ಮೈಸೂರು ದಸರಾ; ಕವಿತೆಯ ಮೂಲಕ ಸಂದೇಶ ತಿಳಿಸಿದ ಬಾನು ಮುಷ್ತಾಕ್

ಮೈಸೂರು: ಜನಸಾಹಿತ್ಯ ಸಮ್ಮೇಳನದಲ್ಲಿ ತಾವು ನೀಡಿದ್ದ ಹಿಂದೂಗಳು ಶುಭಕಾರ್ಯಗಳಿಗೆ ಬಳಸುವ ಅರಿಶಿನ, ಕುಂಕುಮದ ಬಣ್ಣಗಳನ್ನೇ ಬಳಸಿ ಬಾವುಟವನ್ನಾಗಿಸಿದ್ದು ವಿಪರ್ಯಾಸ ಎನ್ನುವ ಹೇಳಿಕೆಯ ವೀಡಿಯೋ ವೈರಲ್ ಆಗಿದ್ದರಿಂದ ದಸರಾ ಉದ್ಘಾಟನೆ ವೇಳೆ ಅಂತಹ ಯಾವುದೇ ಗೊಂದಲಕಾರಿ ಸನ್ನಿವೇಶಕ್ಕೆ ಸಾಹಿತಿ ಬಾನು ಮುಷ್ತಾಕ್ ಅವಕಾಶ ನೀಡಲಿಲ್ಲ ಅಲ್ಲದೆ,ಚಾಮುಂಡಿ ತಾಯಿಯನ್ನು ಹೊಗಳುವ ಜತ ಮುಸ್ಲಿಂ ಹೆಣ್ಣುಮಗಳು ಬಾಗಿನವನ್ನು ಪಡೆದಾಗಿನ ತನ್ನ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುವ ಕವಿತೆಯನ್ನು ಓದಿದರು.

ದಸರಾ ಉದ್ಘಾಟನಾ ಭಾಷಣ ಮಾಡಿದ ಸಾಹಿತಿ ಬಾನು ಮುಷ್ತಾಕ್, ಸಂಸ್ಕೃತಿ ನಮ್ಮ ಬೇರು. ಸೌಹಾರ್ದ ನಮ್ಮ ಶಕ್ತಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಭಾರತದ ನೆಲೆಯಲ್ಲಿ ನಮ್ಮ ಯುವಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ , ಪ್ರೀತಿಯ ಹೊಸ ಸುಧಾರಿತ ಸಮಾಜವನ್ನು ಕಟ್ಟೋಣ ಎನ್ನುವ ಕರೆಯೊಂದಿಗೆ ತಾನೊಬ್ಬ ಕವಿಯತ್ರಿಯಾಗಿದ್ದು, ಕವಿತೆಯ ಮೂಲಕ ನನ್ನ ಸಂದೇಶವನ್ನು ತಿಳಿಸಲು ಬಯಸಿದ್ದು, ಮುಸ್ಲಿಂ ಹೆಣ್ಣುಮಗಳು ಬಾಗಿನವನ್ನು ಪಡೆದಾಗಿನ ತನ್ನ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುವ ಕವಿತೆಯನ್ನು ಓದಿದರು.

ಬಾಗಿನ:   

 

  ಮೊರ ಅಂದರೆ ಗೊತ್ತಲ್ಲಾ. . ..

ಕೇರುತ್ತೆ ಅದು ,ಅಲ್ಲಿ

  ಇಲ್ಲಿ ಮತ್ತು ಎಲ್ಲೆಲ್ಲೂ

ಆ ದಿನ. . . .

ಸೇವಂತಿಗೆ  ಹೂವು ಚಳ್ಳನೆ ನಗು

ಚಿಮುಕಿಸುತ್ತಿತು.ದಿನ ತುಂಬಿದ್ದ

ಮೋಡ  ಎರಡೂ ಕೈಯಲಿ ಸೊಂಟ

ಹಿಡಿದು ಬೆವರಿನಿಂದ ತೊಯ್ದು

ಉಸ್ಸೆಂದಾಗ

 

ಆಕಾಶ ಭೂಮಿ ಮತ್ತು ಸಮಸ್ತವೂ ಗಲಗಲ

ಅಂತ ಚಿಮ್ಮುತ್ತಿದ್ದವ್ತು.ಅಸೂಯೆಯಿಂದ ಸೂರ್ಯ

ಕೆಂಪಾಗಿದ್ದ , ನನಗಿಲ್ಲದ ವಾತ್ಸಲ್ಯದಲ್ಲಿ ಇವಳು

ಹೇಗೆ ಮಿನುಗುತ್ತಾಳೆ  ಅಂತ

 

ಅದೇನೂ ಎಂದಿನ ದಿನವಾಗಿರಲಿಲ್ಲ

ಸಂಭ್ರಮಕೇ ದೊಡ್ಡ ಮುಳ್ಳು ಚಿಕ್ಕ ಮುಳ್ಳು

ಅಂಟಿ ಜೂಟಾಟವಾಡುತ್ತಿದ್ದವಲ್ಲಾ

 

