷದ ಬಹುರೂಪಿ ಬೆಳ್ಳಿ ರಂಗೋತ್ಸವಕ್ಕೆ ಇಲಾಖೆ ವತಿಯಿಂದ ಎರಡು ಕೋಟಿ ವಿಶೇಷ ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಮೈಸೂರು ರಂಗಾಯಣವು ಕಳೆದ 36 ವರ್ಷಗಳಲ್ಲಿ ಭಾರತೀಯ ರಂಗಭೂಮಿಯಲ್ಲಿ ದಾಖಲೆ ಎನಿಸುವ ಹಲವು ಮೈಲಿಗಲ್ಲು ಸ್ಥಾಪಿಸಿದೆ. ಇಲ್ಲಿನ ನಾಟಕಗಳು ನಮ್ಮ ದೇಶದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿ ಪ್ರದರ್ಶನಗೊಂಡು ಕನ್ನಡ ರಂಗಭೂಮಿಯ ಎತ್ತರವನ್ನು ತೆಗೆದುಕೊಂಡು ಹೋಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದರು.
ಸಾಹಿತು ದೇವನೂರು ಮಹಾದೇವ ಅವರ ಕುಸುಮ ಬಾಲೆ, ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಶ್ರೀ ರಾಮಾಯಣ ದರ್ಶನಂ ಕಾವ್ಯ ನಾಟಕ ಮುಂತಾದವು ಭಾರತೀಯ ರಂಗಭೂಮಿಯಲ್ಲಿ ಇತಿಹಾಸವನ್ನೇ ಸೃಷ್ಟಿ ಮಾಡಿದೆ ಎಂದು ಸಚಿವರು ಮೆಲುಕು ಹಾಕಿದರು.
ಇದೇ ವೇಳೆ ರಂಗ ಭೂಮಿ ಕಲಾವಿದ ಧರ್ಮೇಂದ್ರ ಅರಸ್ ಅವರಿಗೆ ನವರಾತ್ರಿ ರಂಗಗೌರವ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ರಂಗಾಯಣ ನಿರ್ದೇಶಕರಾದ ಸತೀಶ್ ತಿಪಟೂರು, ರಂಗ ಸಮಾಜದ ಸದಸ್ಯರಾದ ಸುರೇಶ್ ಬಾಬು, ಶಶಿಧರ್ ಭಾರಿ ಘಾಟ್, ಮಹಾಂತೇಶ್, ಇಲಾಖೆ ಕಾರ್ಯದರ್ಶಿ ಡಾ.ಎಂ.ವಿ.ವೆಂಕಟೇಶ್, ನಿರ್ದೇಶಕರಾದ ಕೆ.ಎಂ. ಗಾಯತ್ರಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.
Comments (0)