ಅಚ್ಚ ಕೃಷಿಕ ಬಸವರಾಜಣ್ಣನ ಎಡ

ಹೆಗಲಿನ ವಲ್ಲಿಯೊಡನೆ ಮಣ್ಣಿನ

ಗುಣ ಹೀರಿದ್ದ ನಾನು ಬಾನು

ವಿನಿಂದ ಜಯಾ ಅಗಿದ್ದು ಹೀಗೆ

ಯಾವುದೇ ಗೋಡೆಗಳಿರಲಿಲ್ಲ ಬಿಡಿ

ಪ್ರೀತಿಯ ಒಳ ಒರತೆಗಳು

ಜಿನುಗುವುದು ಹೀಗೆ ನೋಡಿ

 

ಸಾಬರ ಮಗಳು ಸಾಬರ ಸೊಸೆಗೆ

ಜೀವದುಂಬಿದ ಹಸಿ ಮಣ್ಣಿನ ಬಾಗಿನ

“ಜಯಾ. . . .ನಡಿಯವ್ವ ಹಬ್ಬಕೆ ‘

ಅರಿಶಿನದ ಎಲೆ  ಕಡುಬು

 

ಗಂಡನ ಮನೆಯ ಕಸೂತಿ ನೆರಿಗೆಗಳ

ಸದಾ ಚಿಮ್ಮುತ್ತಿದ್ದರೂಎದೆಯಾಳದಲಿ

ಪಿಸುಗುಟ್ಟಿದ್ದು ಆ ಎಲೆ ಹಸಿರು

ವಾತ್ಸಲ್ಯವ ನೆಯ್ದ ಸಾದಾ ಸೀರೆ

 

ಮಡಿಲಲಿ ತುಂಬಿಸಿ ಕವುಚಿದ ಮೊರವ

ಮರಳುವ ದಾರಿಯಲಿ ನಿಂತು

ಅರಳಿಮರವ ಕೇಳಿದ್ದೆ

ಹೇಗೆ ಕೊಂಡೊಯ್ಯಲಿ ಇದನು

ನನ್ನತ್ತೆ ಮನೆಗೆ ಅರಿಶಿನ ಕುಂಕುಮದೊಡನೆ

 

ಹೇಗೆ ಬಿಡಿಸಲಿ ಬಾಂಧವ್ಯದ ಎಳೆಗಳ

ರಂಗೋಲಿಯನು ಸಾಬರ ಮನೆ ಬಾಗಿಲಲಿ

ಕೊಡಲೇ ಯಾರಿಗಾದರೂ ದಾರಿಹೋಕರಿಗೆ?

ಕೊಡಬಹುದೇ ಆದನು ಯಾರಿಗಾದರೂ

ಆ  ಒಲವನು ಬಲವನು

ಪಿತೃ ವಾತ್ಸಲ್ಯದ ಮಾತೃತ್ವವನು

 

ನೆನೆಸಿಕೊಂಡಾಗ ಈಗಲೂ

ಕಣ್ಣಂಚಿನಲಿ ತೇವ

ಮೊರದ ತುಂಬಾ ಬದುಕಿನ ಪಸೆಯ

ಹಸೆಯ ಬರೆದ ಬೇಸಿಗೆ ಹಕ್ಕಿಯ ವಿದಾಯ

 

ಬಸವರಾಜಣ್ಣ. . . .

   ನೀವು ಕೊಟ್ಟ ಮೊರಹೇಳುತ್ತೆ

ಮಿಡಿಯುತ್ತೆ ಸಹಸ್ರ  ಆರೋಪಗಳೆದುರು

ಒಂಟಿಯಾಗಿ ನಿಲ್ಲುತ್ತೆ ,ದ್ವೇಷದ ಎಲ್ಲಾ

  ಭಾಷೆಗಳ ಕವುಚಿ ಹಾಕುತ್ತೆ  ಮುಂಜಾವಿನ

  ಹೊಂಬೆಳಕಿನೊಂದಿಗೆ  ಪ್ರೀತಿಯ ನಿರ್ಮಲ

ಅಲೆಗಳು ಮೊರದ ತುಂಬಾ

ತೂರುತ್ತಿರುತ್ತವೆ

 

ವೈರಲ್ ಆಗಿದ್ದ ವಿಷಯ:

 

2023ರಲ್ಲಿ ಹಾಸನದಲ್ಲಿ ನಡೆದಿದ್ದ ಜನಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ್ದ ಅವರು, ಕನ್ನಡ ಭಾಷೆಗೆ ಭುವನೇಶ್ವರಿ ಎಂಬ ತಾಯಿಯ ಸ್ವರೂಪ ಕೊಟ್ಟು, ಹಿಂದೂಗಳು ಶುಭಕಾರ್ಯಗಳಿಗೆ ಬಳಸುವ ಅರಿಶಿನ, ಕುಂಕುಮದ ಬಣ್ಣಗಳನ್ನೇ ಬಳಸಿ ಬಾವುಟವನ್ನಾಗಿಸಿದ್ದು ವಿಪರ್ಯಾಸ ಎಂದು ಅವರು ಹೇಳಿದ್ದ ವೀಡಿಯೋ ವೈರಲ್ ಆಗಿತ್ತು.

Related Articles

Comments (0)

Leave a Comment